Mysore
25
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮೈಸೂರು ದಸರಾ | 8 ದಿನಗಳ ಕಾಲ ಸಾಂಸ್ಕೃತಿಕ ಉತ್ಸವ

ಮೈಸೂರು : ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ದಸರಾದಲ್ಲಿ ಕಲಾಸಕ್ತರ ಮುಂದೆ ತಮ್ಮ ಕಲೆಯನ್ನು ಪ್ರದರ್ಶಿಸಲು ಕಲಾವಿದರು ಸಿದ್ಧವಾಗಿದ್ದು, ಅವಕಾಶ ಕೋರಿ ಬರೋಬ್ಬರಿ 3173 ಮಂದಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.

ನಾಡಹಬ್ಬ ದಸರೆಯ ಒಂಬತ್ತು ದಿನಗಳಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸುವ ಕಲಾವಿದರು, ಕಲಾರಸಿಕರಿಗೆ ತಮ್ಮಲ್ಲಿರುವ ಕಲೆಯನ್ನು ಉಣಬಡಿಸುತ್ತಾರೆ. ಈ ಬಾರಿ ಸೆ.22 ರಂದು ದಸರಾ ಉದ್ಘಾಟನೆಯಾಗಲಿದ್ದು, 29ರ ವರೆಗೆ ಅರಮನೆ ವೇದಿಕೆ ಸೇರಿದಂತೆ ನಗರದ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದಸರಾ ವೇಳೆ ಅರಮನೆಯ ವೇದಿಕೆಯಲ್ಲಿ 8 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಉಳಿದಂತೆ ನಗರದ ಒಂಬತ್ತು ವಿವಿಧ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಈ ಹಿನ್ನೆಲೆಯಲ್ಲಿ ದಸರಾ ಸಾಂಸ್ಕೃತಿಕ ಉಪ ಸಮಿತಿಯು ಒಟ್ಟು 488 ಕಾರ್ಯಕ್ರಮಗಳನ್ನು ವಿವಿಧ ವೇದಿಕೆಗಳಲ್ಲಿ ಆಯೋಜಿಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ಕೂಡ ಆಹ್ವಾನಿಸಿತ್ತು. ಹೀಗಾಗಿ 3173 ಮಂದಿ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ನಗರದ ಜಗನ್ಮೋಹನ ಅರಮನೆ, ಕಲಾಮಂದಿರ, ಕಿರುರಂಗಮಂದಿರ, ನಾದಬ್ರಹ್ಮ, ಗಾನಭಾರತಿ, ಚಿಕ್ಕ ಗಡಿಯಾರ, ಪುರಭವನ, ನಂಜನಗೂಡಿನ ಅರಮನೆ ಮಾಳ ಹೀಗೆ ಮೈಸೂರು ಅರಮನೆ ಆವರಣ ಸೇರಿದಂತೆ 10 ವೇದಿಕೆಗಳಲ್ಲಿ ಕಾರ್ಯಕ್ರಮ ಜರುಗಲಿದೆ.

ನಾಟಕ, ಭರತನಾಟ್ಯ, ಸಮೂಹ ಗಾಯನ, ನೃತ್ಯ ರೂಪಕ, ಸಂಗೀತ, ಭಾವಗೀತೆ, ಕೂಚುಪುಡಿ, ವಚನ ಗಾಯನ, ವಚನ ರೂಪಕ ಸೇರಿದಂತೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಸೆಳೆಯಲಿವೆ.

ಹೊರ ರಾಜ್ಯದ ಕಲಾವಿದರು
ಇದೇ ವೇಳೆ ನಮ್ಮ ರಾಜ್ಯದ ಕಲಾವಿದರ ಜೊತೆಗೆ ಹೊರ ರಾಜ್ಯಗಳಿಂದಲೂ ಕಲಾವಿದರು ತಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಮೈಸೂರಿನಲ್ಲಿ ಅನಾವರಣಗೊಳಿಸಲಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಹೊಸದಿಲ್ಲಿ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಆಗಮಿಸಿ ಪ್ರದರ್ಶನ ನೀಡಲಿದ್ದಾರೆ. ನಾಗಪುರದಿಂದ ಆಗಮಿಸುವ ಕಲಾವಿದರು. ಸೆ.22 ರಂದು ಸಂಜೆ ಕಲಾಮಂದಿರದಲ್ಲಿ ‘ಸಾಮ್ರಾಟ್ ಅಶೋಕ’ ನಾಟಕ ಪ್ರಸ್ತುತಪಡಿಸಲಿದ್ದು, ಇದು ವಿಶೇಷ ಆಕರ್ಷಣೆಯಾಗಲಿದೆ.

ನಾಡಹಬ್ಬ ದಸರಾ ವೇಳೆ ನಡೆಯುವ ಕಾರ್ಯಕ್ರಮಗಳ ಪಟ್ಟಿ ಈಗಾಗಲೇ ಅಂತಿಮ ಹಂತದಲ್ಲಿದ್ದು, ಸೋಮವಾರ ಜಿಲ್ಲಾಧಿಕಾರಿಯವರು ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಜಾತಿ, ಧರ್ಮ, ಲಿಂಗಬೇಧವಿಲ್ಲದೆ ಅರ್ಹ ಕಲಾವಿದರಿಗೆ ದಸರಾದಲ್ಲಿ ವೇದಿಕೆ ನೀಡಲಾಗುತ್ತಿದೆ. ಹೊರ ರಾಜ್ಯಗಳ ಪರಂಪರೆ, ಸಂಸ್ಕೃತಿ ಕೂಡ ಅನಾವರಣಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಹೇಳಿದರು.

Tags:
error: Content is protected !!