ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿತ್ತಾಪುರ ಗ್ರಾಮದ ವಿಜಿ ಎಂಬುವರ ಜಮೀನಿನಲ್ಲಿ ಮಂಗಳವಾರ ತಡರಾತ್ರಿ ಕಾಣಿಸಿಕೊಂಡಿದ್ದ ಸುಮಾರು 15 ಕೆಜಿ ತೂಕದ, 10 ಅಡಿ ಉದ್ದದ ಬೃಹತ್ ಹೆಬ್ಬಾವನ್ನು ಉರಗ ತಜ್ಞ ಸ್ನೇಕ್ ಮಧು ಅವರು ಸುರಕ್ಷಿತವಾಗಿ ರಕ್ಷಿಸಿ, ಮಲೆ ಮಹದೇಶ್ವರ ವನ್ಯಜೀವಿಧಾಮಕ್ಕೆ ಬಿಡುಗಡೆ ಮಾಡಿದ್ದಾರೆ.
ಜಮೀನಿನಲ್ಲಿ ಹೆಬ್ಬಾವು ಕಂಡುಬಂದ ತಕ್ಷಣ ವಿಜಿ ಅವರು ದೂರವಾಣಿ ಮೂಲಕ ಸ್ನೇಕ್ ಮಧು ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಮಧು ಅವರು ಅತ್ಯಂತ ಜಾಗರೂಕತೆಯಿಂದ ಹೆಬ್ಬಾವನ್ನು ಸೆರೆಹಿಡಿದು ರಕ್ಷಣೆ ಮಾಡಿದ್ದಾರೆ.
ಬಳಿಕ ಬುಧವಾರ ಬೆಳಿಗ್ಗೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಬಫರ್ ವಲಯದ ಉಪ ವಲಯ ಅರಣ್ಯಾಧಿಕಾರಿ ನಂದೀಶ್ ಅವರ ಸಮ್ಮುಖದಲ್ಲಿ ಹೆಬ್ಬಾವನ್ನು ವನ್ಯಜೀವಿಧಾಮದ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಯಿತು.
ಉರಗ ತಜ್ಞ ಸ್ನೇಕ್ ಮಧು ಮಾತನಾಡಿ, “ಪ್ರತಿಯೊಂದು ಜೀವಿಯೂ ಪರಿಸರ ಸಮತೋಲನಕ್ಕೆ ಅತ್ಯಗತ್ಯ. ವಿಶೇಷವಾಗಿ ಹಾವುಗಳು ಇಲಿ, ಹೆಗ್ಗಣಗಳ ಸಂಖ್ಯೆಯನ್ನು ನಿಯಂತ್ರಿಸಿ ರೈತರ ಬೆಳೆಗಳನ್ನು ಪರೋಕ್ಷವಾಗಿ ರಕ್ಷಿಸುತ್ತವೆ. ಹೆಬ್ಬಾವು ವಿಷರಹಿತ ಹಾವಾಗಿದ್ದು, ಇದನ್ನು ಕಂಡ ತಕ್ಷಣ ಭಯಪಟ್ಟು ಕೊಲ್ಲಬಾರದು. ಹಾವು ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆ ಅಥವಾ ಉರಗ ತಜ್ಞರಿಗೆ ಮಾಹಿತಿ ನೀಡಿ ರಕ್ಷಿಸಬೇಕು. ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಅರಣ್ಯ ಮತ್ತು ವನ್ಯಜೀವಿಗಳನ್ನು ಉಳಿಸುವಲ್ಲಿ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.




