Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

Mysuru dasara | ಸೆ.22ರಂದು ರಾಜ್ಯ ಮಟ್ಟದ ದಸರಾ ಸಿ.ಎಂ ಕಪ್ ಕ್ರೀಡಾಕೂಟ ಉದ್ಘಾಟನೆ

ಮೈಸೂರು : ನಾಡಹಬ್ಬ ದಸರಾ‌ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ದಸರಾ ಸಿ.ಎಂ.ಕಪ್ ಕ್ರೀಡಾಕೂಟವು ಇದೇ ಸೆ.22ರಿಂದ 25ರವರೆಗೂ ನಡೆಯಲಿದ್ದು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯರವರು ಸಂಜೆ 4.30ಕ್ಕೆ ಉದ್ಘಾಟನೆ ಮಾಡಲಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್ ಅವರು ತಿಳಿಸಿದರು.

ನಗರದ ಚಾಮುಂಡಿ ವಿಹಾರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಪ್ರತಿ ವರ್ಷ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯಮಟ್ಟ ಸೇರಿದಂತೆ ಒಟ್ಟು ನಾಲ್ಕು ವಿಭಾಗಗಳಲ್ಲಿ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು ಈ ಬಾರಿ ವಿಶೇಷವಾಗಿ ಸ್ಥಳೀಯರನ್ನು ಸಂಘಟಿಸಿ ಒಟ್ಟು 5 ವಿಭಾಗಗಳಲ್ಲಿ ಕ್ರೀಡಾಕೂಟ ನಡೆಸಲಾಗುತ್ತಿದೆ. ಅಂತೆಯೇ ಈ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪ ರವರು ಮತ್ತು ಪಶು ಸಂಗೋಪನೆ ಮತ್ತು ರೇಷ್ಮೇ ಸಚಿವರಾದ ಕೆ.ವೆಂಕಟೇಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಶಾಸಕ ತನ್ವೀರ್ ಸೇಠ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದರು.

ಕ್ರೀಡಾಕೂಟದಲ್ಲಿ ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಸುಮಾರು ಒಂದು ವಿಭಾಗದಿಂದ 646 ಕ್ರೀಡಾಪಟುಗಳು ಭಾಗವಹಿಸಲಿದ್ದು, ಒಟ್ಟು 5 ವಿಭಾಗದಿಂದ ಒಟ್ಟು 3230 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ಕ್ರೀಡಾಕೂಟದಲ್ಲಿ ಒಟ್ಟು 26 ವಿವಿಧ ಕ್ರೀಡೆಗಳು ಮೈಸೂರಿನ 13 ಸ್ಥಳಗಳಲ್ಲಿ ಆಯೋಜಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಕ್ರೀಡಾಕೂಟದ ಆಯೋಜನೆಯಲ್ಲಿ ತಂತ್ರಜ್ಣಾನದ ಅಳವಡಿಕೆ:
ಕ್ರೀಡಾಪಟುಗಳ ಮಾಹಿತಿ, ಸ್ಪರ್ಧೆ ನಡೆಯುವ ಸ್ಥಳ, ಸ್ಪರ್ಧಾ ನಿರ್ದೇಶಕರ‌ ವಿವರ, ಫಲಿತಾಂಶ ಸೇರಿದಂತೆಸ್ಪರ್ಧೆಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಮತ್ತು ಕ್ರೀಡಾಪಟುಗಳಿಗೆ ಪ್ರತ್ಯೇಕವಾಗಿ ಸಂದೇಶ ಕಳುಹಿಸಲು ಈ ಬಾರಿ https://www.dasaracmcup.com/dyes ಎಂಬ ಪೋರ್ಟಲ್ ಅನ್ನು ಜಾರಿಗೆ ತರಲಾಗಿದ್ದು, ಕ್ರೀಡಾಪಟುಗಳು ಅನುಕೂಲ ಪಡೆದುಕೊಳ್ಳಬಹುದಾಗಿದೆ.

ರಾಜ್ಯ ಮಟ್ಟದ ಕ್ರೀಡಾಕೂಟ ಅಷ್ಟೇ ಅಲ್ಲದೇ, ಸ್ಥಳೀಯ ಕ್ರೀಡೆಗಳಿಗೂ ಕೂಡ ಬೇಡಿಕೆ ಅನುಸಾರ ಅವಕಾಶ ನೀಡಲಾಗಿದ್ದು, ಅಂಧರ ಚೆಸ್, ಸೈಕಲ್ ಪೋಲೋ, ಕರಾಟೆ, ಬಾಡಿ ಬಿಲ್ಡಿಂಗ್ ಮತ್ತು ಚಾಮುಂಡಿ ಬೆಟ್ಟ ಹತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅಂತೆಯೇ ವಿಶೇಷವಾಗಿ ಚಾಮುಂಡಿ ಬೆಟ್ಟ ಹತ್ತುವ ಸ್ಪರ್ಧೆಗೆ ಬಹುಮಾನ ನಿಗಧಿಪಡಿಸಲಾಗಿದ್ದು, ಮೊದಲನೇ ಬಹುಮಾನವಾಗಿ ರೂ. 10000, ದ್ವಿತೀಯ ಬಹುಮಾನವಾಗಿ ರೂ. 7000 ಹಾಗೂ ತೃತೀಯ ಬಹುಮಾನವಾಗಿರೂ. 5000 ನಗದು ಬಹುಮಾನವನ್ನು ನೀಡಲಾಗುವುದು. ವೈಯಕ್ತಿಕ ಕ್ರೀಡಾ ವಿಭಾಗದಲ್ಲಿ ಮೊದಲನೇ ಬಹುಮಾನ ರೂ. 8000, ದ್ವಿತೀಯ ಬಹುಮಾನ ರೂ.5000 ಹಾಗೂ ತೃತೀಯ ಬಹುಮಾನ ರೂ. 2500 ನಗದು ಬಹುಮಾನ ನೀಡಲು ನಿಗದಿಪಡಿಸಲಾಗಿದೆ. ಅಂತೆಯೇ ಗುಂಪು ವಿಭಾಗದಲ್ಲಿ ನಡೆಯುವ ಸ್ಪರ್ಧೆಗೆ ಪ್ರತ್ಯೇಕ ನಗದು ಬಹುಮಾನ ನೀಡಲಾಗುವುದು ಎಂದರು.

ಕ್ರೀಡಾ ಕೂಟ ನಡೆಯುವ ಸ್ಥಳ
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅರ್ಚರಿ, ಅಥ್ಲೆಟಿಕ್ಸ್, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಫೆನ್ಸಿಂಗ್, ಜಿಮ್ನಾಸ್ಟಿಕ್, ಹ್ಯಾಂಡ್ ಬಾಲ್, ಹಾಕಿ, ಖೋ-ಖೋ, ನೆಟ್ ಬಾಲ್, ಈಜು, ಥ್ರೋ ಬಾಲ್, ವಾಲಿಬಾಲ್, ವುಷು ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮಾನಸ ಗಂಗೋತ್ರಿಯ ಒಳಾಂಗಣ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆ, ಮೈಸೂರು ವಿಶ್ವ ವಿದ್ಯಾನಿಲಯದ ಪೆವಿಲಿಯನ್ ಹಾಕಿ ಮೈದಾನದಲ್ಲಿ ಬಾಲ್ ಬ್ಯಾಡ್ಮಿಂಟನ್, ಫುಟ್ ಬಾಲ್, ಕಬಡ್ಡಿ ಕ್ರೀಡೆ ನಡೆಯಲಿದೆ. ಮೈಸೂರು ವಿಶ್ವ ವಿದ್ಯಾನಿಲಯದ ಸ್ಪೋರ್ಟ್ ಪೆವಿಲಿಯನ್ ನ ಯೋಗ ಹಾಲ್ ನಲ್ಲಿ ಯೋಗ, ಮಹಾರಾಜ ಒಳಾಂಗಣ‌ ಕ್ರೀಡಾಂಗಟದಲ್ಲಿ ಜೂಡೋ, ಚಾಮರಾಜಪುರಂನ ಮೈಸೂರು ಟೆನ್ನಿಸ್ ಕ್ಲಬ್ ನಲ್ಲಿ ಲಾನ್ ಟೆನ್ನಿಸ್, ವಿಶ್ವೇಶ್ವರ‌ನಗರದ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಟೇಬಲ್ ಟೆನ್ನಿಸ್, ಯುವರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಟೆಕ್ವಾಂಟೋ, ದೇವರಾಜ ಅರಸು ಕುಸ್ತಿ ಪೆವಿಲಿಯನ್ ಕ್ರೀಡಾಂಗಣದಲ್ಲಿ ಕುಸ್ತಿ ಸೇರಿದಂತೆ ರಿಂಗ್ ರಸ್ತೆಯಿಂದ ಸೈಕ್ಲಿಂಗ್ ಕ್ರೀಡಾ ಸ್ಪರ್ಧೆಗಳು‌ ನಡೆಯಲಿದ್ದು, ಆಯ್ಕೆಗೊಂಡಿರುವ ಸ್ಪರ್ಧಿಗಳು ತಮ್ಮ ಮಾಹಿತಿಯೊಂದಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ‌ ದಸರಾ‌ ಉಪ‌ ಸಮಿತಿ ವಿಶೇಷಾಧಿಕಾರಿ ಹಾಗೂ‌ ಮುಡಾ ಕಾರ್ಯದರ್ಶಿಯು ಆದ ಎ.ಟಿ.ಜಾನ್ಸನ್, ಇಲಾಖಾ‌ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ಅವರು ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.

Tags:
error: Content is protected !!