ಬೆಂಗಳೂರು: ಪಾಕಿಸ್ತಾನ, ಮುಸಲ್ಮಾನ ವಿಷಯಗಳು ಇಲ್ಲವೆಂದರೆ ಬಿಜೆಪಿಯವರಿಗೆ ರಾಜಕೀಯ ವ್ಯವಹಾರವೇ ಇಲ್ಲ. ಈ ವಿಷಯಗಳೇ ಬಿಜೆಪಿಯವರಿಗೆ ಜೀವಾಳ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಲೇವಡಿ ಮಾಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯಾದಾಗ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಜೋರು ಭಾಷಣ ಮಾಡಿ, ನೀರು ಮತ್ತು ರಕ್ತ ಏಕಕಾಲಕ್ಕೆ ಹರಿಯಲು ಸಾಧ್ಯವಿಲ್ಲ ಎಂದಿದ್ದರು. ಈಗ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡುತ್ತಿದ್ದಾರೆ. ಇದನ್ನು ಬಿಜೆಪಿಯವರು ಏಕೆ ಪ್ರಶ್ನಿಸುತ್ತಿಲ್ಲ ಎಂದು ಕಿಡಿಕಾರಿದ್ದರು.
ಇದನ್ನು ಓದಿ: ಉತ್ತರಾಖಂಡ್‌ನಲ್ಲಿ ಭೀಕರ ಪ್ರವಾಹ: ತಗ್ಗು ಪ್ರದೇಶಗಳು ಸಂಪೂರ್ಣ ಮುಳುಗಡೆ
ಬಿಜೆಪಿಯವರಿಗೆ ನಾಚಿಕೆ, ಮಾನಮರ್ಯಾದೆ ಏನೂ ಇಲ್ಲ. ಪಾಕಿಸ್ತಾನದ ಜೊತೆಗಿನ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಿಬಿಡುತ್ತೇವೆ, ಪಾಕಿಸ್ತಾನವನ್ನು ಮುಗಿಸಿ ಬಿಡುತ್ತೇವೆ, ಹಾಗೇ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದೆಲ್ಲಾ ಹೇಳಿದವರು ಇವತ್ತು ಮಾಡುತ್ತಿರುವುದು ಏನು? ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಪುತ್ರ ಜೈ ಷಾ ಅವರ ಅಧ್ಯಕ್ಷತೆಯಲ್ಲಿರುವ ಭಾರತೀಯ ಕ್ರಿಕೆಟ್ ಮಂಡಳಿ ಪಾಕಿಸ್ತಾನದ ಜೊತೆ ನಮ್ಮ ತಂಡ ಆಟವಾಡಲು ಅವಕಾಶ ನೀಡಿದೆ. ಇದನ್ನು ಯಾಕೆ ಬಿಜೆಪಿಯವರು ವಿರೋಧಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯವರು ಏನೂ ಮಾಡಿದರೂ ಅದು ಅಂಗೀಕೃತ ಎಂಬಂತೆ ವರ್ತಿಸಲಾಗುತ್ತಿದೆ. ಕಾಂಗ್ರೆಸ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರಲ್ಲಿ ಮುಸಲ್ಮಾನರು ಪಾಕಿಸ್ತಾನ ಎಂಬ ಹುಳುಕು ಹುಡುಕಿ ಟೀಕೆ ಮಾಡುತ್ತಾರೆ. ಇದೇ ಬಿಜೆಪಿಯವರ ಜೀವಾಳ. ಇದನ್ನು ಬಿಟ್ಟರೆ ಅವರಿಗೆ ಬದುಕಿಲ್ಲ ಎಂದು ಕಿಡಿಕಾರಿದರು.





