Mysore
31
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಪ್ರಿನ್ಸೆಸ್‌ ರಸ್ತೆ ಎಂಬುದಕ್ಕೆ ದಾಖಲೆಗಳಿಲ್ಲ ಎಂದ ಆಯುಕ್ತರು: ದಾಖಲೆಗಳನ್ಮೊಮ್ಮೆ ಸರಿಯಾಗಿ ಪರಿಶೀಲಿಸಬೇಕೆಂದು ಸಂಸದ ಯದುವೀರ್‌ ಟಾಂಗ್‌

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು, ‘ಕೆಆರ್‌ಎಸ್ ರಸ್ತೆಗೆ ಯಾವುದೇ ಅಧಿಕೃತ ಹೆಸರಿನ ಉಲ್ಲೇಖವಿಲ್ಲ’ ಎಂದು ಹೇಳಿದ್ದಾರೆ. ಆದರೆ ಅಧಿಕೃತವಾಗಿ 1921ರಲ್ಲಿ ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯು ಈ ರಸ್ತೆಗೆ ಪ್ರಿನ್ಸೆಸ್‌ ರಸ್ತೆ ಎಂದು ನಾಮಕರಣ ಮಾಡಿರುವುದಕ್ಕೆ ದಾಖಲೆ ಇದೆ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಟಾಂಗ್‌ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಕೆಆರ್‌ಎಸ್‌ ರಸ್ತೆಗೆ ಅಧಿಕೃತ ಹೆಸರು ನೀಡಿರುವ ಬಗ್ಗೆ ಉಲ್ಲೇಖಗಳಿಲ್ಲ ಎಂದು ಹೇಳುತ್ತಿರುವ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರೇ ಈ ದಾಖಲೆಗಳನ್ನೊಮ್ಮೆ ನೋಡಿ. ಮೈಸೂರು ಸಂಸ್ಥಾನದ ದಿವಾನರಾದ ಮಿರ್ಜಾ ಇಸ್ಮಾಯಿಲ್ ಅವರ ದೂರದ ಸಂಬಂಧಿಯೊಬ್ಬರು ಪ್ರಿನ್ಸೆಸ್ ರಸ್ತೆ ಎಂದು ಕರೆಯಲ್ಪಡುವ ಸ್ಥಳದಲ್ಲಿ ವಾಸಿಸುತ್ತಿದ್ದರು. ಈ ವಿಳಾಸದಿಂದ ಕಳುಹಿಸಲಾದ ಪತ್ರಗಳು ಸಹ ಪ್ರಿನ್ಸೆಸ್‌ ರಸ್ತೆಯ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ ಎಂದು ತಿಳಿಸಿದ್ದಾರೆ.

ಭಾರತ ಸರ್ಕಾರದ ಸರ್ವೆ ಮತ್ತು ಮ್ಯಾಪಿಂಗ್ ಹೊಂದಿರುವ ಸರ್ಕಾರಿ ಇಲಾಖೆಯವರು ಅಧಿಕೃತವಾಗಿ ಪ್ರಕಟಿಸಿರುವ ಮೈಸೂರು ಪ್ರವಾಸದ ನಕ್ಷೆ/ಮಾರ್ಗದರ್ಶಿಯಲ್ಲಿರುವ ಮೈಸೂರಿನ ನಕ್ಷೆಯಲ್ಲಿಯೂ ಸಹ ಪ್ರಿನ್ಸೆಸ್‌ ರಸ್ತೆ ಎಂದು ಸ್ಪಷ್ಟವಾಗಿ ಗುರುತಿಸಿ ಹೆಸರುಸಲಾಗಿದೆ. ಇನ್ನೂ ಅಧಿಕೃತವಾಗಿ ಮೈಸೂರು ನಗರಾಭಿವೃದ್ಧಿ ಟ್ರಸ್ಟ್ ಬೋರ್ಡ್ ಈ ರಸ್ತೆಯನ್ನು ಔಪಚಾರಿಕವಾಗಿ ಪ್ರಿನ್ಸೆಸ್‌ ರಸ್ತೆಯೆಂದು ನಾಮಕರಣ ಮಾಡಿರುವುದಕ್ಕೆ 1921ರ ದಾಖಲೆಗಳು ದೃಢಪಡಿಸುತ್ತವೆ. ಹೀಗಾಗಿ ಈ ಮೇಲಿನ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದರೆ, ಯೋಗ್ಯವಾದ ಗಮನಾರ್ಹ ಪುರಾವೆಗಳನ್ನು ಒದಗಿಸುತ್ತವೆ ಎಂದು ತಿರುಗೇಟು ನೀಡಿದ್ದಾರೆ.

ಈ ರಸ್ತೆಗೆ ಮರುನಾಮಕರಣವನ್ನು ಪ್ರಸ್ತಾಪಿಸುವ ಮೂಲಕ ಅನಗತ್ಯ ಗೊಂದಲವನ್ನು ಸೃಷ್ಟಿಸುವ ಬದಲು, ರಸ್ತೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಒಪ್ಪಿಕೊಳ್ಳುವುದು ಅತ್ಯಗತ್ಯ. ಅದರ ಮೂಲಗಳನ್ನು ಪರಿಶೀಲಿಸಿ, ಅಂದಿನ ರಾಜಮನೆತನ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಗುರುತಿಸಿ ಗೌರವಿಸಬೇಕು. ಅವರ ಪರಂಪರೆಯನ್ನು ಕಾಲ ಕಾಲಕ್ಕೂ ಶಾಶ್ವತವಾಗಿ ಸಂರಕ್ಷಿಸಿರುವುದನ್ನು ಮತ್ತು ಮುಂದಿನ ಪೀಳಿಗೆಗೆ ಈ ಪರಂಪರೆಯನ್ನು ಪರಿಚಯಿಸುವುದು ಪಾಲಿಕೆ ಹಾಗೂ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

Tags: