ನವದೆಹಲಿ : ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣದಲ್ಲಿ ಬಂಧಿತರಾಗಿರುವ ಅಸೀಮ್ ದಾಸ್ ತನ್ನ ಹೇಳಿಕೆಯನ್ನು ಬದಲಿಸಿದ್ದು, ತಾನು ಛತ್ತೀಸಗಢ ಸಿಎಂ ಮೇಲೆ ಹಣ ಪಾವತಿ ಕುರಿತು ಆರೋಪ ಮಾಡಿಲ್ಲ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾನೆ.
ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣದಲ್ಲಿ ೫೦೮ ಕೋಟಿ ರೂ ಹಣವನ್ನು ಸಿಎಂ ಭೂಪೇಶ್ ಬಾಘೇಲ್ ಅವರು ಆಸೀಮ್ ದಾಸ್ ಮೂಲಕ ಹಣ ಪಡೆದಿದ್ದಾರೆಂದು ಆರೋಪಿಸಲಾಗಿತ್ತು. ಹಿನ್ನೆಲೆಯಲ್ಲಿ ದಾಸ್ ರನ್ನು ಇಡಿ ಬಂಧಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆಯನ್ನು ಬದಲಿಸಿರುವ ದಾಸ್, ತಾನು ಯಾವತ್ತೂ ರಾಜಕಾರಣಿಗಳಿಗೆ ನಗದು ನೀಡಿಲ್ಲ. ನನ್ನನ್ನು ಬಲವಂತವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಸಿಎಂ ಭಾಘೇಲ್ ವಿರುದ್ಧ ನಾನು ಯಾವುದೇ ಹಣದ ಆರೋಪ ಮಾಡಿಲ್ಲ. ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಬರೆಯಲಾದ ಹೇಳಿಕೆಯೊಂದರಲ್ಲಿ ನನ್ನ ಸಹಿ ಪಡೆದಿದ್ದಾರೆ. ನನಗೆ ಇಂಗ್ಲಿಷ್ ಬರುವುದಿಲ್ಲ ಎಂದು ಜಾರಿ ನಿರ್ದೇಶನಾಲಯಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಈ ಆಕ್ರಮ ಆ್ಯಪ್ ನ ಹಿಂದಿನ ವ್ಯಕ್ತಿ ಶುಭಂ ಸೋನಿ ತನ್ನ ಬಾಲ್ಯದ ಗೆಳೆಯ, ಆತನ ಒತ್ತಾಯದ ಮೇರೆಗೆ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಎರಡು ಬಾರಿ ದುಬೈಗೆ ಭೇಟಿ ನೀಡಿದ್ದಾಗಿ ಆತ ಹೇಳಿದ್ದಾನೆ.
ಸೋನಿಗೆ ಛತ್ತೀಸಗಢದಲ್ಲಿ ನಿರ್ಮಾಣ ಕ್ಷೇತ್ರದ ವ್ಯವಹಾರ ನಡೆಸುವ ಆಸಕ್ತಿಯಿತ್ತು. ಅದಕ್ಕಾಗಿ ಕೆಲಸ ಮಾಡುವಂತೆ ತನ್ನನ್ನು ಕೇಳಿದ್ದ ಹಾಗೂ ಹಣಕಾಸಿನ ವ್ಯವಸ್ಥೆಯ ಬಗ್ಗೆಯೂ ಆಶ್ವಾಸನೆ ನೀಡಿದ್ದ ಎಂದು ಸೋನಿ ತನ್ನ ಪತ್ರದಲ್ಲಿ ಹೇಳಿದ್ದಾನೆ.
“ನಾನು ರಾಯಪುರ್ ವಿಮಾನ ನಿಲ್ದಾಣ ತಲುಪಿದಾಗ, ನನಗೆ ಕಾರೊಂದರಲ್ಲಿ ವಿಐಪಿ ರಸ್ತೆಯಲ್ಲಿರುವ ಹೋಟೆಲ್‌ಗೆ ಹೋಗುವಂತೆ ತಿಳಿಸಲಾಗಿತ್ತು. ಕಾರನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸುವಂತೆ ಸೂಚಿಸಲಾಯಿತು ಅಲ್ಲಿ ಒಬ್ಬ ವ್ಯಕ್ತಿ ನಗದು ತುಂಬಿದ ಚೀಲಗಳನ್ನು ಕಾರಿನಲ್ಲಿರಿಸಿರಿಸಿದ್ದಾರೆ, ಹೋಟೆಲ್ ಕೊಠಡಿಗೆ ತೆರಳುವಂತೆ ನನಗೆ ನಂತರ ಫೋನ್ ಮೂಲಕ ಸೂಚಿಸಲಾಯಿತು.
ಸ್ವಲ್ಪ ಹೊತ್ತಿನಲ್ಲಿ ಈಡಿ ಅಧಿಕಾರಿಗಳು ನನ್ನ ಕೊಠಡಿಗೆ ಬಂದು ನನ್ನನ್ನು ಕರೆದುಕೊಂಡು ಹೋದರು. ನನ್ನನ್ನು ಸಿಲುಕಿಸಲಾಗಿದೆ ಎಂದು ನಂತರ ನನಗೆ ತಿಳಿಯಿತು. ನಾನು ಯಾರಿಗೂ ಹಣಕಾಸಿನ ಸಹಾಯ ಮಾಡಿಲ್ಲ ಅಥವಾ ಯಾವುದೇ ರಾಜಕೀಯ ಮುಖಂಡರು ಅಥವಾ ಕಾರ್ಯಕರ್ತರಿಗೆ ಹಣ ನೀಡಿಲ್ಲ” ಎಂದು ದಾಸ್ ತನ್ನ ಪತ್ರದಲ್ಲಿ ತಿಳಿಸಿದ್ದಾನೆ.