ಪಂಜು ಗಂಗೊಳ್ಳಿ
ಜನರು ಬಿಳೀ ಮರಳಿನ ಬೀಚ್, ಗುಡ್ಡ, ಪರ್ವತಗಳ ತಪ್ಪಲು, ಹಸಿರು ದಟ್ಟ ಕಾಡು, ಚಾರಿತ್ರಿಕ ಕೋಟೆ ಕೊತ್ತಲ, ಪುರಾತನ ದೇವಸ್ಥಾನ, ಚರ್ಚ್, ಮಸೀದಿ ಮೊದಲಾದ ಖುಷಿ ಕೊಡುವ ಜಾಗಗಳಿಗೆ ಪ್ರವಾಸ ಹೋಗುವುದು ಸಾಮಾನ್ಯ. ಆದರೆ, ಯಾರಾದರೂ ಹರಕು ಮುರುಕಲಿನ ಮನೆ, ಕೊಳೆತು ನಾರುವ ಚರಂಡಿ, ರೋಗ ರುಜಿನ, ಅಪರಾಧ ಜಗತ್ತು, ವೇಶ್ಯಾವಾಟಿಕೆ, ಅನೈತಿಕ ಚಟುವಟಿಕೆ, ದಟ್ಟ ದಾರಿದ್ರ್ತ್ಯದ ಬಡತನ ಮೊದಲಾದ ಮನಸ್ಸಿಗೆ ನೋವು, ಕಹಿ ಅನುಭವ ನೀಡುವ ಚಟುವಟಿಕೆಗಳು ನಡೆಯುವ ಜಾಗಗಳನ್ನು ನೋಡಲು ಪ್ರವಾಸ ಹೋಗುತ್ತಾರೆಯೇ? ಮುಂಬೈ ಎಂಬ ಮಾಯಾನಗರಿಯಲ್ಲಿ ಇಂತಹದ್ದೊಂದು ಪ್ರವಾಸ ಜನಪ್ರಿಯವಾಗಿದೆ. ಇದಕ್ಕೆ ‘ಸ್ಲಮ್ ಟೂರಿಸಂ’ಅಥವಾ ‘ಪವರ್ಟಿ ಟೂರಿಸಂ’ ಎಂಬ ಒಂದು ಹೆಸರೂ ಇದೆ. ಹೆಸರೇ ಸೂಚಿಸುವಂತೆ ಇದು ಕೊಳೆಗೇರಿಗಳ ಬಡವರ ಜೀವನವನ್ನು ಶ್ರೀಮಂತ ವಿದೇಶಿ ಪ್ರವಾಸಿಗರಿಗೆ ತೋರಿಸುವ ಪ್ರವಾಸ.
ವಿದೇಶಿ ಪ್ರವಾಸಿಗರು ಮುಂಬೈಗೆ ಬಂದಾಗ ಅವರು ಇಲ್ಲಿನ ಗೇಟ್ ವೇ ಆಫ್ ಇಂಡಿಯಾ, ತಾಜ್ ಹೋಟೆಲ್, ವಿಕ್ಟೋರಿಯಾ ರೈಲ್ವೇ ಟರ್ಮಿನಲ್ (ಈಗ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್), ಮಹಾಕಾಳಿ ಕೇವ್ಸ್, ಎಲಿಫೆಂಟಾ ಕೇವ್ಸ್, ಫ್ಲೋರಾ ಫೌಂಟನ್, ಬ್ರಿಟಿಷ್ ಕಾಲದ ಕಟ್ಟಡಗಳು ಮೊದಲಾದವುಗಳನ್ನು ಮಾತ್ರ ನೋಡಿ ಹೋಗುವುದಿಲ್ಲ. ಅವರುಗಳಿಗೆ ಮುಂಬೈಯ ಸ್ಲಮ್‌ಗಳೂ ಪ್ರವಾಸಿ ತಾಣಗಳು. ಈ ಸ್ಲಮ್ಮುಗಳಲ್ಲಿರುವ ಬಡತನದ ದರ್ಶನ ಮಾಡಿಸಲು ಟೂರ್ ಆಪರೇಟರ್‌ಗಳೂ ಇದ್ದಾರೆ. ಈ ಟೂರ್ ಆಪರೇಟರ್‌ಗಳು ನಾಲ್ಕೈದು ಜನ ವಿದೇಶಿಗರ ಸಣ್ಣ ಸಣ್ಣ ಗುಂಪುಗಳನ್ನು (ಹೆಚ್ಚು ಪ್ರವಾಸಿಗರಿರುವ ದೊಡ್ಡ ಗುಂಪುಗಳಾದರೆ ಸ್ಲಮ್ಮುಗಳ ಕಿರು ದಾರಿಗಳಲ್ಲಿ ಸಂಚರಿಸುವುದು ಕಷ್ಟ) ಫುಟ್‌ಪಾತಿನ ಮೇಲೆ, ಮೇಲು ಸೇತುವೆಗಳ ಕೆಳಗೆ, ಹಾಳು ಬಿದ್ದ ಕಟ್ಟಡಗಳ ಕತ್ತಲ ಮೂಲೆಗಳಲ್ಲಿ ಬದುಕುವ ದಟ್ಟ ದರಿದ್ರರ ಬಡತನದ ದರ್ಶನವನ್ನು ಮಾಡಿಸುತ್ತಾರೆ. ಈ ದರಿದ್ರ ನಾರಾಯಣರ ಅನಕ್ಷರಸ್ಥತೆ, ಬಡತನ, ರೋಗ ರುಜಿನ, ನಿರುದ್ಯೋಗ, ದುಶ್ಚಟ, ಕೊಳಕುತನ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಈ ಪ್ರವಾಸಿಗರು ಅರೆ ಬೆತ್ತಲೆ ಮಕ್ಕಳ, ಹರಿದು ತೇಪೆ ಹಾಕಿದ ಬಟ್ಟೆ ತೊಟ್ಟ ಹೆಂಗಸರ, ರೋಗ ಹತ್ತಿಸಿಕೊಂಡೋ ಅಥವಾ ಕುಡಿದು ಪ್ರಜ್ಞೆ ತಪ್ಪಿಯೋ ಎಲ್ಲೆಂದರಲ್ಲಿ ಬಿದ್ದು ಹೊರಳಾಡುವ ಗಂಡಸರ ಫೋಟೋ, ವಿಡಿಯೋ ಕ್ಲಿಕ್ಕಿಸುತ್ತಾರೆ. ಕೆಲವು ಟೂರ್ ಆಪರೇಟರ್ ಗಳು ಪ್ರವಾಸಿಗರಿಗೆ ಇಂತಹ ಜಾಗಗಳಲ್ಲಿ ಫೋಟೋ, ವಿಡಿಯೋ ಮಾಡುವುದನ್ನು ನಿಷೇಧಿಸಿದರೂ ಈಗಿನ ಮೊಬೈಲ್ ಕ್ಯಾಮೆರಾ ಕಾಲದಲ್ಲಿ ಇಂತಹ ನಿಷೇಧಗಳು ಎಷ್ಟು ಪರಿಣಾಮಕಾರಿ ಎಂಬುದು ಎಲ್ಲರಿಗೂ ತಿಳಿದ ಸಂಗತಿ.
ಮುಂಬೈಯ ಸ್ಲಮ್ ಟೂರಿಸಂ ಅಥವಾ ಪವರ್ಟಿ ಟೂರಿಸಂನಲ್ಲಿ ಮೊದಲ ಆಕರ್ಷಣೆ ಸಹಜವಾಗಿಯೇ ಧಾರಾವಿ. ಧಾರಾವಿಗೆ ಭೇಟಿ ಕೊಡದೆ ಯಾವುದೇ ಸ್ಲಮ್ ಟೂರಿಸಂ ಪೂರ್ಣಗೊಳ್ಳುವುದಿಲ್ಲ. ೨೦೦೮ರಲ್ಲಿ ‘ಸ್ಲಮ್ ಡಾಗ್ ಮಿಲಿಯನೇರ್’ ಎಂಬ ಸಿನಿಮಾ ಬಂದ ನಂತರ ಧಾರಾವಿ ಅಂತಾರಾಷ್ಟ್ರೀಯವಾಗಿ ಪರಿಚಿತವಾಗಿದೆ. ಕ್ರಿಸ್ ವೇ ಎಂಬ ಒಬ್ಬ ಬ್ರಿಟಿಷ್ ಉದ್ಯಮಿಯ ಮಾಲೀಕತ್ವದ ‘ರಿಯಾಲ್ಟಿ ಟೂರ‍್ಸ್ ಆಂಡ್ ಟ್ರಾವೆಲ್ಸ್’ ಎಂಬ ಸಂಸ್ಥೆಯು ೨೦೦೬ರಲ್ಲಿ ಕೃಷ್ಣ ಪೂಜಾರಿ ಎಂಬ ಮುಂಬೈ ನಿವಾಸಿಯೊಬ್ಬರನ್ನು ಜೊತೆಗಾರರನ್ನಾಗಿಸಿಕೊಂಡು ಮೊತ್ತ ಮೊದಲ ಬಾರಿಗೆ ‘ಸ್ಲಮ್ ಟೂರಿಸಂ’ ಅನ್ನು ಶುರು ಮಾಡಿತು. ಅದು ಯಶಸ್ವಿಯಾದುದನ್ನು ನೋಡಿ, ನಂತರದ ವರ್ಷಗಳಲ್ಲಿ ಇನ್ನೂ ಹಲವರು ಸ್ಲಮ್ ಟೂರಿಸಂ ಅನ್ನು ಶುರು ಮಾಡಿದರು. ಧಾರಾವಿ ಏಷ್ಯಾದ ಅತ್ಯಂತ ದೊಡ್ಡ ಸ್ಲಂ ಎಂಬ ಕುಖ್ಯಾತಿ ಪಡೆದ ಮುಂಬೈಯ ಒಂದು ಕೊಳೆಗೇರಿ ಪ್ರದೇಶ. ಇದು ಮುಂಬೈಯ ಉಪನಗರವಾದ ಸಯನ್ ಎಂಬಲ್ಲಿ ಇದೆ. ಸಯನ್‌ನ್ನು ಮರಾಠಿಯಲ್ಲಿ ಶೀವ್ ಅನ್ನುತ್ತಾರೆ. ಮರಾಠಿಯಲ್ಲಿ ಶೀವ್ ಅಂದರೆ ಗಡಿ ಎಂದರ್ಥ. ಹಿಂದೆ ಶೀವ್ ಮುಂಬೈಯ ಗಡಿಯಾಗಿತ್ತು. ಭಾರತೀಯ ಸಮಾಜದಲ್ಲಿ ಕೆಳ ಜಾತಿಗಳು ಅನಿಸಿಕೊಂಡ ಸಮುದಾಯಗಳು ಕೇರಿಗಳಾಗಿ ಊರ ಗಡಿಗಳ ಹೊರಗೆ ಬದುಕುತ್ತಿದ್ದುದು ಹಾಗೂ ಹಲವು ಕುಗ್ರಾಮಗಳಲ್ಲಿ ಈಗಲೂ ಹೀಗೆಯೇ ಬದುಕುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅಂತೆಯೇ ಆಗ ಕುಂಬಾರವಾಡಾ, ಕೋಳಿವಾಡಾ ಮೊದಲಾಗಿ ವಿವಿಧ ಸಮುದಾಯಗಳ ಕೇರಿಗಳನ್ನುಳ್ಳ ಧಾರಾವಿ ಮುಂಬೈಯ ಗಡಿಯಾಚೆಗಿನ ಪ್ರದೇಶವಾಗಿತ್ತು. ನಂತರದ ದಿನಗಳಲ್ಲಿ ಮುಂಬೈ ಈ ಗಡಿಯನ್ನೂ ಮೀರಿ ಬೆಳೆದು, ಧಾರಾವಿ ಈಗ ಮುಂಬೈ ಮಾಹಾನಗರದ ಒಳಗೆ ಬಂದಿದೆ! ಮುಂಬೈ ನಗರದ ಒಳಗೆ ಬಂದಿರುವ ಕಾರಣಕ್ಕೇ ಧಾರಾವಿ ಈಗ ಅದಾನಿಯಂಥ ಉದ್ಯಮಿಗಳಿಗೆ ಚಿನ್ನದ ಮೊಟ್ಟೆ ಇಡುವ ರಿಯಲ್ ಎಸ್ಟೇಟ್ ಕೋಳಿಯಂತೆ ಕಾಣಿಸುತ್ತಿದೆ.
ಹತ್ತು ಲಕ್ಷಕ್ಕೂ ಹೆಚ್ಚು ಜನರಿರುವ, ೫೯೦ ಎಕರೆ ವಿಸ್ತೀರ್ಣವುಳ್ಳ ಈ ಧಾರಾವಿಯಲ್ಲಿ ಜನರು ಮಾಡದ ಕೆಲಸವಿಲ್ಲ. ಕುಂಬಾರಿಕೆ, ಚರ್ಮದ ಕೆಲಸ, ಬಟ್ಟೆ ತಯಾರಿಕೆ, ಬ್ಯಾಗ್ ತಯಾರಿಕೆ, ಕರಕುಶಲ ವಸ್ತುಗಳ ತಯಾರಿಕೆ, ಬೇಕರಿ, ಪ್ಲಾಸ್ಟಿಕ್ ರೀಸೈಕ್ಲಿಂಗ್ ಘಟಕ, ವಾಹನ ಬಿಡಿ ಭಾಗ ತಯಾರಿಕೆ ಮೊದಲಾಗಿ ನೀವು ಯಾವ ತಯಾರಿಕಾ ಚಟುವಟಿಕೆಯನ್ನು ಬೇಕಾದರೂ ಹೆಸರಿಸಿ, ಅದು ಈ ಧಾರಾವಿಯಲ್ಲಿ ನೋಡಲು ಸಿಗುತ್ತದೆ. ಇಲ್ಲಿ ಸುಮಾರು ೧೨ ಸಾವಿರ ಕೈಗಾರಿಕಾ ಘಟಕಗಳಿವೆ. ಜೊತೆಯಲ್ಲಿ, ಅಂಡರ್ ಗ್ರೌಂಡ್ ಚಟುವಟಿಕೆ, ವೇಶ್ಯಾವಾಟಿಕೆ, ಬೆಟ್ಟಿಂಗ್, ಮಟ್ಕಾ, ಕಳ್ಳಬಟ್ಟಿ ತಯಾರಿಕೆ ಮೊದಲಾದ ಕಾನೂನು ಬಾಹಿರ ಚಟುವಟಿಕೆಗಳೂ ಯಥೇಚ್ಛವಾಗಿ ನಡೆಯುತ್ತವೆ. ಹಲವು ಸರ್ಕಾರೇತರ ಸಂಸ್ಥೆಗಳೂ ಇಲ್ಲಿ ಕಾರ್ಯನಿರತವಾಗಿವೆ. ಕಸದ ರಾಶಿಯನ್ನು ತುಂಬಿಕೊಂಡ ಕೊಳೆತು ನಾರುವ ಚರಂಡಿಗಳು ಇಡೀ ಧಾರಾವಿಯನ್ನು ಗಬ್ಬು ವಾಸನೆಯಲ್ಲಿ ಮುಳುಗಿಸಿರುತ್ತವೆ. ಕೆಲವೇ ಕೆಲವು ಕಾಂಕ್ರೀಟ್ ಕಟ್ಟಡಗಳನ್ನು ಹೊರತು ಪಡಿಸಿದರೆ ಧಾರಾವಿಯಲ್ಲಿ ಇರುವುದೆಲ್ಲ ಸಿಮೆಂಟ್ ಶೀಟ್, ತಗಡು, ಪ್ಲಾಸ್ಟಿಕ್ ಹೊದಿಕೆಗಳಿಂದ ಮಾಡಿದ ಶೆಡ್ಡುಗಳಂತಹ ಮನೆ, ಅಂಗಡಿ, ಕಾರ್ಖಾನೆ, ಹೋಟೆಲು, ಸಾರ್ವಜನಿಕ ಶೌಚಾಲಯ, ಶಾಲೆ ಇತ್ಯಾದಿಗಳು. ಹೆಚ್ಚಿನ ಮನೆಗಳಿಗೆ ಒಂದು ಬಾಗಿಲು ಇರುತ್ತದೆ. ಕಿಟಕಿಗಳು ಇರುವುದಿಲ್ಲ. ಎರಡು ಮನೆಗಳ ನಡುವೆ ಒಬ್ಬ ವ್ಯಕ್ತಿ ಬಹಳ ಕಷ್ಟದಿಂದ ನಡೆದು ಹೋಗಬಹುದಾದಷ್ಟು ಕಿರಿದಾದ ದಾರಿ. ಇಬ್ಬರು ಎದುರು ಬದುರಾಗಿ ಬಂದರೆ ಇಬ್ಬರೂ ಸರ್ಕಸ್ ಮಾಡುತ್ತ ಒಬ್ಬರಿಗೊಬ್ಬರು ದಾರಿ ಮಾಡಿಕೊಡಬೇಕು.
ಧಾರಾವಿಯ ಸ್ಲಂ ಟೂರನ್ನು ಸಾಮಾನ್ಯವಾಗಿ ಎರಡು ಭಾಗಗಳನ್ನಾಗಿ ವಿಂಗಡಿಸುತ್ತಾರೆ-ಕೈಗಾರಿಕೆಗಳು ನಡೆಯುವ ಪ್ರದೇಶ ಮತ್ತು ಜನ ವಸತಿ ಇರುವ ಪ್ರದೇಶ. ಜನವಸತಿ ಭಾಗದಲ್ಲಿ ಸಾಮಾನ್ಯವಾಗಿ ಟೂರ್ ಆಪರೇಟರ್ ಗಳು ಟೂರಿನ ಕೊನೆಯಲ್ಲಿ ಯಾವುದಾದರೂ ಒಂದು ಮನೆಯಲ್ಲಿ ಪ್ರವಾಸಿಗರಿಗೆ ಆ ಮನೆಯವರೊಂದಿಗೆ ಊಟ ಮಾಡುವ ಕಾರ್ಯಕ್ರವನ್ನು ನಿಗದಿ ಮಾಡಿರುತ್ತಾರೆ ಅಥವಾ ಕುಂಬಾರವಾಡಿಯಲ್ಲಿ ಮಡಕೆ ಮಾಡುವ ‘ಲೈವ್ ಡೆಮಾಸ್ಟ್ರೇಷನ್’ಗೆ ಕರೆದುಕೊಂಡು ಹೋಗುತ್ತಾರೆ. ಪ್ರತಿಯೊಬ್ಬ ಪ್ರವಾಸಿಗೂ ೭೦೦-೧,೨೦೦ ರೂ. ದರ ವಿಧಿಸಲಾಗುತ್ತದೆ. ಕೆಲವು ಟೂರ್ ಆಪರೇಟರ್‌ಗಳು ಸ್ಲಮ್ ಟೂರಿಸಂನಿಂದ ಬರುವ ಲಾಭಾಂಶದಲ್ಲಿ ಒಂದಷ್ಟನ್ನು ಧಾರಾವಿಯ ಬಡವರ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಿಗಾಗಿ ವ್ಯಯಿಸುತ್ತೇವೆ ಎಂದು ಹೇಳಿಕೊಳ್ಳುತ್ತಾರೆ.
ಇನ್ನೊಬ್ಬರ ಬಡತನವನ್ನು ಪ್ರದರ್ಶನಕ್ಕಿಡುವುದು ಮತ್ತು ಉಳ್ಳವರು ಅದನ್ನು ನೋಡುವುದು ನೈತಿಕವಾಗಿ ಎಷ್ಟರಮಟ್ಟಿಗೆ ಸರಿ ಎಂಬುದು ಸೂಕ್ಷ್ಮಗ್ರಾಹಿಗಳಿಗಷ್ಟೇ ಕಾಡುವ ಪ್ರಶ್ನೆ! ಅದೇನೇ ಇದ್ದರೂ, ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಎಂದು ಬೀಗುವ ಭಾರತದ ವಾಸ್ತವಿಕತೆಯನ್ನು ಈ ಸ್ಲಮ್ ಟೂರಿಸಂ ಬಹಳ ಚೆನ್ನಾಗಿ ತೆರೆದು ತೋರಿಸುವುದಂತೂ ನಿಜ!