Mysore
22
overcast clouds

Social Media

ಮಂಗಳವಾರ, 04 ಆಗಸ್ಟ್ 2026
Light
Dark

ಬಿರುಕು ಬಿಡುತ್ತಿರುವ ಕೆರೆ ಕೋಡಿಯ ಗೋಡೆ

ದೂರ ನಂಜುಂಡಸ್ವಾಮಿ

ದೂರ ಗ್ರಾಮದ ಕೆರೆಯ ಪೂರ್ವಭಾಗದ ಕೋಡಿಯನ್ನು ದುರಸ್ತಿಪಡಿಸಿ, ಹೂಳು ತೆಗೆಯಲು ಆಗ್ರಹ

ದೂರ: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೂರ ಗ್ರಾಮದ ಪೂರ್ವ ಭಾಗದಲ್ಲಿರುವ ಸುಮಾರು ೨೨ ಎಕರೆ ವಿಸ್ತೀರ್ಣವುಳ್ಳ ಕೆರೆಯ ಪೂರ್ವಭಾಗದಲ್ಲಿರುವ ಕೋಡಿಯ ಗೋಡೆ ಬಿರುಕು ಬಿಟ್ಟು ಕುಸಿಯುತ್ತಿದೆ. ಅಲ್ಲದೇ ಮೂರು ವರ್ಷಗಳ ಹಿಂದೆ ದೂರ- ದೊಡ್ಡ ಕಾಟೂರು ರಸ್ತೆ ನಿರ್ಮಾಣ ಮಾಡುವಾಗ ಕೆರೆಯ ಅರ್ಧ ಭಾಗದಷ್ಟು ಮಾತ್ರ ತಡೆಗೋಡೆ ನಿರ್ಮಾಣ ಮಾಡಿ ಇನ್ನರ್ಧ ಭಾಗವನ್ನು ಹಾಗೆಯೇ ಬಿಟ್ಟಿದ್ದಾರೆ.

ಈ ಕೆರೆಯ ಪಶ್ಚಿಮ ಭಾಗದಲ್ಲಿ ಶಂಭುಲಿಂಗೇಶ್ವರ ದೇವಸ್ಥಾನ, ಪೂರ್ವ ಭಾಗದಲ್ಲಿ ದುಗ್ಗಲಮ್ಮನ ದೇವಸ್ಥಾನವಿದ್ದು, ವಾರದಲ್ಲಿ ಎರಡು ದಿನ ಸಾಕಷ್ಟು ಭಕ್ತಾದಿಗಳು ಹಾಗೂ ಪಕ್ಕದಲ್ಲೇ ಗುರು ಮಲ್ಲೇಶ್ವರ ಶಾಲೆ ಇರುವುದರಿಂದ ದಿನನಿತ್ಯವೂ ವಿದ್ಯಾರ್ಥಿಗಳು, ರೈತರು, ಜನರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ.

ಅಲ್ಲದೇ ಗೊದ್ದನಪುರ-ಕೆಲ್ಲಳ್ಳಿ ನಡುವೆ ಹೊಸ ಸೇತುವೆ ನಿರ್ಮಾಣಗೊಂಡಿದ್ದು ಇದು ನಂಜನ ಗೂಡಿಗೆ ಸಂಪರ್ಕ ಕಲ್ಪಿಸಲಿದ್ದು, ಸಾಕಷ್ಟು ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುತ್ತಿರುತ್ತಾರೆ. ರಸ್ತೆ ಮತ್ತು ಕೆರೆ ಏರಿ ಒಂದೇ ಸಮನಾಗಿದ್ದು, ತಡೆಗೋಡೆ ಇಲ್ಲದೆ ಇರುವುದರಿಂದ ವೇಗವಾಗಿ ಬರುವ ವಾಹನಗಳು ಸ್ವಲ್ಪ ಎಚ್ಚರ ತಪ್ಪಿದರೂ ಕೆರೆಗೆ ಬೀಳುವ ಸಾಧ್ಯತೆ ಇದೆ.

ಅಷ್ಟೇ ಅಲ್ಲದೆ ಕೆರೆಯ ಏರಿಯುದ್ದಕ್ಕೂ ಒಳಭಾಗದಲ್ಲಿ ಸಾಕಷ್ಟು ಗಿಡಗಂಟಿಗಳು ಬೆಳೆದು ನಿಂತಿವೆ. ವರುಣ ಕಾಲುವೆಗೆ ನೀರು ಬಿಟ್ಟಾಗ ಈ ಕೆರೆಯು ತುಂಬುತ್ತದೆ. ಕೆರೆ ತುಂಬಿದಾಗ ಅಕ್ಕಪಕ್ಕದ ರೈತರ ಜಮೀನಿನಲ್ಲಿ ಬೋರ್‌ವೆಲ್ ಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆರೆಯಲ್ಲಿ ಸುಮಾರು ಹತ್ತು ಅಡಿ ಯಷ್ಟು ಮಣ್ಣು ತುಂಬಿಕೊಂಡಿದ್ದು ಹೂಳು ತೆಗೆ ಯದೇ ಇರುವುದರಿಂದ ಭರ್ತಿಯಾದ ೨-೩ ತಿಂಗಳ ಒಳಗೆ ನೀರು ಕಡಿಮೆಯಾಗುತ್ತದೆ.

ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ವತಿಯಿಂದ ಹೂಳು ತೆಗೆಯುವ ಕಾರ್ಯ ಕೈಗೊಂಡಿದ್ದರು. ಆಗ ಇಂಗು ಗುಂಡಿ ಮಾದರಿಯಲ್ಲಿ ೩೦:೪೦ ವಿಸ್ತೀರ್ಣದಲ್ಲಿ ಒಂದು ಗುಂಡಿಗೆ ೩ ಲಕ್ಷ ರೂ. ವೆಚ್ಚದಲ್ಲಿ ಹೂಳು ಎತ್ತುವ ಕಾರ್ಯವನ್ನು ಮಾಡಿದ್ದರು. ಆದರೆ ಅಂದು ಸರಿಯಾದ ರೀತಿಯಲ್ಲಿ ಹೂಳು ತೆಗೆಯಲಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಈಗಲಾದರೂ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯವರು, ವರುಣ ನಾಲಾ ವಿಭಾಗದವರು ಹಾಗೂ ಗ್ರಾಪಂ ಆಡಳಿತ ವರ್ಗದವರು ಇತ್ತ ಗಮನಹರಿಸಿ ತಡೆ ಗೋಡೆಯನ್ನು ನಿರ್ಮಿಸಿ, ಕೋಡಿಯನ್ನು ದುರಸ್ತಿಗೊಳಿಸಿ, ಹೂಳು ತೆಗೆಯುವ ಮೂಲಕ ಕೆರೆಯನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

” ಕೆರೆ ತಡೆಗೋಡೆ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಈಗಾಗಲೇ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡರಿಂದ ಸೂಚನೆ ಬಂದಿದ್ದು, ಶೀಘ್ರದಲ್ಲೇ ಸ್ಥಳ ಪರಿಶೀಲನೆ ಮಾಡಿ ಪ್ರಸ್ತಾವನೆ ಸಲ್ಲಿಸಿ ಅಂದಾಜು ಪಟ್ಟಿ ಸಲ್ಲಿಸಲಾಗುವುದು.”

-ಜೀವನ್ ಕುಮಾರ್, ಎಇಇ, ಜಗದೀಶ್ ಎಇ, ವರುಣ ನಾಲಾ ವಿಭಾಗ

” ಬಿರುಕು ಬಿಟ್ಟಿರುವ ಕೆರೆ ಕೋಡಿ ಗೋಡೆಯನ್ನು ಸರಿಪಡಿಸಿ, ತಡೆಗೋಡೆ ನಿರ್ಮಿಸಿ, ಹೂಳು ತೆಗೆಯುವುದರಿಂದ ಅಕ್ಕಪಕ್ಕದಲ್ಲಿರುವ ನಮ್ಮ ಜಮೀನುಗಳಲ್ಲಿರುವ ಬೋರ್ ವೆಲ್‌ಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಈ ಕೆರೆಯನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿ ನೀರು ತುಂಬಿಸಿದರೆ ಇದು ಒಂದು ಉತ್ತಮವಾದ ಪ್ರವಾಸಿ ತಾಣವಾಗಬಹುದು.”

-ಡಿ.ಎಂ.ಗಿರೀಶ್, ಡಿ.ಎಸ್.ಶಂಕರ್, ದೂರ ಗ್ರಾಮ

 

 

Tags:
error: Content is protected !!