ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಸಿಎಂ ಸಿದ್ದರಾಮಯ್ಯ ಅವರು, ದಸರಾ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಗಾಜಿನ ಮನೆಯ ಗಾಂಧಿ ಮಂಟಪದಲ್ಲಿ ಹಸಿರು ಟೇಪ್ ಕತ್ತರಿಸಿ ಉದ್ಘಾಟನೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಮಹದೇವಪ್ಪ, ಶಾಸಕ ಹರೀಶ್ ಗೌಡ, ರವಿಶಂಕರ್, ಸಂಸದ ಸುನೀಲ್ ಬೋಸ್ ಸಾಥ್ ನೀಡಿದರು.
ಮೈಸೂರಿನ ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಕನ್ಯಾಕುಮಾರಿಯ ಗಾಂಧಿ ಮ್ಯೂಸಿಯಂ ಮಾದರಿ ನಿರ್ಮಾಣ ಮಾಡಲಾಗಿದೆ. 25ಕ್ಕೂ ಹೆಚ್ಚು ಬಗೆಯ ಲಕ್ಷಾಂತರ ಹೂಗಳಿಂದ ವಿವಿಧ ಕಲಾಕೃತಿಗಳು ಅರಳಿದ್ದು, ಆಪರೇಷನ್ ಸಿಂಧೂರ ನೆನಪಿಸುವ ಕಲಾಕೃತಿಗಳು ನೋಡುಗರ ಗಮನಸೆಳೆಯುತ್ತಿವೆ.
ಭಾರತೀಯ ವಾಯುಪಡೆ, ಭೂಸೇನೆ, ನೌಕಾಪಡೆ ಮಾಡೆಲ್ ಬಣ್ಣಬಣ್ಣದ ಹೂಗಳಿಂದ ಅರಳಿದ್ದು, ಭಾರತೀಯ ಸೇನೆಯ ಹೆಮ್ಮೆ S400 ಕಲಾಕೃತಿ ರಚನೆ ಮಾಡಲಾಗಿದೆ.
ಇನ್ನು ಕೆಂಪು ಗುಲಾಬಿ, ವಿವಿಧ ಬಣ್ಣದ ಹೂ ಮಿಶ್ರಿತ ಅಂಬಾರಿ ಹೊತ್ತ ಆನೆ ಆಕರ್ಷಣೀಯವಾಗಿದ್ದು, ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ.





