ಮೈಸೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ನೂರು ಬಾರಿ ಸುಳ್ಳನ್ನು ಹೇಳಿ ಸತ್ಯವನ್ನಾಗಿಸಲು ಹೊರಟಿದ್ದಾರೆ. ಹೀಗಾಗಿ ವಿಪಕ್ಷ ನಾಯಕನಿಗೆ ಸುಳ್ಳು ಹೇಳುವುದರಲ್ಲಿ ಪಿಎಚ್‌ಡಿ ಪದವಿ ಕೊಡಬೇಕು ಎಂದು ಆರ್.ಅಶೋಕ್ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು(ನ.21) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಅಶೋಕ್ ಅವರು ವಿರೋಧ ಪಕ್ಷಕ್ಕೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡುವ ವ್ಯಕ್ತಿಯಾಗಿದ್ದು, ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಂದಾಜು 12, 80, 540 ಹೆಚ್ಚುವರಿ ಬಿಪಿಎಲ್ ಕಾರ್ಡ್‌ಗಳು ಹೆಚ್ಚುವರಿಯಾಗಿವೆ ಎಂದು ಮಾಹಿತಿ ಲಭ್ಯವಾಗಿದ್ದು, ರಾಷ್ಟ್ರೀಯ ಆಹಾರ ಇಲಾಖೆಯಿಂದ ಸರ್ಕಾರಕ್ಕೆ ನೋಟಿಸ್ ಬಂದಿದೆ. ಹೀಗಾಗಿ ಸರ್ಕಾರ ಕ್ರಮ ಕೈಗೊಂಡಿದೆಯಷ್ಟೇ. ಈ ಬಗ್ಗೆ ಬಿಜೆಪಿಯವರು ಸುಮ್ಮನೆ ಸುಳ್ಳು ಹೇಳುತ್ತಾರೆ. ಏಕೆಂದರೆ ಅವರದ್ದು ಡಬಲ್ ಸ್ಟ್ಯಾಂಡರ್ಡ್ ಸರ್ಕಾರವಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮ ಸರ್ಕಾರ ಒಂದು ಬಿಪಿಎಲ್ ಕಾರ್ಡ್‌ನ್ನು ರದ್ದು ಮಾಡಿಲ್ಲ. ಆದರೆ ಆ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾಯಿಸಿದ್ದೇವೆ. ಬಿಪಿಎಲ್ ಕಾರ್ಡ್ ರದ್ದಾದರೆ ಅಕ್ಕಿ ಮಾತ್ರ ಸಿಗುವುದಿಲ್ಲ. ಆದರೆ ಬಿಪಿಎಲ್ ಕಾರ್ಡ್‌ನಿಂದ ಪಡೆದಿರುವ ಗೃಹಲಕ್ಷ್ಮೀ ನಿಲ್ಲುವುದಿಲ್ಲ. ಅದರಲ್ಲಿ ತೆರಿಗೆ ಪಾವತಿ ಮಾಡುವಂತಹ ಮಹಿಳೆಯರಿದ್ದರೆ ಮಾತ್ರ ಗೃಹಲಕ್ಷ್ಮೀ ಸಿಗುವುದಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ನೋಟಿಸ್ ನೀಡಿ ಇವಾಗ ನಾಟಕವಾಡುತ್ತಿದ್ದೀರಾ? ನಿಮಗೆ ನಾಚಿಕೆ ಆಗೋದಿಲ್ಲವಾ ಎಂದು ವಾಗ್ದಾಳಿ ನಡೆಸಿದ್ದಾರೆ.