ಹುಣಸೂರು: ಪಾಳು ಬಾವಿಗೆ ಬಿದ್ದಿದ್ದ ಕಾಡುಹಂದಿಯನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹುಣಸೂರು ತಾಲ್ಲೂಕಿನ ಹನಗೋಡು ಗ್ರಾಮದಲ್ಲಿ ಘಟನೆ ನಡೆದಿದ್ದು, ತೋಟದ ತೆರೆದ ಬಾವಿಗೆ ಕಾಡುಹಂದಿಯೊಂದು ಬಿದ್ದು ಚೀರಾಟ ನಡೆಸುತ್ತಿತ್ತು. ಇದನ್ನು ಕಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಡಿಆರ್‌ಎಫ್‌ಓ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಸಿ ಬಲೆಯ ಸಹಾಯದಿಂದ ಕಾಡುಹಂದಿಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಕಾಡುಹಂದಿಯನ್ನು ಮತ್ತೆ ಕಾಡಿಗೆ ಬಿಡಲಾಗಿದೆ.





