ಬೆಂಗಳೂರು: ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಪೂರ್ಣಾವಧಿಗೆ ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಕೇಳಿಬಂದಿದ್ದು, ಕಳೆದ ಕೆಲ ದಿನಗಳಿಂದ ಈ ವಿಚಾರ ಭಾರೀ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಅವರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ಕಾಂಗ್ರೆಸ್‌ನ ಪ್ರಭಾವಿ ಶಾಸಕರೊಬ್ಬರನ್ನು ಕೂರಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಮತ್ತೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಹೈಕಮಾಂಡ್‌ಗೆ ಬೇಡಿಕೆಯಿಟ್ಟಿದ್ದಾರೆ.
ರಾಜ್ಯದಲ್ಲಿ ಪಕ್ಷ ಸಂಘಟನೆ ಕೆಲಸ ಕಡಿಮೆಯಾಗಿದೆ. ಎಲ್ಲಾ ಕಾರ್ಯಾಧ್ಯಕ್ಷರು ಮಂತ್ರಿಗಳಾಗಿದ್ದೇವೆ. ಕಾರ್ಯಾಧ್ಯಕ್ಷರು ಮೊದಲಿನಂತೆ ಕೆಲಸ ಮಾಡುತ್ತಿಲ್ಲ. ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಎಲ್ಲರೂ ಒತ್ತಾಯ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ನೇಮಿಸುವ ಅವಶ್ಯಕತೆಯಿದೆ. ನನ್ನ ಪರ ಸಾಕಷ್ಟು ಜನರು ಧ್ವನಿ ಎತ್ತಿದ್ದಾರೆ. ಡಿಕೆಶಿ ಅವರನ್ನು ಮುಂದುವರಿಸುತ್ತಾರೋ ಅಥವಾ ಬೇರೆಯವರನ್ನು ನೇಮಿಸುತ್ತಾರೋ ಗೊತ್ತಿಲ್ಲ. ಈ ಬಗ್ಗೆ ಹೈಕಮಾಂಡ್ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಶಾಸಕರೆಲ್ಲರ ಅಭಿಪ್ರಾಯ ಕೇಳಿ. ಅಧ್ಯಕ್ಷರ ಕುರಿತು ಅಭಿಪ್ರಾಯ ಸಂಗ್ರಹಿಸಬೇಕು. ಎಲ್ಲಾ ಕಾಂಗ್ರೆಸ್ ಶಾಸಕರ ಅಭಿಪ್ರಾಯ ಆಲಿಸಿ ತೀರ್ಮಾನಿಸಬೇಕು. ಶಾಸಕರು ಅಭಿಪ್ರಾಯದಂತೆ ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸಲಿ. ಶೀಘ್ರದಲ್ಲೇ ಈ ಬಗ್ಗೆ ಕಾಂಗ್ರೆಸ್ ನಿರ್ಧಾರ ಮಾಡಲಿ ಎಂದು ಆಗ್ರಹಿಸಿದರು.