ಗುಂಡ್ಲುಪೇಟೆ ತಾಲ್ಲೂಕಿನ ಕೆಲ ಗ್ರಾಮಗಳ ಅಂಗನವಾಡು, ಶಾಲೆಗಳಲ್ಲಿ ಮೇಲ್ಚಾವಣೆ ಸೋರಿಕೆ
ಗುಂಡ್ಲುಪೇಟೆ : ತಾಲ್ಲೂಕಿನ ಸೋಮಹಳ್ಳಿ ಗ್ರಾಮದ ಎರಡನೇ ಅಂಗನವಾಡಿಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಕುಸಿಯುವ ಹಂತ ತಲುಪುವ ಮುನ್ನ ದುರಸ್ತಿಪಡಿಸಬೇಕು ಎಂಬ ಒತ್ತಾಯ ಕೇಳಿ ಬಂದಿದ್ದು, ಇದನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಬೇಕಿದೆ.
ತಾಲ್ಲೂಕಿನಲ್ಲಿ ಒಟ್ಟು ೨೩೯ ಅಂಗನವಾಡಿ ಕಟ್ಟಡಗಳಿವೆ. ಅದರಲ್ಲಿ ೧೮ ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳು ಕೂರಲು ಯೋಗ್ಯವಿಲ್ಲದ ಕಾರಣ, ಸಮುದಾಯ ಭವನ, ಶಾಲೆಯಲ್ಲಿ ಹಾಗೂ ಬಾಡಿಗೆ ಕೊಠಡಿ ಪಡೆದುಕೊಂಡು ಅಂಗನವಾಡಿ ನಡೆಸ ಲಾಗುತ್ತಿದೆ. ಮತ್ತೆ ಸುಮಾರು ೧೮ ಕಡೆಗಳನ್ನು ಹೊಸದಾಗಿ ಅಂಗನ ವಾಡಿ ಕಟ್ಟಡ ನಿರ್ಮಿಸಲು ಕಾಮಗಾರಿ ನಡೆಯುತ್ತಿದೆ ಎಂದು ಸಿಡಿಪಿಒ ಹೇಮಾ ವತಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾ ಣಕ್ಕೆ ೬ ಕಡೆಗಳಲ್ಲಿ ಸ್ಥಳ ಗುರುತಿಸಿ ಪುರಸಭೆಯಿಂದ ನಿವೇಶನ ಖರೀದಿಸಲಾಗಿದೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಜಿಪಂನಿಂದ ಕಟ್ಟಡ ನಿರ್ಮಿಸಲು ಕೊರಲಾಗಿದೆ. ಅಲ್ಲದೆ ಹ್ಯಾಬಿಟೆಟ್ ಸಂಸ್ಥೆಗೆ ಕಟ್ಟಡ ನಿರ್ಮಾಣ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಸಿಡಿಪಿಒ ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ ಅಂಗನವಾಡಿ ಕಾಂಪೌಂಡ್ ಹಾಗೂ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದರೆ ಅದನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಪೋಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಸರ್ಕಾರಿ ಶಾಲೆಗಳ ಪುನಶ್ಚೇತನವಾಗಬೇಕಿದೆ
ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳು ಸಾಕಷ್ಟು ಹೊಸ ಕಟ್ಟಡ ಹಾಗೂ ದುರಸ್ತಿ ಕಾರ್ಯ ನಡೆದಿದ್ದು, ಒಂದಷ್ಟು ದುಸ್ಥಿತಿಯಲ್ಲಿರುವ ಕಟ್ಟಡಗಳ ರಿಪೇರಿ ಕಾರ್ಯ ನಡೆಸಬೇಕಿದೆ. ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ. ತಾಲ್ಲೂಕಿನ ವಡ್ಡಗೆರೆ ಗ್ರಾಮದ ಶಾಲೆಯ ಹಳೆಯ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಅದನ್ನು ದುರಸ್ತಿಪಡಿಸಬೇಕಿದೆ. ವಡ್ಡನಹೊಸಹಳ್ಳಿ ಗ್ರಾಮದಲ್ಲಿಯೂ ಶಾಲೆಯ ಮೇಲ್ಚಾವಣಿಗೆ ಅಳವಡಿಸಿರುವ ಮರದ ಸಲಕರಣೆಗಳು ಸಂಪೂರ್ಣ ಹಾಳಾಗಿವೆ. ಹೆಗ್ಗಡಹಳ್ಳಿ, ಭೋಗಯ್ಯನಹುಂಡಿ, ಚಿಕ್ಕತುಪ್ಪೂರು, ಬೆಟ್ಟದಮಾದಳ್ಳಿ ಪ್ರಾಥಮಿಕ ಶಾಲೆಗಳ ಕಟ್ಟಡ ಮೇಲ್ಚಾವಣಿ ಶಿಥಿಲಾವಸ್ಥೆಯಿಂದ ಕೂಡಿದ್ದು, ಇದನ್ನು ದುರಸ್ತಿಪಡಿಸಬೇಕಿದೆ.
ಶಾಲೆಗಳ ಅಭಿವೃದ್ಧಿಗೆ ೧೨೩ ಲಕ್ಷ ರೂ. ಅನುದಾನ ಕೇಳಲಾಗಿದ್ದು ಮುಂದಿನ ವರ್ಷದೊಳಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ವರ್ಷ ಶಾಲೆಗಳ ಕಟ್ಟಡ ಹಾಗೂ ದುರಸ್ತಿಗಾಗಿ ಜಿಪಂ ಮತ್ತು ತಾಪಂನಿಂದ ಅನಿರ್ಬಂಧಿತ ಅನುದಾನ ಪಡೆದುಕೊಂಡು ದುರಸ್ತಿ ಕಾರ್ಯ ಮಾಡಲಾಗುವುದು. ಈಗಾಗಲೇ ೨೨ ಲಕ್ಷ ರೂ. ನೀಡಿದ್ದು, ಕೆಲವು ಶಾಲೆಗಳ ಕಟ್ಟಡ ದುರಸ್ತಿಪಡಿಸಲಾಗಿದೆ ಎಂದು ಬಿಇಒ ಸ್ವಾಮಿ ತಿಳಿಸಿದ್ದಾರೆ.
ಮುಚ್ಚಿರುವ ರಾಘವಾಪುರ ಗ್ರಾಪಂ ರಾಷ್ಟ್ರೀಯ ಹೆದ್ದಾರಿ ೭೬೬ರ ಬದಿಯಲ್ಲಿ ರಾಘವಾಪುರ ಗ್ರಾಮ ಪಂಚಾಯಿತಿ ಇದ್ದು, ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಗ್ರಾಪಂನ್ನು ಮುಚ್ಚಲಾಗಿದೆ. ಹಿಂಬದಿ ಬಾಗಿಲು ತೆರೆದು ಕಾರ್ಯ ನಿರ್ವಹಿಸಲಾಗುತ್ತಿದೆ. ಆದ್ದರಿಂದ ಗ್ರಾಪಂ ಕಾರ್ಯಾಲಯವನ್ನು ರಾಘವಾಪುರ ಗ್ರಾಮದ ಕೆರೆ ಸಮೀಪವಿರುವ ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಸ್ಥಳಾಂತರಿಸುವ ಅನುವಾರ್ಯತೆ ಎದುರಾಗಿದೆ. ಇದರಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ವ್ಯರ್ಥವಾದಂತಾಗಿದೆ.





