ಮೈಸೂರು: ವಾಜಮಂಗಲ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಏ.29ರಂದು ಬೆಳಿಗ್ಗೆ 10 ಗಂಟೆಗೆ ವಾಜಮಂಗಲ ಗ್ರಾಮದಿಂದ ಸಿದ್ದಾರ್ಥನಗರದ ಬುದ್ಧ ಪ್ರತಿಮೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮಹಾಪೌರ ಎಂ.ಪುರುಷೋತ್ತಮ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನಾ ಮೆರವಣಿಗೆಗೆ ಎಲ್ಲ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಭೀಮ ಬಂಧುಗಳು ಪಾಲ್ಗೊಳ್ಳಲಿದ್ದಾರೆ. ಸಿದ್ದಾರ್ಥನಗರದ ಬುದ್ಧ ಪ್ರತಿಮೆ ಬಳಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಗೃಹಸಚಿವರಿಗೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ವಿಽಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅಂಬೇಡ್ಕರ್ ಅವರನ್ನು ಅಪಮಾನಿಸಿ ಗೆದ್ದುಕೊಳ್ಳಬಹುದು ಎಂದುಕೊಳ್ಳಬೇಡಿ. ಅಂಬೇಡ್ಕರ್ ಅನುಯಾ ಯಿಗಳು ಎಂದಿಗೂ ಮೈಮರೆತು ಕುಳಿತುಕೊಳ್ಳುವುದಿಲ್ಲ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಕಿಡಿಗೇಡಿಗಳಿಗೆ ಕಾನೂನು ರೀತಿಯಲ್ಲಿ ತಕ್ಕ ಪಾಠ ಕಲಿಸದೆ ವಿರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಂಬೇಡ್ಕರ್ ಅವರ ಹೆಸರಿನಲ್ಲಿ ನಾಲ್ಕು ತಲೆಮಾರುಗಳು ಕುಳಿತು ತಿಂದು ಉಂಡರೂ ಮುಗಿಯದಷ್ಟು ಆಸ್ತಿ ಸಂಪಾದಿಸಿರುವ ರಾಜಕೀಯ ಮುಖಂಡರು ಅಂಬೇಡ್ಕರ್ ಅವರ ಪ್ರತಿಮೆಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸುತ್ತಿದ್ದರೂ ಪ್ರತಿಭಟನೆ ನಡೆಸದಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಣಿಯಯ್ಯ, ವಾಜಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಕೆ.ಶಿವು, ವಾಜಮಂಗಲ ಗ್ರಾಮದ ಮುಖಂಡರಾದ ಚಿನ್ನಸ್ವಾಮಿ, ಸುರೇಶ್, ಮಂಜು, ಸಿದ್ದಪ್ಪ, ಸಣ್ಣಪ್ಪ, ಮಹದೇವಸ್ವಾಮಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.





