Mysore
23
overcast clouds

Social Media

ಶನಿವಾರ, 19 ಏಪ್ರಿಲ 2025
Light
Dark

ಯುಎಫ್‌ಸಿ 294: ಅಲೆಕ್ಸಾಂಡರನ್ನು ಎರಡನೇ ಬಾರಿ ಸೋಲಿಸಿದ ಇಸ್ಲಾಮ್

ಅಬುಧಾಬಿ : ಅಬುಧಾಬಿಯಲ್ಲಿ ನಡೆದ ಯುಎಫ್‌ಸಿ 294 ನೇ ಪಂದ್ಯಾಕೂಟದಲ್ಲಿ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವೊಲ್ಕಾನೋವ್ಸ್ಕಿ ವಿರುದ್ಧ ಇಸ್ಲಾಂ ಮಖಚೇವ್ ಭರ್ಜರಿ ಗೆಲುವು ಸಾಧಿಸಿದ್ದು, ಮೊದಲ ಸುತ್ತಿನ 3.06ನೇ ನಿಮಿಷದಲ್ಲೇ ನಾಕೌಟ್ ಮಾಡಿದ್ದಾರೆ. ಆ ಮೂಲಕ ಲೈಟ್ ವೈಟ್ ಚಾಂಪಿಯನ್ ಬೆಲ್ಟ್ ಅನ್ನು ಉಳಿಸಿಕೊಂಡಿದ್ದಾರೆ.

ಮಿಡ್ಲ್‌ ವೇಯ್ಟ್ ಶ್ರೇಣಿಯಲ್ಲಿ ಕಮರು ಉಸ್ಮಾನ್ ಮತ್ತು ಹಂಝತ್ ಚಿಮೇವ್ ನಡುವೆ ನಡೆದ ಪಂದ್ಯದಲ್ಲಿ ಹಂಝತ್ ಮೊದಲ ಸುತ್ತಿನಲ್ಲೇ ಮುನ್ನಡೆ ಸಾಧಿಸಿದ್ದು, ಒಟ್ಟು ಮೂರು ಸುತ್ತಿನಲ್ಲಿ ಜಯಗಳಿಸಿದ್ದಾರೆ. ಆ ಮೂಲಕ ಯುಎಫ್‌ಸಿಯಲ್ಲಿ ತಮ್ಮ ಅಜೇಯ ದಾಖಲೆಯನ್ನು ಉಳಿಸಿಕೊಂಡಿದ್ದಾರೆ.

ಪಾಲೊ ಕೋಸ್ಟಾ ವಿರುದ್ಧ ಹಂಝತ್ ಚಿಮೇವ್ ಪಂದ್ಯವನ್ನು ಮೊದಲು ನಿರ್ಧರಿಸಲಾಗಿತ್ತು. ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ಕೋಸ್ಟಾ ಅವರು ಹೊರಗೆ ಉಳಿದಿದ್ದು, ಕಡೆ ಕ್ಷಣದಲ್ಲಿ ಕಮರು ಉಸ್ಮಾನ್ ರಿಂಗ್ ಗೆ ಪ್ರವೇಶಿಸಿದ್ದಾರೆ.

ಇದೇ ವಿಭಾಗದಲ್ಲಿ ನಡೆದ ಇಕ್ರಮ್ ಅಲಿಸ್ಕೆರೊವ್ ಮತ್ತು ವಾರ್ಲಿ ಅಲ್ವೆಸ್ ನಡುವಿನ ಪಂದ್ಯದಲ್ಲಿ ಮೊದಲ ಸುತ್ತಿನಲ್ಲೇ ಇಕ್ರಮ್ ತನ್ನ ಎದುರಾಳಿಯನ್ನು ಮಣಿಸಿದ್ದು, ನಾಕ್ ಔಟ್ ಮೂಲಕ ಗೆಲುವು ಸಾಧಿಸಿದ್ದಾರೆ. ಬಾಂಟಮ್ ವೇಟ್ ವಿಭಾಗದಲ್ಲಿ ಸೈದ್ ನೂರ್ ಮಹಮದೋವ್ ಮತ್ತು ಮುಈನ್ ಗಫೂರೋವ್ ಪಂದ್ಯಾಟದಲ್ಲಿ ಸೈದ್ ಸಬ್ಮಿಶನ್ ಮೂಲಕ ಮೊದಲ ಸುತ್ತಿನಲ್ಲೇ ಗೆಲುವು ಸಾಧಿಸಿದ್ದಾರೆ.

ಫ್ಲೈವೈಟ್‌ನಲ್ಲಿ ಟಿಮ್ ಎಲಿಯಟ್ ವಿರುದ್ಧ ಸೆಣೆಸಿದ ಮುಹಮ್ಮದ್ ಮೊಕಾವ್ ಮೂರನೇ ಸುತ್ತಿನಲ್ಲಿ ಸಬ್ಮಿಶನ್ ಮೂಲಕ ಬೆಲ್ಟ್ ಪಡೆದುಕೊಂಡಿದ್ದಾರೆ. ಮಹಮ್ಮದ್ ಯಹ್ಯಾ ಮತ್ತು ಟ್ರೇವರ್ ಪೀಕ್ ನಡುವಿನ ಪಂದ್ಯಾಟದಲ್ಲಿ ಟ್ರೇವರ್ ಜಯಶಾಲಿಯೆಂದು ತೀರ್ಪುಗಾರರು ಘೋಷಿಸಿದ್ದಾರೆ.

ಭಾರತದ ಎಮ್‌ಎಮ್‌ಎ ಪಟು ಅಂಶುಲ್ ಜುಬಿಲಿ ಅವರು ಮೈಕ್ ಬ್ರೀಡೆನ್ ವಿರುದ್ಧ ಸೋಲನ್ನು ಒಪ್ಪಿಕೊಂಡಿದ್ದಾರೆ. ಅಂಶುಲ್ ಜುಬಿಲಿ ಅವರು ಅಂಕಗಳಲ್ಲಿ ಮುನ್ನಡೆಯಲ್ಲಿದ್ದರೂ, ಮೈಕ್ ಬ್ರಿಡೇನ್ ಅವರ ಬಲವಾದ ಏಟಿಗೆ ನಾಕ್ಔಟ್ ಆದ್ದರಿಂದ ಸೋಲನುಭವಿಸಬೇಕಾಗಿ ಬಂದಿದೆ.

ಫೆಲೆಸ್ತೀನ್‌ಗೆ ಬೆಂಬಲ ಘೋಷಿಸಿದ ವಿಜಯಿಗಳು

ರಷ್ಯನ್ ವೃತ್ತಿಪರ ಎಮ್‌ಎಮ್ಎ ಪಟು ಹಂಝತ್ ಚಿಮೇವ್ ಗೆಲುವಿನ ಬಳಿಕ ಫೆಲೆಸ್ತೀನಿಯನ್ನರಿಗೆ ಬೆಂಬಲ ಘೋಷಿಸಿದ್ದು,“ವಿಶ್ವದಲ್ಲಿ ಮಕ್ಕಳು ಸಾಯುತ್ತಿದ್ದರೆ ನನಗೆ ಇಲ್ಲಿ ಸಂತೋಷ ಪಡಲು ಸಾಧ್ಯವಾಗುತ್ತಿಲ್ಲ. ಅದು ಉಕ್ರೇನ್, ಸಿರಿಯಾ, ಅಫ್ಘಾನಿಸ್ತಾನ, ಫೆಲೆಸ್ತೀನ್ ಆಗಿರಲಿ, ಮಕ್ಕಳು ಸಾಯುವುದನ್ನು ನೋಡಲಾಗುವುದಿಲ್ಲ. ಜಗತ್ತಿನಲ್ಲಿ ಒಳ್ಳೆಯದಾಗಲಿ ಎಂದು ನಾನು ಭಾವಿಸುತ್ತೇನೆ. ಕ್ರಿಶ್ಚಿಯನ್, ಮುಸ್ಲಿಂ, ಯಹೂದಿ ಯಾರೇ ಆದರೂ ಪರವಾಗಿಲ್ಲ. ದಯವಿಟ್ಟು, ಒಟ್ಟಿಗೆ ಇರಿ. ನಾವು ಈ ಜಗತ್ತಿನಲ್ಲಿ ಬದುಕೋಣ. ನಾವು ಸಂತೋಷವಾಗಿರೋಣ” ಎಂದು ಹಂಝತ್ ಹೇಳಿದ್ದಾರೆ.

ಇನ್ನು, ಅಲೆಕ್ಸಾಂಡರ್ ಜೊತೆಗಿನ ರಿಮ್ಯಾಚ್ ನಲ್ಲಿಯೂ ಗೆಲುವು ಸಾಧಿಸಿದ ಇಸ್ಲಾಮ್ ಮಖಚೇವ್, ಯುದ್ಧಪೀಡಿತ ಫೆಲೆಸ್ತೀನ್ ಗೆ ಬೆಂಬಲ ಘೋಷಿಸಿದ್ದಾರೆ. ಫೆಲೆಸ್ತೀನಿಯನ್ನರ ಪರಿಸ್ಥಿತಿಯ ಕಾರಣ ತಮ್ಮ ಗೆಲುವನ್ನು ಸಂಭ್ರಮಿಸದೆ ಇಸ್ಲಾಮ್ ತೆರಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ