ಮದನ್, ಒಡಿಶಾ ರಾಜ್ಯದ ಭುವನೇಶ್ವರದ ‘ನಳಿನಿದೇವಿ ಕಾಲೇಜ್ ಆಫ್ ಎಜುಕೇಷನ್’ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ಮನುಷ್ಯ. ಹೆಂಡತಿ ಹಾಗೂ ಇಬ್ಬರು ಮಕ್ಕಳಿರುವ ಒಂದು ಕೆಳ ಮಧ್ಯಮ ವರ್ಗದ ಸಾಧಾರಣ ಸಂಸಾರ. ಇತರ ಎಲ್ಲಾ ಗೌರವಸ್ಥ ಕೆಳಮಧ್ಯಮ ವರ್ಗದ ಕುಟುಂಬದವರಂತೆ ಮದನರದೂ ಹೆಚ್ಚಿನ ವಿಶೇಷತೆಗಳಿಲ್ಲದ ಜೀವನ ಕ್ರಮ. ಆದರೆ, ಅವರ ಬದುಕಿನಲ್ಲಿ ನಡೆದ ಒಂದು ಚಿಕ್ಕ ಘಟನೆ ಅವರ ಜೀವನ ಕ್ರಮವನ್ನು ಇನ್ನಿಲ್ಲದಂತೆ ಬದಲಾಯಿಸಿತು!
ಅದು 1998ರ ಜನವರಿ ತಿಂಗಳು. ಮದನ್ ಮತ್ತು ಅವರ ಹೆಂಡತಿ ಅಭಾರಾಣಿ ಒಂದು ರಾತ್ರಿ ಸಿನಿಮಾ ನೋಡಿ ವಾಪಸ್ ಬರುತ್ತಿದ್ದರು. ಅವರು ಬರುತ್ತಿದ್ದ ದಾರಿಯಲ್ಲಿನ ಒಂದು ಬೀಡಾ ಅಂಗಡಿ ಬಳಿ ಒಂದಷ್ಟು ಜನ ವೇಶ್ಯೆಯರು, ಕಣ್ಣಿಗೆ ರಾಚುವಂತೆ ಅಲಂಕಾರ ಮಾಡಿಕೊಂಡು, ಗಿರಾಕಿಗಳನ್ನು ಕಾಯುತ್ತ ನಿಂತಿದ್ದರು. ಅಭಾರಾಣಿ ಅಂದಿನವರೆಗೆ ತನ್ನ ಬದುಕಿನಲ್ಲೆಂದೂ ವೇಶ್ಯೆಯರನ್ನು ಕಂಡವರಲ್ಲ. ಅವರು ಆ ಹೆಂಗಸರು ಯಾರು, ಯಾಕೆ ಹಾಗೆ ಅಲಂಕಾರ ಮಾಡಿಕೊಂಡು ಆ ಸರಿ ರಾತ್ರಿಯಲ್ಲಿ ಬೀದಿ ಬದಿಯಲ್ಲಿ ನಿಂತಿದ್ದಾರೆ ಎಂದು ಕೇಳಿದಾಗ ಮದನ್, ಅವರು ಯಾರು, ಯಾಕೆ ನಿಂತಿದ್ದಾರೆ ಎಂದು ಆಕೆಗೆ ಹೇಳುತ್ತಾರೆ. ಅವರು ವೇಶ್ಯೆಯರು ಎಂದು ತಿಳಿದಾಗ ಅಭಾರಾಣಿಗೆ ಅವರ ಬಗ್ಗೆ ಜುಗುಪ್ಸೆ ಹುಟ್ಟಲಿಲ್ಲ. ಬದಲಿಗೆ, ತನ್ನಂತೆಯೇ ಹೆಣ್ಣಾದ ಅವರ ಬದುಕಿನ ಸ್ಥಿತಿ ಬಗ್ಗೆ ಅವರಲ್ಲಿ ಮರುಕ ಹುಟ್ಟುತ್ತದೆ. ಆದರೆ, ಆ ಘಟನೆ ಮುಂದೆ ಅವರ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ ಎಂಬುದನ್ನು ಅವರು ಊಹಿಸಿಯೂ ಇರಲಿಲ್ಲ.
ಮನೆಗೆ ಬಂದ ಅಭಾರಾಣಿ ಆ ವೇಶ್ಯೆಯರ ಬಗ್ಗೆ, ಅವರ ಕೆಲಸದ ಬಗ್ಗೆ ಇನ್ನಷ್ಟು ಹೆಚ್ಚು ವಿವರವಾಗಿ ತಿಳಿದುಕೊಂಡು, ಅವರಿಗೆ ತಾವೇನು ಸಹಾಯ ಮಾಡಬಹುದು ಎಂದು ಮದನ್‌ರಲ್ಲಿ ಚರ್ಚಿಸುತ್ತಾರೆ. ಸಾಮಾಜಿಕ–ಆರ್ಥಿಕ ಪುನರ್ವಸತಿ ಮೂಲಕ ಅವರ ಬದುಕನ್ನು ಬದಲಾಯಿಸಬಹುದು ಎಂದು ತೀರ್ಮಾನಿಸಿ, ಒಂದು ಯೋಜನೆಯನ್ನು ಸಿದ್ಧ ಪಡಿಸುತ್ತಾರೆ. ಅದರಂತೆ ಕಾರ್ಯಪ್ರವೃತ್ತರಾಗಿ, ‘ಒಡಿಶಾ ಪತಿತ ಉದ್ಧಾರ ಸಮಿತಿ’ ಎಂಬ ಒಂದು ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ. ಆದರೆ, ತಾವು ಕೈಗೊಂಡ ಕಾರ್ಯ ಎಷ್ಟು ದುಸ್ತರವಾದುದು ಎಂಬುದು ಅವರಿಗೆ ಮೊದಲ ಪ್ರಯತ್ನದಲ್ಲೇ ಅರಿವಾಗುತ್ತದೆ. ಅವರು ತಮ್ಮ ಯೋಜನೆಯೊಂದಿಗೆ ಸಮೀಪದ ‘ಮಾಲಿ ಸಾಹಿ’ ಎಂಬ ಕೆಂಪುದೀಪ ಪ್ರದೇಶಕ್ಕೆ ಹೋದಾಗ, ಅಲ್ಲಿ ವೇಶ್ಯೆಗಾರಿಕೆ ವೃತ್ತಿ ನಡೆಸುತ್ತಿದ್ದವರು ಮದನ್‌ರನ್ನು ಥಳಿಸಿ, ಅಭಾರಾಣಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಕಳಿಸುತ್ತಾರೆ. ಆ ಘಟನೆಯ ಕಾರಣಕ್ಕೆ, ಮದನ್ ಕೆಲಸ ಮಾಡುತ್ತಿದ್ದ ಕಾಲೇಜಿನ ಆಡಳಿತ ಮಂಡಳಿ ಅವರನ್ನು ಕೆಲಸದಿಂದ ಸಸ್ಪೆಂಡ್ ಮಾಡಿತು. ಆವರೆಗೂ ಕೂಡು ಕುಟುಂಬ ಪದ್ಧತಿ ಅನುಸರಿಸುತ್ತಿದ್ದ ಮದನ್‌ರ ಸಹೋದರರು, ಆಸ್ತಿ ಪಾಲು ಮಾಡಿಕೊಂಡು ಅವರಿಂದ ದೂರವಾದರು. ಆದರೆ, ಮದನ್ ಹಾಗೂ ಅಭಾರಾಣಿ ಇವ್ಯಾವುದರಿಂದಲೂ ವಿಚಲಿತರಾಗದೆ ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಾರೆ.
ಅದೇ ವರ್ಷ, ಅಂದರೆ 1998ರಲ್ಲಿ ‘ಮಾಲಿಸಾಹಿ’ ಕಾಲೋನಿಯಿಂದ ವೇಶ್ಯೆಯರನ್ನು ಎತ್ತಂಗಡಿ ಮಾಡುವ ಕೋರ್ಟು ಆದೇಶ ಬರುತ್ತದೆ. ಆಗ ಮದನ್ ದಂಪತಿಗಳು ಕೋರ್ಟಿಗೆ ಒಂದು ಮನವಿ ಸಲ್ಲಿಸಿ, ಆ ಮಹಿಳೆಯರು ತಾವು ಮಾಡುವ ಉದ್ಯೋಗದ ಕಾರಣ ಅವರಿಗೆ ಬೇರೆ ಪ್ರದೇಶಗಳಲ್ಲಿ ನೆಲಯೂರಲು ಹಲವು ಕಷ್ಟಗಳು ಎದುರಾಗುವುದರಿಂದ ಅವರಿಗೆ ಸೂಕ್ತ ಪುನರ್ವಸತಿಯನ್ನು ಕಲ್ಪಿಸಬೇಕೆಂದು ಕೇಳಿಕೊಳ್ಳುತ್ತಾರೆ. ಮತ್ತು, ಅದೇ ವರ್ಷ ನವೆಂಬರ್ ತಿಂಗಳಲ್ಲಿ ‘ಡೈರೆಕ್ಟೊರೇಟ್ ಆಫ್ ಸೋಷಿಯಲ್ ವೆಲ್ಛೇರ್’ ಸಂಸ್ಥೆಯ ಸಹಾಯದಿಂದ ಒಂದು ಸರ್ವೆಯನ್ನು ನಡೆಸಿ, ‘ಮಾಲಿಸಾಹಿ’ ಕಾಲೋನಿಯಲ್ಲಿ 75 ಕುಟುಂಬಗಳಿಂದ 90 ಜನ ಮಹಿಳೆಯರು ವೇಶ್ಯೆಗಾರಿಕೆಯಿಂದ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಅವರಲ್ಲಿ 50 ಕುಟುಂಬಗಳಿಗೆ ರೇಷನ್ ಕಾರ್ಡ್ ಕೊಡಿಸಲು ಅರ್ಜಿ ಸಲ್ಲಿಸುತ್ತಾರೆ. ಆದರೆ, ಅವರ ಆ ಅರ್ಜಿ ತಿರಸ್ಕರಿ ಸಲ್ಪಡುತ್ತದೆ. ಆಗ ಅಭಾರಾಣಿ, ‘ಭಾರತೀಯ ಪತಿತ ಉದ್ಧಾರ ಸಭಾ’ ದ ಅಧ್ಯಕ್ಷರಿಗೆ ಪತ್ರ ಬರೆದು, ಸರ್ಕಾರದಿಂದ ಅದೇಶ ಹೊರಡಿಸಿ, 72 ಗಂಟೆಗಳಲ್ಲಿ ಆ 50 ಕುಟುಂಬಗಳಿಗೆ ರೇಷನ್ ಕಾರ್ಡುಗಳು ದೊರಕುವಂತೆ ಮಾಡುತ್ತಾರೆ. ಅದಾದ ನಂತರ, ‘ಮಾಲಿಸಾಹಿ’ ಕಾಲೋನಿಗೆ ನಲ್ಲಿ ನೀರಿನ ಸೌಕರ್ಯ ಮತ್ತು ವಿದ್ಯುತ್ ಸಂಪರ್ಕ ದೊರಕಿಸಲು ಪ್ರಯತ್ನಿಸಿ, ಅದರಲ್ಲೂ ಸಫಲರಾಗುತ್ತಾರೆ.
1999ರಲ್ಲಿ ಸುಂಟರಗಾಳಿ ಎದ್ದು, ನೂರಾರು ಜನರ ಮನೆಗಳ ಜೊತೆ ‘ಮಾಲಿಸಾಹಿ’ ಕಾಲೋನಿಯ ವೇಶ್ಯೆಯರ ಮನೆಗಳೂ ಹಾನಿಗೊಳಗಾದವು. ಹಲವರ ಮನೆಗಳು ಸಂಪೂರ್ಣವಾಗಿ ನಾಶವಾದವು. ಆ ಸುಂಟರ ಗಾಳಿಯಲ್ಲಿ ಮದನ್–ಅಭಾರಾಣಿಯ ಮನೆಯೂ ತೀವ್ರವಾಗಿ ಹಾನಿಗೊಂಡಿತು. ಆದರೆ, ಅದನ್ನು ಲೆಕ್ಕಿಸದೆ, ಅವರಿಬ್ಬರು ಮೊದಲು ‘ಮಾಲಿಸಾಹಿ’ ಕಾಲೋನಿಯ ಹೆಂಗಸರಿಗೆ ಬಟ್ಟೆ, ಆಹಾರ ಕೊಡಿಸಿ, ಅವರುಗಳ ಮನೆ ದುರಸ್ತಿಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಿ ನಂತರ ತಮ್ಮ ಮನೆಯ ದುರಸ್ತಿಗೆ ನಿಂತರು. ದಂಪತಿಗಳು ತಮಗಾಗಿ ಪಡುವ ಕಷ್ಟ ಹಾಗೂ ನಿಸ್ವಾರ್ಥ ಸೇವೆಯನ್ನು ಕಂಡು ಮಾಲಿಸಾಹಿ ಕಾಲೋನಿಯ ಜನ ಕೊನೆಗೂ ಅವರನ್ನು ತಮ್ಮವರೆಂದು ಒಪ್ಪಿಕೊಂಡು, ಪ್ರೀತಿಯಿಂದ ಮದನ್ ಬಾಯ್, ಅಭಾ ಬೆಹನ್ ಎಂದು ಕರೆಯತೊಡಗಿದರು. ಮದನ್ ದಂಪತಿಗಳ ಮನೆಯಲ್ಲಿ ಯಾವುದೇ ಹಬ್ಬ ಹರಿದಿನ, ವಿಶೇಷ ಕಾರ್ಯಕ್ರಮಗಳು ನಡೆದಾಗ ಆ ಮಹಿಳೆಯರು ಅಲ್ಲಿ ಹಾಜರಿರುತ್ತಾರೆ. ರಾಖಿ ಬಂಧನ್ ದಿನ ಮದನ್‌ರಿಂದ ರಾಖಿ ಕಟ್ಟಿಸಿಕೊಳ್ಳಲು ಅವರ ಮನೆಯೆದುರು ಸಾಲು ನಿಲ್ಲುತ್ತಾರೆ. ಮದನ್‌ರ ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದರೆ ಈ ಮಹಿಳೆಯರು ಸ್ವತಃ ಬಂದು ಆರೈಕೆ ಮಾಡುತ್ತಾರೆ.
ಮದನ್–ಅಭಾರಾಣಿ ಹುಟ್ಟು ಹಾಕಿದ ‘ಒಡಿಶಾ ಪತಿತ ಉದ್ಧಾರ ಸಮಿತಿ’ ಮಾಲಿಸಾಹಿ ಪ್ರದೇಶದಲ್ಲಿ ನಿಯಮಿತವಾಗಿ ಆರೋಗ್ಯ ಶಿಬಿರಗಳನ್ನು ನಡೆಸುತ್ತದೆ. ರಾಜ್ಯ ಸರ್ಕಾರದ ಸಹಾಯ ಪಡೆದು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ‘ಏಡ್ಸ್ ಸೆಲ್ಲ್’ನ್ನು ಹುಟ್ಟು ಹಾಕಿ, ಒಂದು ಏಡ್ಸ್ ಆಸ್ಪತ್ರೆಯನ್ನು ನಡೆಸುತ್ತಿದೆ. ಅಲ್ಲಿನ ವೇಶ್ಯೆಯರ ಮಕ್ಕಳಿಗಾಗಿ ಒಂದು ಶಾಲೆ ಯನ್ನೂ ಕಟ್ಟಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ, 77 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಅಕ್ಕಿ ಮಿಲ್ಲನ್ನು ತೆರೆದು, ಮಾಲಿಸಾಹಿಯ ನೂರಾರು ಮಹಿಳೆಯರಿಗೆ ಜೀವನ ನಡೆಸಲು ಪರ್ಯಾಯ ಮಾರ್ಗವನ್ನು ದೊರಕಿಸಿಕೊಟ್ಟಿದೆ.