ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ನೋಯ್ಡಾ, ಗುರುಗ್ರಾಮ, ರಾಷ್ಟ್ರೀಯ ರಾಜಧಾನಿ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ತಡರಾತ್ರಿ ಲಘುವಾದ ಮಳೆ ಸುರಿದಿದೆ. ಇದರಿಂದ ದೆಹಲಿಯಾದ್ಯಂತ ವಿಷಕಾರಿ ಎನಿಸಿಕೊಂಡಿದ್ದ ಗಾಳಿಯ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ.
ಕರ್ತವ್ಯ ಪಥ, ಐಟಿಒ ಮತ್ತು ದೆಹಲಿ-ನೋಯ್ಡಾ ಗಡಿಯ ಪ್ರದೇಶದಲ್ಲಿ ಲಘುವಾಗಿ ಮಧ್ಯಮ ತೀವ್ರತೆಯ ಮಳೆ ಸುರಿದಿರುವುದು ವರದಿಯಾಗಿದೆ. ಇದು ಹವಾಮಾನದಲ್ಲಿ ತ್ವರಿತ ಬದಲಾವಣೆಗೆ ಕಾರಣವಾಗಿದೆ. ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 85 ದಾಖಲಾಗಿದೆ. ಇದು ಗಾಳಿ ಗುಣಮಟ್ಟದ ಸುಧಾರಣೆಯಾಗಿದ್ದು, ಉತ್ತಮ ವಿಭಾಗದಲ್ಲಿ ಬರುತ್ತದೆ.
ನಗರದಲ್ಲಿ ಉಂಟಾಗಿದ್ದ ತೀವ್ರ ವಾಯುಮಾಲಿನ್ಯವನ್ನು ತಗ್ಗಿಸಲು ನವೆಂಬರ್ 20-21 ರಂದು ಮೋಡ ಬಿತ್ತನೆಯ ಮೂಲಕ ಕೃತಕ ಮಳೆ ಸುರಿಸಲು ದೆಹಲಿ ಸರ್ಕಾರದ ಯೋಜಿಸಿತ್ತು. ಇದೀಗ ಸುರಿದಿರುವ ಮಳೆ ತಾತ್ಕಾಲಿಕ ಪರಿಹಾರ ನೀಡಿದ್ದು, ಜನತೆ ನಿಟ್ಟುಸಿರು ಬಿಡುವಂತಾಗಿದೆ.
ದೆಹಲಿ-ಎನ್‌ಸಿಆರ್ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಬೆಳಗ್ಗೆ ಭಾಗಶಃ ಮೋಡ ಕವಿದ ವಾತಾವರಣ, ಕೊಂಚ ಮಂಜು ಮುಸುಕಿದ ವಾತಾವರಣವಿರಲಿದೆ. ಒಂದೆರಡು ಪ್ರದೇಶಗಳಲ್ಲಿ ಹಗುರ ಇಲ್ಲವೇ ತುಂತುರು ಮಳೆಯ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ 30 ಹಾಗೂ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ದೆಹಲಿಯ ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ.