ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕುರಿತು ವಾಟಾಳ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಈಗ ಜಳ್ಳಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಶಾಸಕರು ಹಾಗೂ ಸಚಿವರ ಕಿತ್ತಾಟ ಜೋರಾಗಿದೆ. ಅವರು ಏನಾದರೂ ಮಾಡಿಕೊಳ್ಳಲಿ. ಸರ್ಕಾರ ಬಂದು ಎರಡುವರೆ ವರ್ಷಗಳಾಗುತ್ತಿದೆ. ಇವರ ಕಿತ್ತಾಟವೇ ಇನ್ನೂ ಮುಗಿದಿಲ್ಲ. ಮಂತ್ರಿಗಳಂತೂ ಅವರ ಇಷ್ಟ ಬಂದ ಹಾಗೆ ಆಡ್ತಾ ಇದ್ದಾರೆ. ಸಿದ್ದರಾಮಯ್ಯ ಮೊದಲ ಸಿದ್ದರಾಮಯ್ಯ ಅಲ್ಲ ಈಗ ಜಳ್ಳಾಗೋಗಿದ್ದಾರೆ. ಬದಲಾವಣೆ ಅನ್ನೋದು ಕ್ರಾಂತಿ ಅಲ್ಲ. ಕಾಂಗ್ರೆಸ್ ಒಂದು ಕಾಲದಲ್ಲಿ ಕ್ರಾಂತಿ ಹೋರಾಟ ಮಾಡಿದಂತ ಪಕ್ಷ. ಸಿದ್ದರಾಮಯ್ಯ ತೆಗೆದು ಆ ಸ್ಥಾನಕ್ಕೆ ಮತ್ತೊಬ್ಬ ವ್ಯಕ್ತಿ ತರಲಿಕ್ಕೆ ಆಗೋದಿಲ್ಲ. ನಾನೇ ಐದು ವರ್ಷ ಸಿಎಂ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಅದೇನೋ ಈಗ ಸಿದ್ದರಾಮಯ್ಯವರಿಗೆ ಗಂಡಸ್ತನ ಬಂದಿದೆ. ಮಠಾಧಿಪತಿಗಳು ಯಾಕೆ ರಾಜಕೀಯದಲ್ಲಿ ಮೂಗು ತೂರಿಸುತ್ತಿದ್ದಾರೋ ಗೊತ್ತಿಲ್ಲ. ರಾಜ್ಯದ ಸಮಸ್ಯೆ ಸಾವಿರಾರು ಇವೆ. ಅದನ್ನ ಬಿಟ್ಟು ನೀವು ನೀವೇ ಕಿತ್ತಾಡಿದರೆ ಅದು ನಮ್ಮ ನಾಡಿಗೆ ಅಗೌರವ ಕೊಟ್ಟಂಗೆ ಎಂದು ಕಿಡಿಕಾರಿದರು.
ಇನ್ನು ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನಕ್ಕೆ 2000 ನಿಗದಿ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಬೆಟ್ಟದಲ್ಲಿ ಸಾಮಾನ್ಯರು, ದೊಡ್ಡವರು, ಚಿಕ್ಕವರು ಎಂದು ದರ್ಶನಕ್ಕೆ ತಾರತಮ್ಯ ಮಾಡುವುದು ಸರಿಯಲ್ಲ. ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ. ನಿಮ್ಮ ದರ್ಬಾರ್ ನಿಲ್ಲಿಸಬೇಕು. ಇಲ್ಲ ಅಂದ್ರೆ ಚಾಮುಂಡಿ ಬೆಟ್ಟದಲ್ಲೇ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.





