ಬಿ.ಟಿ.ಮೋಹನ್ ಕುಮಾರ್
ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿಗೆ ಸಚಿವ ಸ್ಥಾನ
ಮಂಡ್ಯ: ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಈ ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ಎನ್.ಚಲುವರಾಯಸ್ವಾಮಿ ಅವರಿಗೆ ಮತ್ತೊಮ್ಮೆ ಅವಕಾಶವನ್ನು ಕಲ್ಪಿಸುವುದರ ಜತೆಗೆ ಮಳವಳ್ಳಿ ಕ್ಷೇತ್ರದ ಶಾಸಕ ಪಿ. ಎಂ.ನರೇಂದ್ರಸ್ವಾಮಿ ಅವರಿಗೂ ಮಂತ್ರಿ ಸ್ಥಾನವನ್ನು ಕಲ್ಪಿಸಿರುವುದು ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಸಂಭ್ರಮಕ್ಕೆ ಕಾರಣವಾಗಿದೆ.
ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮೊದಲ ಸಚಿವ ಸಂಪುಟದ ರಚನೆಯ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಯಾರಿಗೂ ಅವಕಾಶ ಸಿಗದದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದವು. ಎನ್.ಚಲುವರಾಯಸ್ವಾಮಿ ಸೇರಿದಂತೆ ಪ್ರಮುಖರು ಮಂತ್ರಿಗಿರಿಗಾಗಿ ಲಾಬಿ ನಡೆಸಿದ್ದರು.
ಅಂತಿಮ ಕ್ಷಣದಲ್ಲಿ ಮಂಡ್ಯ ಜಿಲ್ಲೆಗೆ ಕನಿಷ್ಠ ಒಬ್ಬರಿಗೆ ಮಾತ್ರವೇ ಸಚಿವ ಸ್ಥಾನ ಸಿಗಬಹುದೆಂಬ ವದಂತಿಗಳು ಕೇಳಿಬಂದಿದ್ದವು. ಅಂತಿಮ ಪಟ್ಟಿ ಬಿಡುಗಡೆಯಾದ ನಂತರ ಈ ಹಿಂದಿನ ಸಚಿವರಾದ ಎನ್.ಚಲುವರಾಯಸ್ವಾಮಿಗೆ ಅವಕಾಶ ಮುಂದುವರಿಸುವುದರ ಜತೆಗೆ ಕಾಂಗ್ರೆಸ್‌ನ ನಿಷ್ಠಾವಂತ ನಾಯಕ ಪಿ. ಎಂ.ನರೇಂದ್ರಸ್ವಾಮಿ ಅವರಿಗೂ ಮಂತ್ರಿ ಸ್ಥಾನವನ್ನು ನೀಡುವುದರ ಮೂಲಕ ಕಾಂಗ್ರೆಸ್ ಹೈಕಮಾಂಡ್ ಜಿಲ್ಲೆಗೆ ವಿಶೇಷ ಕೊಡುಗೆಯನ್ನು ನೀಡಿದಂತಾಗಿದೆ.
೧೯೯೩ರಲ್ಲಿ ಎಂ.ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿ ಕೆ.ಎನ್.ನಾಗೇಗೌಡ ಮತ್ತು ಎಂ.ಎಸ್. ಆತ್ಮಾನಂದ ಅವರಿಗೆ, ಎಚ್. ಡಿ.ದೇವೇಗೌಡ ಹಾಗೂ ಜೆ.ಎಚ್. ಪಟೇಲರ ಸರ್ಕಾರದ ಅವಽಯಲ್ಲಿ ಎಸ್. ಡಿ.ಜಯರಾಂ, ಕೆ.ಎನ್. ನಾಗೇಗೌಡ ಮತ್ತು ಬಿ.ಸೋಮಶೇಖರ್ ಅವರಿಗೆ ಮಂತ್ರಿ ಪದವಿಯನ್ನು ನೀಡಿದ್ದು ದಾಖಲೆಯಾಗಿತ್ತು. ಆನಂತರದ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಹೊರಗಿ ನವರಿಗೆ ಆದ್ಯತೆ ನೀಡಿ ಅವರಿಗೇ ಜಿಲ್ಲೆಯ ಉಸ್ತುವಾರಿಯನ್ನೂ ವಹಿಸಲಾಗಿತ್ತು.
ಆನಂತರ ಜಾ.ದಳ- ಕಾಂಗ್ರೆಸ್ ಮತ್ತು ಜಾ.ದಳ-ಬಿಜೆಪಿ ಮೈತ್ರಿ ಸರ್ಕಾರದ ಎರಡೂ ಅವಧಿಯಲ್ಲೂ ಎನ್.ಚಲುವರಾಯಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಿ ಜಿಲ್ಲೆಯ ಉಸ್ತುವಾರಿ ಹೊಣೆಯನ್ನು ವಹಿಸಲಾಗಿತ್ತು. ೨೦೦೮ರ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಪಕ್ಷೇತರವಾಗಿ ಗೆದ್ದು ಬಿಜೆಪಿಯನ್ನು ಬೆಂಬಲಿಸಿದ್ದ ಪಿ. ಎಂ.ನರೇಂದ್ರ ಸ್ವಾಮಿ ಅವರಿಗೆ ಮಂತ್ರಿ ಪದವಿಯನ್ನು ನೀಡಲಾಗಿತ್ತು. ಆದರೆ, ಹೊರಗಿನ ಮಂತ್ರಿಗಳಿಗೆ ಮಂಡ್ಯದ ಜವಾಬ್ದಾರಿಯನ್ನು ವಹಿಸಲಾಗಿತ್ತು.
೨೦೧೩ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೊದಲ ಅವಧಿಗೆಅಂಬರೀಶ್ ಅವರನ್ನು ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಅಂಬರೀಶ್ ಅವರನ್ನು ಸಚಿವ ಸ್ಥಾನದಿಂದ ತೆಗೆದ ನಂತರ ಡಿ.ಕೆ. ಶಿವಕುಮಾರ್ ಮತ್ತು ಎಂ.ಕೃಷ್ಣಪ್ಪ ಅವರಿಗೆ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿತ್ತು.
೨೦೧೮ರಲ್ಲಿ ಅಧಿಕಾರಕ್ಕೆ ಬಂದ ಜಾ.ದಳ-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಿ.ಎಸ್ .ಪುಟ್ಟರಾಜು ಮತ್ತು ಡಿ.ಸಿ.ತಮ್ಮಣ್ಣ ಇಬ್ಬರಿಗೂ ಸಚಿವ ಸ್ಥಾನವನ್ನು ನೀಡಿದ್ದು ವಿಶೇಷವಾಗಿತ್ತು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನವಾದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದ ಕೆ.ಸಿ.ನಾರಾಯಣಗೌಡ ಅವರಿಗೆ ಮಂತ್ರಿ ಸ್ಥಾನ ನೀಡಿ ಜಿಲ್ಲೆಯ ಉಸ್ತುವಾರಿಯನ್ನು ವಹಿಸಲಾಗಿತ್ತು.
೨೦೨೩ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎನ್.ಚಲುವರಾಯಸ್ವಾಮಿಗೆ ಮತ್ತೊಮ್ಮೆ ಮಂತ್ರಿಯ ಯೋಗ ಲಭಿಸಿ, ಕೃಷಿ ಖಾತೆಯನ್ನು ನೀಡುವುದರ ಜತೆಗೆ ಜಿಲ್ಲೆಯ ಹೊಣೆಯನ್ನು ನೀಡಲಾಗಿತ್ತು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದ ನಂತರ ಎರಡನೇ ಅವಧಿಯ ಮಂತ್ರಿ ಸ್ಥಾನಕ್ಕೆ ಶ್ರೀರಂಗಪಟ್ಟಣ ಕ್ಷೇತ್ರದ ರಮೇಶ್ ಬಂಡಿಸಿದ್ದೇಗೌಡ, ಮಳವಳ್ಳಿಯ ಪಿ.ಎಂ.ನರೇಂದ್ರಸ್ವಾಮಿ ಅವರು ತೀವ್ರ ಪೈಪೋಟಿ ನಡೆಸಿದ್ದರು. ಜಿಲ್ಲೆಯ ನಾಯಕತ್ವದ ದೃಷ್ಟಿಯಿಂದ ಎನ್. ಚಲುವರಾಯಸ್ವಾಮಿ ಅವರಿಗೆ ಮತ್ತೊಂದು\ ಅವಕಾಶ ನೀಡಬೇಕೆಂಬ ಕೂಗು ದಟ್ಟವಾಗಿ ಕೇಳಿಬಂದಿತ್ತು.
ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ೨೦ ಸಚಿವರಿಗೆ ಮಾತ್ರ ಅವಕಾಶವಿದ್ದು, ೬೦ಕ್ಕೂ ಹೆಚ್ಚು ಮಂದಿ ತೀವ್ರ ಲಾಬಿ ನಡೆಸುತ್ತಿದ್ದ ಪರಿಣಾಮ ಮಂಡ್ಯ ಜಿಲ್ಲೆಗೆ ಕನಿಷ್ಠ ಒಂದು ಸ್ಥಾನ ಸಿಗಬಹುದೆಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಆದರೆಅಂತಿಮ ಹಂತದಲ್ಲಿ ಕಾಂಗ್ರೆಸ್ ಹೈಕಮಾಂಡ್ ೨೦೨೮ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚುನಾವಣಾ ನಾಯಕತ್ವ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಕೋನದಲ್ಲಿ ಅಳೆದು ತೂಗಿ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಿರುವುದು ವಿಶೇಷವಾಗಿದೆ.
” ಮಂಡ್ಯ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಕ್ಕಿರುವುದು ಸಂತಸ ತಂದಿದೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಲಿವೆ. ಚಲುವರಾಯಸ್ವಾಮಿ ಅವರಿಗೆ ನಾಲ್ಕು ಬಾರಿ ಸಚಿವ ಸ್ಥಾನ ಸಿಕ್ಕಿರುವುದು ಜಿಲ್ಲೆಯ ಸೌಭಾಗ್ಯ. ಜಿಲ್ಲೆಯನ್ನು ಅಭಿವೃದ್ಧಿ ವಿಚಾರದಲ್ಲಿ ಈ ಇಬ್ಬರೂ ನಾಯಕರು ಮತ್ತಷ್ಟು ಉತ್ತುಂಗಕ್ಕೆತೆಗೆದುಕೊಂಡು ಹೋಗುತ್ತಾರೆ ಎಂಬ ನಂಬಿಕೆ ಇದೆ. ಚಲುವರಾಯಸ್ವಾಮಿ ಅವರು ಕೃಷಿ ಸಚಿವರಾಗಿದ್ದಾಗ ಮಂಡ್ಯ ಜಿಲ್ಲೆಗೆ ಕೃಷಿ ವಿವಿಯನ್ನು ಮಂಜೂರು ಮಾಡಿಸಿದ್ದಾರೆ. ಈ ಬಾರಿಯೂ ಇನ್ನೂ ಉನ್ನತ ಖಾತೆ ಸಿಗಲಿದೆ ಎಂಬ ನಂಬಿಕೆ ಇದೆ.”
-ಸಿ.ತ್ಯಾಗರಾಜು, ಮಾಜಿ ಅಧ್ಯಕ್ಷರು, ತಾಪಂ ಮಂಡ್ಯ
” ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ಮಂಡ್ಯ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನವನ್ನು ನೀಡಿರುವುದು ಅಭಿನಂದನೀಯ. ಜಿಲ್ಲೆಯ ರಾಜಕೀಯ ನಾಯಕತ್ವವನ್ನು ಮುನ್ನಡೆಸುವ ಮತ್ತು ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ಆಲೋಚನೆಯೊಡನೆ ಕಾಂಗ್ರೆಸ್ ಹೈಕಮಾಂಡ್ ಎನ್. ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನವನ್ನು ನೀಡಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ೨೦೨೮ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ವರಿಷ್ಠರು ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಇಬ್ಬರಿಗೆ ಸಚಿವ ಸ್ಥಾನ ಸಿಕ್ಕಿರುವುದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಲಿದೆ.”
– ಎಲ್.ಸಂದೇಶ್, ಅಧ್ಯಕ್ಷರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ
” ಮಂಡ್ಯ ಜಿಲ್ಲೆಗೆ ಹೆಮ್ಮೆ ಮಂಡ್ಯ ಜಿಲ್ಲೆಗೆ ೩೨ ವರ್ಷಗಳ ನಂತರ ಎರಡು ಸಚಿವ ಸ್ಥಾನ ಲಭ್ಯವಾಗಿರುವುದು ಜಿಲ್ಲೆಗೆ ಅತ್ಯಂತ ಹೆಮ್ಮೆಯ ವಿಚಾರ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಈರ್ವರನ್ನೂ ಅಭಿನಂದಿಸುತ್ತದೆ. ಮಂಡ್ಯ ಜಿಲ್ಲೆಯ ಇತಿಹಾಸದಲ್ಲಿ ಎನ್.ಚಲುವರಾಯಸ್ವಾಮಿ ಅವರು ನಾಲ್ಕನೇ ಬಾರಿ ಸಚಿವರಾಗಿರುವುದು ದಾಖಲೆಯಾಗಿದೆ. ಪಿ. ಎಂ.ನರೇಂದ್ರಸ್ವಾಮಿ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದಸಚಿವರಾಗಿದ್ದಾರೆ. ಪಕ್ಷ ನಿಷ್ಠೆಗೆ ಸಂದ ಗೌರವ. ಈ ಇಬ್ಬರ ನಾಯಕತ್ವದಲ್ಲಿ ಮುಂದಿನ ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಪಕ್ಷದ ಪರವಾಗಿ ಫಲಿತಾಂಶ ಬರಲು ಜಿಲ್ಲಾ ಕಾಂಗ್ರೆಸ್ ಸಮಿತಿ ಹೋರಾಟ ಮಾಡಲಿದೆ.”
-ಸಿ.ಡಿ. ಗಂಗಾಧರ, ಅಧ್ಯಕ್ಷರು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ




