Mysore
30
clear sky

Social Media

ಶುಕ್ರವಾರ, 07 ಫೆಬ್ರವರಿ 2025
Light
Dark

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಂಸದ ಯದುವೀರ್‌ ಆಗ್ರಹ

ಮೈಸೂರು: ಮುಡಾ ಪ್ರಕರಣದಲ್ಲಿ ಇ.ಡಿ.ಅಧಿಕಾರಿಗಳು ತನಿಖೆ ನಡೆಸಿ, ಕೋಟ್ಯಾಂತರ ರೂ.ಗಳಷ್ಟು ಹಗರಣ ನಡೆದಿದೆ ಎಂದು ವರದಿ ನೀಡಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು(ಜನವರಿ.18) ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇ.ಡಿ.ಅಧಿಕಾರಿಗಳು ಮುಡಾ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಿಎಂ ತವರು ಜಿಲ್ಲೆಯ ಮುಡಾ ಕಚೇರಿಯಲ್ಲಿ ಹಗರಣ ನಡೆದಿದೆ ಎಂಬ ವಿಚಾರವನ್ನು ವರದಿ ಮಾಡಿದೆ. ಅಲ್ಲದೇ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರಿನ ತಳಕು ಹಾಕಿಕೊಂಡ ಮೊದಲ ದಿನದಿಂದಲೂ ನಮ್ಮ ಪಕ್ಷದವರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಹೈಕಮಾಂಡ್‌ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮುಡಾ ಹಗರಣದಲ್ಲಿ ಸದ್ಯಕ್ಕೆ ವಿಚಾರಣೆ ಮುಗಿಯುವುದಿಲ್ಲ. ಮುಡಾದಿಂದ ಪಡೆದಿದ್ದ ನಿವೇಶನಗಳನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯೇ ಮುಡಾ ಕಚೇರಿಗೆ ಹಿಂತಿರುಗಿಸಿದ್ದಾರೆ. ಇನ್ನೂ ಇ.ಡಿ.ತನಿಖೆಯಲ್ಲಿ ಮುಡಾದಲ್ಲಾದ ಕೋಟ್ಯಾಂತರ ರೂಪಾಯಿಯ ಹಗರಣ ಬೆಳಕಿಗೆ ಬಂದಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಈ ತನಿಖೆಯಲ್ಲಿ ಸಿದ್ದರಾಮಯ್ಯನವರು ತಪ್ಪಿಸ್ಥರಲ್ಲ ಎಂದರೆ ಮತ್ತೊಮ್ಮೆ ಸಿಎಂ ಅಧಿಕಾರವನ್ನು ವಹಿಸಿಕೊಂಡು ಮುಂದುವರೆಯಬೇಕು. ಆದಾಗ್ಯೂ ಸದ್ಯಕ್ಕೆ ಅವರ ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌ ಅಗತ್ಯ ಕ್ರಮ ಕೈಗೊಳ್ಳಬೇಕು. ಆದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವರೆಗೂ ಬಿಜೆಪಿಯ ಹೋರಾಟ ಇನ್ನಷ್ಟು ಮುಂದುವರೆಯಲಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಎಲ್‌.ನಾಗೇಂದ್ರ

ಇದೇ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್‌.ನಾಗೇಂದ್ರ ಅವರು ಈ ವಿಚಾರದ ಬಗ್ಗೆ ಮಾತನಾಡಿ, ಮುಡಾ ಹಗರಣದಲ್ಲಿ ಮತ್ತಷ್ಟು ಅವ್ಯವಹಾರ ನಡೆದಿದೆ ಎಂಬ ವಿಚಾರ ಇ.ಡಿ.ಅಧಿಕಾರಿಗಳ ತನಿಖೆಯಿಂದ ಕಂಡು ಬಂದಿದೆ. ನಿನ್ನೆಯ(ಜ.17) ಪ್ರೆಸ್‌ ರಿಲೀಸ್‌ನಲ್ಲಿ ಇ.ಡಿ.ಸಂಸ್ಥೆಯೂ ಮುಡಾ ಪ್ರಕರಣದಲ್ಲಿ ಅಕ್ರಮ ನಡೆದಿದೆ ಎಂದು ವರದಿ ನೀಡಿದೆ. ಅಲ್ಲದೇ ಮುಡಾ ಹಗರಣದಲ್ಲಾದ ಕೋಟ್ಯಾಂತರ ರೂಪಾಯಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೇಳಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಈಗಲಾದರೂ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು ಎಂದು ಆಗ್ರಹಿಸಿದರು.

Tags: