ನವೀನ್ ಡಿಸೋಜ
ಶಾಸಕ ಎ.ಎಸ್.ಪೊನ್ನಣ್ಣಗೆ ಒಲಿದ ಡೆಪ್ಯೂಟಿ ಸ್ಪೀಕರ್ ಸ್ಥಾನ; ಕೊಡಗಿನ ಜನರ ಈ ಬಾರಿಯ ನಿರೀಕ್ಷೆಯೂ ಹುಸಿ
ಮಡಿಕೇರಿ: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆ ಕಡೆಗೂ ನಡೆದಿದ್ದು, ಈ ಬಾರಿ ಕೊಡಗಿಗೆ ಸಚಿವ ಸ್ಥಾನ ದೊರಕುತ್ತದೆ ಎನ್ನುವ ಪ್ರಬಲ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನತೆಗೆ ನಿರಾಸೆ ಉಂಟಾಗಿದೆ. ಹೈಕಮಾಂಡ್ ಅಂತಿಮಗೊಳಿಸಿದ ಪಟ್ಟಿಯಂತೆ ಪ್ರಮುಖ ನಾಯಕರು ಸಂಪುಟ ಸೇರಿದ್ದು, ಸಚಿವ ಸ್ಥಾನಕ್ಕಾಗಿ ನಡೆದ ಸುದೀರ್ಘ ಕಾಯುವಿಕೆಗೆ ತೆರೆಬಿದ್ದಿದೆ.
ಶೀಘ್ರದಲ್ಲಿಯೇ ಖಾತೆ ಹಂಚಿಕೆ ಪ್ರಕ್ರಿಯೆಯೂ ನಡೆಯಲಿದೆ. ಆದರೆ ಈ ಬಾರಿಯೂ ಕೊಡಗು ಜಿಲ್ಲೆಗೆ ಸಚಿವ ಸ್ಥಾನದ ಭಾಗ್ಯ ಲಭಿಸಿಲ್ಲ. ಇದರ ಬದಲಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ವಿಧಾನಸಭಾ ಉಪ ಸಭಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಸಚಿವ ಸ್ಥಾನ ಕೊಡಗಿಗೆ ಲಭಿಸಿ ಬರೋಬ್ಬರಿ ೧೩ ವರ್ಷಗಳೇ ಕಳೆದಿವೆ. ಅದೂ ೧೩ ವರ್ಷಗಳ ಹಿಂದೆ ೨ ೦ ೧ ೨ – ೧ ೩ ರ ಅವಧಿಯಲ್ಲಿ ಕೇವಲ ೧೦ ತಿಂಗಳಿಗೆ ಮಾತ್ರವೇ ಸಚಿವ ಸ್ಥಾನ ಸಿಕ್ಕಿತ್ತು. ಪೂರ್ಣ ಅವಧಿಯ ಸಚಿವ ಸ್ಥಾನ ಸಿಕ್ಕಿದ್ದು ಅದಕ್ಕೂ ಹಿಂದೆ ೨೦೦೪ರಲ್ಲಿ. ೨೨ ವರ್ಷಗಳು ಕಳೆದರೂ ಪೂರ್ಣ ಅವಧಿಯ ಅಥವಾ ಕನಿಷ್ಠ ಒಂದು ವರ್ಷ ಅವಧಿಯ ಸಚಿವ ಸ್ಥಾನ ಜಿಲ್ಲೆಯ ಜನಪ್ರತಿನಿಧಿಗಳಿಗೆ ಸಿಕ್ಕಿಲ್ಲ.
ಪ್ರತಿ ಬಾರಿಯೂ ಸಂಪುಟ ರಚನೆ ವೇಳೆ ಜಿಲ್ಲೆಗೆ ಸಚಿವ ಸ್ಥಾನ ಸಿಗದೇ ಜನರು ನಿರಾಸೆಗೊಳ್ಳುತ್ತಿದ್ದು, ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಅದು ಮುಂದುವರಿದಿದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ (೧೯೯೯-೨೦೦೪) ಕೊಡಗಿನ ಎಂ.ಎಂ.ನಾಣಯ್ಯ, ಟಿ.ಜಾನ್ ಮತ್ತು ಸುಮಾ ವಸಂತ್ ಅವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಆನಂತರ ಸಚಿವ ಸ್ಥಾನ ಸಿಗಲು ೯ ವರ್ಷಗಳಷ್ಟು ಕಾಲ ಕಾಯಬೇಕಾಯಿತು. ಬಳಿಕ, ೨೦೧೨-೧೩ರ ಅವಧಿಯಲ್ಲಿ ಎಂ.ಪಿ.ಅಪ್ಪಚ್ಚು ರಂಜನ್ ಅವರು ಒಂದು ವರ್ಷಕ್ಕೂ ಕಡಿಮೆ ಕಾಲ ಸಚಿವ ರಾಗಿದ್ದರು. ಆ ಬಳಿಕ ಇಲ್ಲಿಯವರೆಗೆ ಕೊಡಗಿನ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.
ಈ ಬಾರಿ ಸಚಿವ ಸಂಪುಟದಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು ಎಂಬ ವಿಷಯ ಚರ್ಚೆಯಾಗುತ್ತಿತ್ತು. ಹೀಗಾಗಿ ಜಿಲ್ಲೆಯ ಇಬ್ಬರು ಶಾಸಕರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಿತ ಎಂದೇ ಭಾವಿಸ ಲಾಗಿತ್ತು. ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಯ ಒಬ್ಬಶಾಸಕರಾದರೂ ಇರಬೇಕು ಎಂದು ಕೊಡಗಿನ ಜನರು, ಇಲ್ಲಿನ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಬಯಸುತ್ತಲೇ ಬಂದಿದ್ದಾರೆ. ಈ ಬಾರಿ ಅಗಾಧ ವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಕೊಡಗಿನ ಜನರ ನಿರೀಕ್ಷೆಗಳು ಮತ್ತೊಮ್ಮೆ ಹುಸಿಯಾಗಿವೆ. ಕೊಡಗು ಜಿಲ್ಲೆಯ ಇಬ್ಬರು ಶಾಸಕರೂ ಸುಶಿಕ್ಷಿತರು ಹಾಗೂ ಯುವಕರೇ ಆಗಿದ್ದಾರೆ.
ಹಿಂದಿನ ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿದ್ದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕಾನೂನು ತಜ್ಞರು. ಹಲವು ಸನ್ನಿವೇಶಗಳಲ್ಲಿ ಪಕ್ಷಕ್ಕೆ ನೆರವಾಗಿದ್ದಾರೆ. ಡಾ. ಮಂಥರ್‌ಗೌಡ ಅವರು ವೈದ್ಯಕೀಯ ಪದವಿ ಪಡೆದಿದ್ದಾರೆ. ಹೀಗಿರುವಾಗ, ಸಹಜವಾಗಿಯೇ ಜಿಲ್ಲೆಯ ಜನರ ನಿರೀಕ್ಷೆಗಳೂ ಇದ್ದವು. ಜೊತೆಗೆ ೨ ದಶಕಗಳ ಬಳಿಕ ಕೊಡಗು ಜಿಲ್ಲೆಯಲ್ಲಿ ಇಬ್ಬರೂ ಶಾಸಕರು ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಆದರೂ ಹೈಕಮಾಂಡ್ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ. ಬದಲಾಗಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ವಿಧಾನ ಸಭೆ ಉಪಸಭಾಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಹಿಂದೆ ಬಿಜೆಪಿಯಿಂದ ಕೆ.ಜಿ.ಬೋಪಯ್ಯ, ವಿಧಾನಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಗಮನ ಸೆಳೆದಿದ್ದರು. ಇದೀಗ ಎ.ಎಸ್.ಪೊನ್ನಣ್ಣ ಉಪಸಭಾಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.
” ಕರ್ನಾಟಕ ರಾಜ್ಯದ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ಜಿಲ್ಲೆಯ ಜನತೆಯಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಹಲವು ವರ್ಷಗಳಿಂದ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ದೊರೆಯದೇ ಇರುವುದು ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಆಶೋತ್ತರಗಳಿಗೆ ಧಕ್ಕೆಯಾಗಿದೆ. ಕೊಡಗು ಜಿಲ್ಲೆಯು ರಾಜ್ಯಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಜಿಲ್ಲೆಯಾಗಿದ್ದರೂ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕೊಡಗನ್ನು ಕಡೆಗಣಿಸುವ ಪ್ರವೃತ್ತಿ ಮುಂದುವರಿದಿರುವುದು ಬೇಸರದ ಸಂಗತಿಯಾಗಿದೆ.”
-ಎಂ.ಎಂ. ದಾವುದ್, ಸಂಸ್ಥಾಪಕರು, ಕೊಡಗು ಜನ ಅಭಿವೃದ್ಧಿ ಸಮಿತಿ
” ಕೊಡಗಿನ ಇಬ್ಬರು ಯುವ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಮತ್ತು ಆಶಾಭಾವನೆ ಜಿಲ್ಲೆಯ ಜನರಲ್ಲಿತ್ತು. ಸಚಿವ ಸ್ಥಾನ ಕೊಡಗಿಗೆ ಅನಿವಾರ್ಯವೂ ಆಗಿತ್ತು. ಆದರೆ ಕೊಡಗಿನ ಜನರ ನಿರೀಕ್ಷೆ ಸುಳ್ಳಾಗಿದೆ. ಎ.ಎಸ್.ಪೊನ್ನಣ್ಣ ಉಪಸಭಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಲ್ಲಿ ಪಕ್ಷ ಸಂಘಟನೆಗೆ ಹೊಡೆತ ಬೀಳಲಿದ್ದು, ಪಕ್ಷದ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಅವಕಾಶವಿರುವುದಿಲ್ಲ. ಆ ಸ್ಥಾನಕ್ಕೆ ಅದರದೇ ಆದ ಇತಿಮಿತಿ ಇದ್ದು, ವಿಧಾನ ಸಭೆಯ ಉಪಸಭಾಧ್ಯಕ್ಷ ಸ್ಥಾನವನ್ನು ಗೌರವಯುತವಾಗಿ ಬೇರೊಬ್ಬರಿಗೆ ಹಸ್ತಾಂತರಿಸಿದರೆ ಒಳಿತು.”
-ಹೆಚ್.ಎಸ್.ಚಂದ್ರಮೌಳಿ, ಕೆ.ಪಿ.ಸಿ.ಸಿ. ವಕ್ತಾರ




