ಮೈಸೂರು : ಈಗಿನ ಮೈಸೂರಿನ ಘನತೆ, ಸಂಸ್ಕೃತಿ ಹಾಗೂ ವಿಶಾಲತೆಗೆ ಧಕ್ಕೆ ಆಗದಂತೆ ಗ್ರೇಟರ್ ಮೈಸೂರು ರಚನೆ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ 3 ರಲ್ಲಿ ನಡೆದ ಮೊದಲ “ಗ್ರೇಟರ್ ಮೈಸೂರು” ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ, ಅಧಿಕಾರಿಗಳಿಗೆ ತಮ್ಮ ಸ್ಪಷ್ಟ ಪರಿಕಲ್ಪನೆಗಳನ್ನು ವಿವರಿಸಿ ಸೂಚನೆಗಳನ್ನು ನೀಡಿದರು.
ಬೆಂಗಳೂರಿನ ರೀತಿ ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು, STP ಯಾವುದರ ಸಮಸ್ಯೆಯೂ ಇರದಂತೆ ಸ್ಪಷ್ಟ ವೈಜ್ಞಾನಿಕ ಬ್ಲೂ ಪ್ರಿಂಟ್ ಸಿದ್ದಪಡಿಸಿ ಎಂದು ಜಿಲ್ಲಾಡಳಿತಕ್ಕೆ ಸಿ.ಎಂ ಸೂಚನೆ ನೀಡಿದರು.
ಗ್ರೇಟರ್ ಮೈಸೂರು ಸುಸಜ್ಜಿತವಾಗಿರಬೇಕು ಮತ್ತು ವ್ಯವಸ್ಥಿತವಾಗಿರಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಹೀಗೆ ಒದಗಿಸುವಾಗ ಈಗಿನ ಜನಸಂಖ್ಯೆಗೆ ಮಾತ್ರ ಯೋಜನೆ ರೂಪಿಸದೆ ಮುಂದಿನ 15-20 ವರ್ಷಗಳ ಮುಂದಾಲೋಚನೆಯಿಂದ ವೈಜ್ಞಾನಿಕ ಯೋಜನೆ ರೂಪಿಸಿ ಎಂದು ಸೂಚಿಸಿದರು.
ಇದನ್ನು ಓದಿ: ಗ್ರೇಟರ್ ಮೈಸೂರು ರಚನೆಗೆ ಮರುಜೀವ
ಟ್ರಾಫಿಕ್ ಸಮಸ್ಯೆ ಇರಬಾರದು
ಉದ್ಯೋಗ ಸೃಷ್ಟಿಯಿಂದ ಘನ ತ್ಯಾಜ್ಯ ನಿರ್ವಹಣೆವರೆಗೂ ಆಧುನಿಕ ತಂತ್ರಜ್ಞಾನ ಬಳಕೆ ಬಗ್ಗೆ ಯೋಜನೆ ಸಿದ್ಧಪಡಿಸಿ. ತ್ಯಾಜ್ಯ ವಿಲೇವಾರಿ, ಕೈಗಾರಿಕಾ ತ್ಯಾಜ್ಯ ವಿಲೇವಾರಿ ಎಲ್ಲವೂ ವೈಜ್ಞಾನಿಕವಾಗಿರಬೇಕು. ಆಧುನಿಕ ತಂತ್ರಜ್ಞಾನದ ನೆರವು ಪಡೆಯಬೇಕು ಎಂದರು.
ಬಡಾವಣೆಗಳ ನಿರ್ಮಾಣದಲ್ಲಿ ಆಗುವಾಗ ಚರಂಡಿ, ರಸ್ಯೆಗಳು, ಒಳಚರಂಡಿ, ನೀರು, ವಿದ್ಯುತ್ ಜೊತೆಗೆ ಪಾರ್ಕ್ ಗಳು ವ್ಯವಸ್ಥಿತವಾಗಿರಬೇಕು. ಮೈಸೂರಿಗೆ ಮತ್ತೊಂದು ಹೊರ ವರ್ತುಲ ರಸ್ತೆ ಅಗತ್ಯ ಬೀಳುತ್ತದೆ. ಇದಕ್ಕೆ ಈಗಲೇ ಯೋಜನೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಶಾಲವಾದ ರಸ್ತೆಗಳು ಮೈಸೂರಿನ ಹೆಗ್ಗಳಿಕೆ, ಗ್ರೇಟರ್ ಮೈಸೂರು ಇನ್ನಷ್ಟು ಯೋಜನಾ ಬದ್ಧವಾಗಿರಬೇಕು. ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಾಗಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಚ್.ಸಿ.ಮಹದೇವಪ್ಪ, ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್, ಶಾಸಕರಾದ ಕೆ.ರೀಶ್ ಗೌಡ, ಜಿ ಟಿ ದೇವೇಗೌಡ, ತನ್ವೀರ್ ಸೇಠ್, ವಿಧಾನ ಸದಸ್ಯರಾದ ವಿಶ್ವನಾಥ್, ಸಿ ಎನ್ ಮಂಜೇಗೌಡ, ಯತೀಂದ್ರ ಸಿದ್ದರಾಮಯ್ಯ, ಕೆ ಶಿವಕುಮಾರ್, ತಿಮ್ಮಯ್ಯ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.





