Mysore
22
broken clouds
Light
Dark

ತೆರಿಗೆ ಹಂಚಿಕೆ: ಕರ್ನಾಟಕಕ್ಕೆ ಸಿಕ್ಕ ಹಣವೆಷ್ಟು? ಲೆಕ್ಕ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್‌

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸರಿಯಾಗಿ ತೆರಿಗೆ ಅನುದಾನ ನೀಡದೇ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಇಂದು ( ಫೆಬ್ರವರಿ 7 ) ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿತು. ಇದಾದ ಬೆನ್ನಲ್ಲೇ ಈ ಕುರಿತು ಮಾತನಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕಳೆದ ಹಣಕಾಸು ಆಯೋಗಕ್ಕೆ ಹೋಲಿಸಿದರೆ ಈ ಬಾರಿಯ ಆಯೋಗದಲ್ಲಿ ಕರ್ನಾಟಕ್ಕೆ ಹೆಚ್ಚಿನ ತೆರಿಗೆ ಹಂಚಿಕೆ ಪಡೆದಿದೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ ವಾದಗಳಿಗೆ ಉತ್ತರ ನೀಡಿದ್ದಾರೆ.

ಕರ್ನಾಟಕದ ಜಿಎಸ್‌ಟಿಯ ಒಂದು ರೂಪಾಯಿಯನ್ನೂ ಸಹ ಬಾಕಿ ಉಳಿಸಿಕೊಂಡಿಲ್ಲ ಎಂದಿರುವ ನಿರ್ಮಲಾ ಸೀತಾರಾಮನ್‌ ಬರಪರಿಹಾರವೂ ಸೇರಿದಂತೆ ಪ್ರಕೃತಿ ವಿಕೋಪ ನಿಧಿಯಡಿ ಮುಂಗಡವಾಗಿ 6196 ಸಾವಿರ ಕೋಟಿ ರೂಪಾಯಿಗಳ್ನೂ ಸಹ ನೀಡಲಾಗಿದೆ ಎಂದಿದ್ದಾರೆ. ಆದರೆ ಕಾಂಗ್ರೆಸ್‌ ಮಾತ್ರ ಬಾಕಿ ಬರಬೇಕಿದೆ ಎಂದು ತಪ್ಪು ಮಾಹಿತಿಯನ್ನು ನೀಡಿ ಜನರ ದಾರಿ ತಪ್ಪಿಸುತ್ತಿದೆ ಎಂದು ನಿರ್ಮಲಾ ಸೀತಾರಾಮನ್‌ ಕಿಡಿಕಾರಿದ್ದಾರೆ.

“14ನೇ ಹಣಕಾಸು ಆಯೋಗದ 5 ವರ್ಷಗಳ ಅವಧಿಯಲ್ಲಿ ಕರ್ನಾಟಕ 151309 ಕೋಟಿ ರೂಪಾಯಿ ತೆರಿಗೆ ಹಂಚಿಕೆ ಪಡೆದಿದೆ. ಪ್ರಸ್ತುತ 15ನೇ ಹಣಕಾಸು ಅವಧಿಯ ಮೊದಲ 4 ವರ್ಷಗಳಲ್ಲಿ ಅಂದರೆ ಮಾರ್ಚ್ 2024ರವರೆಗೆ ಕರ್ನಾಟಕವು ಈಗಾಗಲೇ 129854 ಕೋಟಿ ರೂಪಾಯಿಗಳನ್ನು ಪಡೆದಿದೆ. ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ 44485 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ. ಈ ಮೂಲಕ ಹಣಕಾಸು ವರ್ಷ 2024-25 ಸೇರಿ ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕ 174339 ಕೋಟಿ ರೂಪಾಯಿಗಳನ್ನು ಪಡೆದಂತಾಗಲಿದೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರಿಸಿದ ನಿರ್ಮಲಾ ಸೀತಾರಾಮನ್‌ “ಕರ್ನಾಟಕವು 14ನೇ ಆಯೋಗದ ಅವಧಿಗಿಂತ 15ನೇ ಆಯೋಗದ ಅವಧಿಯಲ್ಲಿ ಹೆಚ್ಚು ಮೊತ್ತವನ್ನು ಪಡೆದಿದೆ. ನಷ್ಟದ ಸುಳ್ಳು ಹೇಳಿಕೆಯನ್ನು ಕಾಂಗ್ರೆಸ್ ಬಲಪಡಿಸಿಕೊಳ್ಳುವ ಯತ್ನ ನಡೆಸುತ್ತಿದೆ. ಕರ್ನಾಟಕ ಮುಂದಿನ 2 ಹಣಕಾಸು ವರ್ಷಗಳ ಆದಾಯ ಕೊರತೆ ಅನುದಾನವನ್ನು ಸಹ ಪಡೆದಿದೆ. ಜತೆಗೆ ಕೇರಳ ಸಹ ಆದಾಯ ಕೊರತೆಯ ಅನುದಾನವನ್ನು ಪಡೆದಿದೆ” ಎಂದು ಸ್ಪಷ್ಟಪಡಿಸಿದರು.

ಅಲ್ಲದೇ “ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಹಾಗೂ ಬಿಹಾರ ರಾಜ್ಯಗಳು ಯಾವುದೇ ರೀತಿಯ ಆದಾಯ ಕೊರತೆ ಅನುದಾನವನ್ನು ಪಡೆದಿಲ್ಲ. ಯಾವುದೇ ಪ್ರದೇಶದ ವಿರುದ್ಧವಾಗಲಿ ಅಥವಾ ಸರ್ಕಾರದ ವಿರುದ್ಧವಾಗಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ. 50 ವರ್ಷಗಳ ಬಡ್ಡಿರಹಿತ ಸಾಲ ಯೋಜನೆಯನ್ನು ಕೇಂದ್ರ ಜಾರಿಗೆ ತಂದಿದ್ದು, ಈ ಯೋಜನೆಯಡಿಯಲ್ಲಿ ಕರ್ನಾಟಕಕ್ಕೆ 6280 ಕೋಟಿ ಬಡ್ಡಿರಹಿತ ಸಾಲವನ್ನು ನೀಡಿದೆ. ಕರ್ನಾಟಕವು 15ನೇ ಹಣಕಾಸು ಅವಧಿಯಲ್ಲಿ ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ ವಿಪತ್ತು ನಿರ್ವಹಣೆಗೆ 6196 ಕೋಟಿ ರೂಪಾಯಿಗಳನ್ನು ನೀಡಿದೆ. ತೆರಿಗೆ ಅನುದಾನ ನೀಡಿಲ್ಲ ಎಂದು ಹೇಳಲು ಜಾಹೀರಾತಿಗಾಗಿ ಕೋಟ್ಯಂತರ ಖರ್ಚು ಮಾಡಿದೆ. ಜಾಹೀರಾತಿನಲ್ಲಿ ಅನುದಾನವನ್ನೇ ನೀಡಿಲ್ಲ ಎಂದು ಸುಳ್ಳು ಹೇಳಲಾಗಿದೆ. ವಿಶೇಷ ಅನುದಾನ ನೀಡಲು ಹಣಕಾಸು ಆಯೋಗ ಶಿಫಾರಸು ಮಾಡಿಲ್ಲ. ಆದರೂ ಸಹ ಇಲ್ಲಿ ಪ್ರಸ್ತಾಪಿಸಲಾಗಿದೆ” ಎಂದು ನಿರ್ಮಲಾ ಸೀತಾರಾಮನ್‌ ಸಿದ್ದರಾಮಯ್ಯ ಅಂಡ್‌ ಟೀಮ್‌ಗೆ ಪ್ರತ್ಯುತ್ತರ ನೀಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ