ಮೈಸೂರು: ಚಾಮುಂಡಿಬೆಟ್ಟ ಕಾರ್ಯದರ್ಶಿ ರೂಪ ಯಡವಟ್ಟೊಂದನ್ನು ಮಾಡಿಕೊಂಡಿದ್ದು, ಚಾಮುಂಡಿ ಬೆಟ್ಟದ ದಾಸೋಹ ಭವನಕ್ಕೆ ಶೂ ಧರಿಸಿ ಬಂದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಆಷಾಢ ಶುಕ್ರವಾರಕ್ಕೆ ಚಾಮುಂಡಿಬೆಟ್ಟದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಸಿದ್ಧತೆ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ದಾಸೋಹ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಚಾಮುಂಡಿ ಬೆಟ್ಟ ಕಾರ್ಯದರ್ಶಿ ರೂಪ ಯಡವಟ್ಟೊಂದನ್ನು ಮಾಡಿಕೊಂಡಿದ್ದು, ದಾಸೋಹ ಭವನಕ್ಕೆ ಶೂ ಧರಿಸಿಯೇ ಬಂದಿದ್ದರು.
ದಾಸೋಹ ಭವನಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮತ್ತು ಕಮಿಷನರ್ ಸೀಮಾ ಲಾಟ್ಕರ್ ಮತ್ತು ಅಧಿಕಾರಿಗಳೆಲ್ಲರು ಶೂ ತೆಗೆದು ಬಂದಿದ್ದರು. ಆದ್ರೆ ರೂಪ ಅವರು ಮಾತ್ರ ಶೂ ಹಾಕಿಕೊಂಡು ದಾಸೋಹ ಭವನದ ಒಳಗೆ ಬಂದು ಅಧಿಕಾರಿಗಳ ಪಕ್ಕದಲ್ಲೇ ಕುಳಿತಿದ್ದರು.
ಈ ಮೂಲಕ ದಾಸೋಹ ಭವನದಲ್ಲಿ ಪಾಲಿಸಬೇಕಾದ ನಿಯಮವನ್ನು ರೂಪ ಗಾಳಿಗೆ ತೂರಿದ್ದು, ಪತ್ರಕರ್ತರ ಪ್ರಶ್ನೆಗೆ ಮೌನವಾಗಿ ಕುಳಿತಿದ್ದರು. ಪತ್ರಿಕಾಗೋಷ್ಠಿಗೆ ಸರಿಯಾದ ವ್ಯವಸ್ಥೆ ಮಾಡದ ಕಾರ್ಯದರ್ಶಿ ರೂಪ ಜೊತೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಕೆಲಕಾಲ ಚರ್ಚೆ ಮಾಡಿದರು.





