ಚಂಡೀಗಢ : ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2025 ರ ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಲ್ಲಿ ಸೋಲಿಸಿದೆ. ಈ ಮೂಲಕ ಆರ್‌ಸಿಬಿ ತಂಡ 9 ವರ್ಷಗಳ ಬಳಿಕ ಐಪಿಎಲ್ ಫೈನಲ್ ಪ್ರವೇಶಿಸಿದೆ.
ಇಲ್ಲಿನ ಮುಲ್ಲನ್‌ಪುರದ ಮಹರಾಜ ಯದುವೀರ್ ಸಿಂಗ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತು. ತಂಡದ ನಾಯಕ ರಜತ್ ಪಾಟಿದಾರ್ ಭರವಸೆಯನ್ನು ಹುಸಿಗೊಳಿಸದ ಬೌಲರ್‌ಗಳು ಕೇವಲ 14.1 ಓವರ್‌ಗಳಲ್ಲಿ ಪಂಜಾಬನ ಎಲ್ಲಾ ವಿಕೆಟ್‌ಗಳನ್ನು ತರಗೆಲೆಗಳಂತೆ ಬೀಳಿಸಿದರು.
14.1 ಓವರ್‌ಗಳಲ್ಲಿ ಕೇವಲ 101 ಗಳಿಸಿ ಪಂಜಾಬ್ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಆರ್‌ಸಿಬಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿ ಗೆದ್ದು ಬೀಗಿತು. ಈ ಮೂಲಕ 2009, 2011 ಮತ್ತು 2016ರ ಬಳಿಕ ನಾಲ್ಕನೇ ಬಾರಿಗೆ ಆರ್‌ಸಿಬಿ ಫೈನಲ್ ತಲುಪಿದೆ. ಇದರಿಂದ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಸಂತಸ ಮೂಡಿಸಿದ್ದು, `ಈ ಬಾರಿ ಕಪ್ ನಮ್ದೇʼ ಎನ್ನುವ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಈ ಸೋಲಿನ ಹೊರತಾಗಿಯೂ ಪಂಜಾನ್‌ಗೆ ಮಗದೊಂದು ಅವಕಾಶ ಇರಲಿದ್ದು, ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಲಿಮಿನೇಟರ್ ವಿಜೇತ ತಂಡದ ಸವಾಲನ್ನು ಎದುರಿಸಲಿದೆ.
ಫೈನಲ್ ಪಂದ್ಯವು ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.