ಸತತ ಮೂರನೇ ಬಾರಿ ಬಾರ್ಡರ್- ಗವಾಸ್ಕರ್ ಟ್ರೋಫಿ ಉಳಿಸಿಕೊಂಡ ಭಾರತ
ಹೊಸದಿಲ್ಲಿ: ನಾಗಪುರದಲ್ಲಿ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯ ಆರಂಭಿಕ ಪಂದ್ಯವನ್ನು ಮೂರೇ ದಿನದಲ್ಲಿ ಮುಗಿಸಿದ್ದ ಟೀಂ ಇಂಡಿಯಾ, ದೆಹಲಿಯ ಫಿರೋಜ್ ಷಾ ಕೋಟ್ಲಾ ಅಂಗಳದಲ್ಲೂ ಮೂರೇ ದಿನದಲ್ಲಿ ಕಾಂಗರೂ ಪಡೆಯನ್ನು ಬಗ್ಗು ಬಡಿಯುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಮೂಲಕ ಭಾರತ ಆ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಜತೆಗೆ ಆಸ್ಟ್ರೇಲಿಯಾ ವಿರುದ್ಧ 100ನೇ ಟೆಸ್ಟ್ ಗೆಲುವು ದಾಖಲಿಸಿದೆ.
ರವೀಂದ್ರ ಜಡೇಜಾ ಅವರ ಮಾರಕ ಬೌಲಿಂಗ್ ದಾಳಿ (42ಕ್ಕೆ7)ಗೆ ಸಿಲುಕಿದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 113 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 115 ರನ್ಗಳ ಸಾಧಾರಣ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ 4 ವಿಕೆಟ್ ಕಳೆದುಕೊಂಡು ಗುರಿಮುಟ್ಟುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
115 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ನಾಯಕ ರೋಹಿತ್ ಶರ್ಮಾ 20 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 31 ರನ್ ಗಳಿಸುವ ಮೂಲಕ ತಂಡಕ್ಕೆ ಬಿರುಸಿನ ಆರಂಭ ನೀಡಿದರು. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಕೆಎಲ್ ರಾಹುಲ್ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು.
31 ಎಸೆತಗಳಲ್ಲಿ 20 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟಂಪ್ಔಟ್ ಆದರು. 100ನೇ ಪಂದ್ಯವನ್ನಾಡುತ್ತಿರುವ ಚೇತೇಶ್ವರ ಪೂಜಾರ ತಾಳ್ಮೆಯ ಆಟದೊಂದಿಗೆ ಅಜೇಯ 31 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಶ್ರೇಯಸ್ ಅಯ್ಯರ್ 10 ಎಸೆತಗಳಲ್ಲಿ 12 ರನ್ ಗಳಿಸಿದರೆ, ವಿಕೆಟ್ ಕೀಪರ್ ಶ್ರೀಕರ್ ಭರತ್ 22 ಎಸೆತಗಳಲ್ಲಿ 3 ಬೌಂಡರಿ 1 ಭರ್ಜರಿ ಸಿಕ್ಸರ್ ಸಹಿತ 23 ರನ್ ಗಳಿಸಿ ಬೇಗನೆ ಪಂದ್ಯವನ್ನು ಮುಗಿಸಲು ಕಾರಣವಾದರು.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಪರ ಮೊಹಮ್ಮದ್ ಶಮಿ 4, ಅಶ್ವಿನ್ ಮತ್ತು ಜಡೇಜಾ ತಲಾ 3 ವಿಕೆಟ್ ಪಡೆದರೆ ಎರಡನೇ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಾ 7 ವಿಕೆಟ್ ಪಡೆದು ಮಿಂಚಿದರು. ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದು ಆಸಿಸ್ ಪತನಕ್ಕೆ ಕಾರಣರಾದರು.
ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಪರ ಹೆಡ್ (43 ರನ್) ಮತ್ತು ಲಾಬುಶ್ಚಾಗ್ನೆ (36ರನ್) ಹೊರತು ಪಡಿಸಿದರೆ ಇನ್ನಾವ ಆಟಗಾರರೂ ಎರಡಂಕಿ ಮೊತ್ತ ದಾಟಲಿಲ್ಲ. 4 ಮಂದಿ ಬ್ಯಾಟರ್ ಗಳು ಶೂನ್ಯ ಸುತ್ತಿದ್ದು ಆಸಿಸ್ ಗೆ ಮಾರಕವಾಗಿ ಪರಿಣಮಿಸಿತು.
ಈ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 25,000 ಅಂತರಾಷ್ಟ್ರೀ ಯ ರನ್ ಗಳನ್ನು ಅತಿ ವೇಗವಾಗಿ ಗಳಿಸಿದ ಬ್ಯಾಟರ್ ಎನಿಸಿಕೊಂಡರು.
Just @imjadeja things 🫡🫡#INDvAUS pic.twitter.com/6wm0OeykQn
— BCCI (@BCCI) February 19, 2023