ಮೈಸೂರು: ಇಬ್ಬರು ಹೆಂಡತಿಯರ ಮುದ್ದಿನ ಗಂಡನೊಬ್ಬ ಬೈಕ್ ಕಳ್ಳತನಕ್ಕೆ ಇಳಿದು ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಚಾಮರಾಜನಗರದ ನಿವಾಸಿ ಅಜ್ಮತ್ ಉಲ್ಲಾ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಅಜ್ಮತ್ ಉಲ್ಲಾಗೆ ಇಬ್ಬರು ಹೆಂಡತಿಯರು ಹಾಗೂ 8 ಜನ ಮಕ್ಕಳಿದ್ದರು. ಇವರೆಲ್ಲರನ್ನೂ ಸಾಕಲೆಂದೇ ಅಜ್ಮತ್ ಉಲ್ಲಾ ಬೈಕ್ ಕಳ್ಳತನ ಮಾಡಲು ಶುರು ಮಾಡಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಗಡಿ ಜಿಲ್ಲೆ ಚಾಮರಾಜನಗರದಿಂದ ಬಸ್‌ನಲ್ಲಿ ಬರುತ್ತಿದ್ದ ಅಜ್ಮತ್ ಉಲ್ಲಾ, ಮೈಸೂರಿನ ವಿವಿಧೆಡೆ ಪಾರ್ಕಿಂಗ್ ಮಾಡಿ ನಿಲ್ಲಿಸಿದ್ದ ಬೈಕ್‌ಗಳನ್ನು ಮಾಸ್ಟರ್ ಕೀ ಬಳಸಿ ಕಳ್ಳತನ ಮಾಡುತ್ತಿದ್ದ. ಕದ್ದ ಬೈಕ್‌ಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಹೀಗೆ ಕಳೆದ 7 ತಿಂಗಳಿನಲ್ಲಿ ಬರೋಬ್ಬರಿ 24 ಬೈಕ್‌ಗಳನ್ನು ಈತ ಕಳ್ಳತನ ಮಾಡಿದ್ದಾನೆ.
ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಬೈಕ್ ಕದಿಯುತ್ತಿದ್ದಾಗಲೇ ಅಜ್ಮತ್ ಉಲ್ಲಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅಜ್ಮತ್ ಉಲ್ಲಾ ಪಾರ್ಕಿಂಗ್ ಮಾಡಿದ್ದ ಬೈಕ್ ಮೇಲೆ ಬಹಳ ಸಮಯ ಕುಳಿತುಕೊಂಡಿದ್ದ. ಈ ವೇಳೆ ಅನುಮಾನಗೊಂಡ ಪೊಲೀಸರು ಆತನನ್ನೇ ಗಮನಿಸುತ್ತಿದ್ದರು. ಬೈಕ್ ಕದ್ದು ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ವೇಳೆಯೇ ಅಜ್ಮತ್ ಉಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.





