ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಇಂದು ಶತಕದ ಸಾಧನೆ ಮಾಡಿ ಸಂಭ್ರಮಿಸಿದೆ.
ಇಂದು ಬೆಳಿಗ್ಗೆ 100ನೇ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಸ್ರೋ ವಿಶಿಷ್ಟ ಸಾಧನೆ ಮಾಡಿದೆ.
ಇಂದು ಬೆಳಿಗ್ಗೆ 6.30ಕ್ಕೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಯೋಸಿಂಕ್ರನೈಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ನಾವಿಕ್ ಯೋಜನೆಯ ಎರಡನೇ ತಲೆಮಾರಿನ ಉಪಗ್ರಹ ಎನ್‌ವಿಎಸ್-02 ಉಡಾವಣೆಯನ್ನು ಯಶಸ್ವಿಗೊಳಿಸಿದೆ.
ಉಪಗ್ರಹ ಉಡಾವಣೆಯಾದ ಬಳಿಕ ಮಾತನಾಡಿದ ಇಸ್ರೋ ಮುಖ್ಯಸ್ಥ ನಾರಾಯಣನ್ ಅವರು, ನಿಗದಿ ಪಡಿಸಿದ ಕಕ್ಷೆಗೆ ಉಪಗ್ರಹ ನಿಖರವಾಗಿ ತಲುಪಿದೆ. 100ನೇ ಉಡಾವಣೆ ಇಸ್ರೋ ಪಾಲಿಗೆ ಮಹತ್ವದ ಮೈಲಿಗಲ್ಲು ಎಂದು ಸಂತಸ ವ್ಯಕ್ತಪಡಿಸಿದರು.
ಎನ್‌ವಿಎಸ್-೦೨ ಉಪಗ್ರಹದ ವೈಶಿಷ್ಟ್ಯಗಳು:
ಎನ್‌ವಿಎಸ್-೦೨ ಉಪಗ್ರಹವು ಎರಡನೇ ತಲೆಮಾರಿನ ನ್ಯಾವಿಕ್ ಉಪಗ್ರಹಗಳ ಭಾಗವಾಗಿದ್ದು, ೧-೨ಕೆ ಬಸ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ. ಈ ಉಪಗ್ರಹ ೨,೨೫೦ ಕೆಜಿ ತೂಕವಿದ್ದು, ಸುಮಾರು ೩ ಕಿ.ವ್ಯಾಟ್ ವಿದ್ಯುತ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಎಲ್೧, ಎಲ್೫ ಮತ್ತು ಎಸ್ ಬ್ಯಾಂಡ್ ಗಳಲ್ಲಿ ನ್ಯಾವಿಗೇಷನ್ ಪೇಲೋಡ್‌ಗಳನ್ನು ಮತ್ತು ಅ-ಬ್ಯಾಂಡ್‌ನಲ್ಲಿ ರೇಂಡಿಂಗ್ ಪೇಲೋಡ್ ಅನ್ನು ಹೊಂದಿರುತ್ತದೆ.