Mysore
25
scattered clouds
Light
Dark

ಕನ್ನಡ ಭಾಷೆ ಬೆಳವಣಿಗೆಗೆ ಬಸವಣ್ಣರವರ ವಚನಗಳು ಜೀವ ತುಂಬಿವೆ: ಗಿರೀಶ್

ಮೈಸೂರು:‌ ಸಮಾಜ ಸುಧಾರಕ ಬಸವಣ್ಣ ಅವರು 12 ನೇ ಶತಮಾನದಲ್ಲಿ ಆಡು ಭಾಷೆ ಕನ್ನಡದಲ್ಲೇ ವಚನ ರಚಿಸಿ  ಕನ್ನಡ ಭಾಷ ಬೆಳವಣಿಗೆಗೆ  ಜೀವ ತುಂಬಿದ್ದರು ಎಂದು ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್‌ ಅಭಿಪ್ರಾಯಪಟ್ಟರು.

ಮೈಸೂರು ದಸರಾ ವಸ್ತುಪ್ರದರ್ಶನದ ಕರ್ನಾಟಕ ಸಂಭ್ರಮ50 ಸಾಂಸ್ಕೃತಿಕ ವೇದಿಕೆಯಲ್ಲಿ ಕರ್ನಾಟಕ‌ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣಅವರ ವಚನಗಾಯನ ಹಾಗೂ ನೃತ್ಯರೂಪಕ ಕಾರ್ಯಕ್ರಮವನ್ನ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಬದಲಾವಣೆಗಾಗಿ ಅಸಮಾನತೆ ಹೋಗಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಬಸವಣ್ಣ ರವರ ಸಂಕಲ್ಪ ಮಾಡಿ ಬಿಜ್ಜಳನ ಆಸ್ಥಾನದಲ್ಲಿ ಕ್ರಾಂತಿ ಉಂಟು ಮಾಡಿದರು ಎಂದರು.

ಬಸವಣ್ಣ ಅವರು ಆಡು ಮಾತಿನಲ್ಲೇ ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನ ಸಾಹಿತ್ಯ ರಚಿಸಿ ಕನ್ನಡಭಾಷೆಯ ಬೆಳವಣಿಗೆಗೆ ಶ್ರಮಿಸಿ ವಿಶ್ವಗುರುವಾದರು. ಸಮಾಜದಲ್ಲಿ ಇರುವ ಅಂಕುಡೊಂಕು ತಾರತಮ್ಯಗಳನ್ನ ಸರಿಪಡಿಸಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದ ಅವರು 12ನೇ ಶತಮಾನದಲ್ಲೆ ಅನುಭವ ಮಂಟಪ ಸ್ಥಾಪನೆ ಮಾಡಿ ಜನಪರ ಆಡಳಿತ ನಿರ್ದೇಶಿಸಿದ್ದರು ಎಂದು ಹೇಳಿದರು.

 

ಬಿಜ್ಜಳ ರಾಜ ಆಸ್ಥಾನದಲ್ಲಿ ಬಸವಣ್ಣ ಮಂತ್ರಿಯಾಗಿ, ಕವಿಯಾಗಿ, ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರಾಗಿ ಕನ್ನಡ ಭಾಷಾ ಸಾಹಿತ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹಾಗಾಗಿ ಬಸವಣ್ಣ ಒಂದು ಜಾತಿ ಹಾಗೂ ಒಂದು ಪ್ರದೇಶಕ್ಕೆ ಸೀಮಿತರಲ್ಲ ಅವರು ಇಡೀ ವಿಶ್ವಕ್ಕೆ ಗುರು ಎಂದರು.

ಇದೇ ಸಂಧರ್ಭದಲ್ಲಿ ವಿಶ್ವಗುರು ಬಸವಣ್ಣ ಪ್ರಶಸ್ತಿಗೆ ಭಾಜನರಾದ , ಮಹದೇವಪ್ರಸಾದ್, ಕಂಡೇಶ್, ಮಲ್ಲಿಗೆ ವೀರೇಶ್, ಸರ್ವಮಂಗಳ, ಪುಷ್ಪಲತಾ ರವರನ್ನ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಭ್ರಮ ವ್ಯವಸ್ಥಾಪಕರಾದ ಕೃಷ್ಣ,  ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಡಾ. ನಾಗರಾಜ ವಿ ಭೈರಿ, ನಿರೂಪಕ ಅಜಯ್ ಶಾಸ್ತ್ರಿ, ಬೆಟ್ಟೆಗೌಡ, ಗಾಯಕ ಅಮ್ಮರಾಮಚಂದ್ರ, ಮಹಲಿಂಗು, ಸಿರಿಬಾಲು, ಸದಾಶಿವ, ಇನ್ನಿತರರು ಇದ್ದರು.