ಮೈಸೂರು : ಅಬ್ಬಾ, ಎಲ್ಲೂ ನೋಡಿದ್ರೂ ಜನ, ಜನ.. ಚಾಮುಂಡಿಬೆಟ್ಟ ಸಂಪೂರ್ಣವಾಗಿ ಜನ ಸಾಗರದಿಂದ ತುಂಬಿ ತುಳುಕುತ್ತಿತ್ತು. ಇದೊಂದೇ ವರ್ಷ ಅಂತಲ್ಲಾ ಪ್ರತಿ ವರ್ಷವೂ ಕೂಡ ಆಷಾಢ ಶುಕ್ರವಾರಕ್ಕೆ ಚಾಮುಂಡಿಬೆಟ್ಟಕ್ಕೆ ನಾನಾ ಭಾಗದಿಂದ ಭಕ್ತಸಾಗರವೇ ಹರಿದುಬರುತ್ತದೆ.
ಮೊದಲ ಆಷಾಢ ಶುಕ್ರವಾರವಾದ ಪ್ರಯುಕ್ತ ತಾಯಿ ಚಾಮುಂಡೇಶ್ವರಿಗೆ ವಿಶೇಷವಾದ ಪೂಜೆಯಲ್ಲಿ ಸಲ್ಲಿಸಲಾಗಿದೆ. ಬೆಟ್ಟದಲ್ಲಿ ಒಂದು ರೀತಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಭಕ್ತರು ಸಹ ಈ ಹಬ್ಬದಲ್ಲಿ ಭಾಗವಹಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾದರು.
ತಾಯಿಗೆ ಮೊದಲ ಆಷಾಢ ಶುಕ್ರವಾರದ ಪ್ರಯುಕ್ತ ಬೆಳಗಿನ ಜಾವ ೩.೩೦ಕ್ಕೆ ದೇವಸ್ಥಾನದಲ್ಲಿ ಎಲ್ಲಾ ಪುಜಾವಿಧಿವಿಧಾನಗಳು ಆರಂಭವಾಗಿದ್ದವು. ತಾಯಿಗೆ ಅಭಿಷೇಕ, ಅರ್ಚನೆ, ಅಷ್ಟೋತ್ತರ ಪೂಜೆಗಳನ್ನ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಅಲ್ಲದೆ ಇಡೀ ದೇವಸ್ಥಾನವನ್ನು ಹೂಗಳಿಂದ ಅಲಂಕಾರ ಮಾಡಿದ್ದರಿಂದ ಅದನ್ನ ನೋಡಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ. ಅಷ್ಟರಮಟ್ಟಿಗೆ ಹೂಗಳಿಂದ ದೇವಸ್ಥಾನವನ್ನು ಸಿಂಗಾರ ಮಾಡಲಾಗಿತ್ತು.
ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ಬಂದು ತಾಯಿಯ ದರ್ಶನ ಮಾಡಿದರೆ ಒಳಿತಾಗುತ್ತದೆ ಎನ್ನುವುದು ಒಂದು ನಂಬಿಕೆ ಈಗಾಗಿಯೇ ತಾಯಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ಬೆಟ್ಟಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡು ಧನ್ಯರಾದರು.
ಅದರಲ್ಲೂ ವಿವಿಧ ಪುಷ್ಪಗಳಿಂದ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನ ನೋಡಿ ಇಡೀ ಭಕ್ತ ಸಮೂಹವೇ ಪುನೀತರಾದರು. ಇನ್ನು ಹಲವು ಭಕ್ತರ ಬೆಟ್ಟಕ್ಕೆ ೧೦೦೧ ಮೆಟ್ಟಿಲುಗಳನ್ನ ಹತ್ತಿಕೊಂಡು ಬಂದು ತಾಯಿಯನ್ನ ನೋಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದುಮ ಭಕ್ತರ ಮೊಗದಲ್ಲಿ ಧನ್ಯತಾ ಭಾವ ಮನೆ ಮಾಡಿತ್ತು.
ಇನ್ನು ಬೆಟ್ಟದಲ್ಲಿ ಬರುವಂತ ಭಕ್ತರಿಗೆ ಎಲ್ಲಾ ರೀತಿ ಮೂಲ ಸೌರ್ಕರ್ಯಗಳನ್ನ ಒದಗಿಸಲಾಗಿತ್ತು. ಭಕ್ತರಿಗೆ ಕುರಿಯುವ ನೀರಿನ ವ್ಯವಸ್ಥೆ, ಉಪಹಾರ, ಪ್ರಸಾದ, ವಾಹನಗಳ ನಿಲುಗಡೆ, ಶೌಚಾಲಯ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನ ಒದಗಿಸಲಾಗಿತ್ತು.
ಅಲ್ಲದೆ ಸರತಿ ಸಾಲಿನಲ್ಲಿ ದರ್ಶನಕ್ಕೆ ಹೋಗುವ ಭಕ್ತರಿಗೆ ಯಾವುದೇ ರೀತಿಯ ನೂಕು ನುಗ್ಗಲು ಉಂಟಾಗದಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದರು. ಅಲ್ಲದೆ ಎಲ್ಲಾ ಕಡೆ ಸಿಸಿಟಿವಿ ಕ್ಯಾಮಾರಗಳನ್ನ ಅಳವಡಿಸಲಾಗಿದ್ದು, ಬಿಗಿಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ಸಹ ನಿಯೋಜನೆ ಮಾಡಿದ್ದರು.