ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ದಲಿತ ಮುಖ್ಯಮಂತ್ರಿ ಕೂಗು ಜೋರಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ಈ ಕುರಿತು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಜಿ.ಪರಮೇಶ್ವರ್ ಅಭಿಮಾನಿಗಳು, ದಲಿತ ಸಮುದಾಯ ಯಾವಾಗಲೂ ಕಾಂಗ್ರೆಸ್ ಪರವಾಗಿದೆ. ಅನೇಕ ಸಂದರ್ಭದಲ್ಲಿ ದಲಿತರಿಗೆ ಸಿಎಂ ಸ್ಥಾನ ಕೈತಪ್ಪಿದೆ. ಪರಮೇಶ್ವರ್‌ರಿಗೆ 2013ರಲ್ಲಿ ಸಿಎಂ ಆಗೋ ಅವಕಾಶ ಇತ್ತು. ಆ ವೇಳೆ ಅವರನ್ನು ಹೇಗೆ ಸೋಲಿಸಿದ್ರು ಅನ್ನೋದು ಗೊತ್ತಿದೆ. ನಾವಿಲ್ಲಿ ಯಾವುದೇ ಸಮಾಜದ ವಿರುದ್ಧ ಮಾತನಾಡಲ್ಲ. ಪ್ರತಿ ಬಾರಿಯೂ ಕಾಂಗ್ರೆಸ್ ಪಕ್ಷವನ್ನ ದಲಿತ ಸಮುದಾಯ ಬೆಂಬಲಿಸುತ್ತಾ ಬಂದಿದೆ. ದಲಿತರಿಗೆ ಅನ್ಯಾಯವಾಯ್ತು ಯಾರು ಪಾರ್ಟಿ ಬಿಟ್ಟು ಹೋಗಿಲ್ಲ. ನಾವು ವೋಟ್ ಹಾಕಿರೋದಿಕ್ಕೆ ಕಾಂಗ್ರೆಸ್ ಗೆದ್ದಿರೋದು.
ಮೈಸೂರಿನಲ್ಲಿ ದಲಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಹಿಂದ ಸಮಾವೇಶ ಮಾಡಬೇಕು. ಅಹಿಂದ ಅಂತ ಬಂದ್ರೆ ದಲಿತ ಸಮಾಜ ಕೂಡ ಸೇರುತ್ತದೆ. ಪರಮೇಶ್ವರ್ ಸಿಎಂ ಮಾಡುವುದಾದರೆ ನಾವೂ ಅಹಿಂದಾ ಸಮಾವೇಶದಲ್ಲಿ ಭಾಗಿಯಾಗುತ್ತೇವೆ. ಪರಮೋತ್ಸವ ಮಾಡುವ ವೇಳೆ ಪರಮೇಶ್ವರ್‌ರನ್ನ ಕಾರ್ಯಕ್ರಮಕ್ಕೆ ಹೋಗಬಾರದು ಅನ್ನೋ ಅಡೆ ತಡೆ ಹಾಕಿದ್ರಿ. ಮೈಸೂರಿಗೆ ನೀವೇ ಲೀಡರ್ ಆಗ್ಬೇಕು ಅನ್ನೋದು ನಿಮ್ಮ ಭ್ರಮೆ. ಅಹಿಂದ ಅಂತ ಹೇಳಿ ಅಧಿಕಾರ ನೀವು ತಗೋಳೋದಲ್ಲ. ನಮಗೂ ಅಧಿಕಾರ ಕೊಡಿ. ಸಿದ್ದರಾಮಯ್ಯನವರೇ ನೀವು ಸಿಎಂ ಆಗಿದ್ದೀರಾ. ಈಗ ನೀವೇ ದಲಿತರಿಗೆ ಅವಕಾಶ ಮಾಡಿಕೊಡಿ. ನೀವೇ ಪರಮೇಶ್ವರ್‌ರನ್ನು ಸಿಎಂ ಮಾಡ್ತೀವಿ ಅಂತ ಘೋಷಣೆ ಮಾಡಿ. ಮೈಸೂರಿನಲ್ಲಿ ಅಹಿಂದ ಸಮಾವೇಶ ಮಾಡ್ತಿದ್ದಾರೆ. ಪರಮೇಶ್ವರ್‌ಗೆ ಅಧಿಕಾರ ಕೊಟ್ರೆ ಹೋಗ್ತಿವಿ. ಇಲ್ಲ ಅಂದ್ರೆ ನಾವು ಹೋಗಲ್ಲ. ನಾವು ಮೈಸೂರಿನಲ್ಲಿ ದಲಿತ ಸಮಾವೇಶ ಮಾಡ್ತೀವಿ. ದಲಿತ ಸಮಾಜದ ಎಲ್ಲರಿಗೂ ಆಹ್ವಾನ ನೀಡ್ತೀವಿ ಎಂದು ಪರಮೇಶ್ವರ್ ಅಭಿಮಾನಿಗಳ ಸಂಘದ ಅಧ್ಯಕ್ಷ, ದೇವರಾಜ ಅರಸು ಅಭಿಮಾನಿಗಳ ಸಂಘದ ಅಧ್ಯಕ್ಷ ಬಿಳಿಕೆರೆ ರಾಜು ಹೇಳಿದರು.





