Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ಇದು ಏಳನೇ ತರಗತಿ ಹುಡುಗಿಯ ಹೋರಾಟದ ಕಥೆ …

ಈ ಹಿಂದೆ ಹರ್ಷಿಕಾ ಪೂಣಾಚ್ಚ ಅಭಿನಯದ ‘ಚಿಟ್ಟೆ’ ಎಂಬ ಹಾರರ್‍ ಚಿತ್ರವನ್ನು ನಿರ್ದೇಶಿಸಿದ್ದ ಸಂಭಾಷಣೆಕಾರ ಎಂ.ಎಲ್‍. ಪ್ರಸನ್ನ, ಈ ಬಾರಿ ಮಕ್ಕಳ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಹೆಸರು ‘ಭಾರತಿ ಟೀಚರ್ ಏಳನೇ ತರಗತಿ’. ಈ ಚಿತ್ರದ ಒಂದು ಹಾಡು ಮತ್ತು ಕೆಲವು ದೃಶ್ಯಗಳನ್ನು ಹೊರತುಪಡಿಸಿ, ಮಿಕ್ಕಂತೆ ಅವರು ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಸಚಿವ ಸಂತೋಷ್‍ ಲಾಡ್‍, ಜಿಲ್ಲಾಧಿಕಾರಿಯಾಗಿ ನಟಿಸುತ್ತಿದ್ದಾರೆ. ಅವರ ಭಾಗದ ಚಿತ್ರೀಕರಣ ಮತ್ತು ‘ಕನ್ನಡಿಗ’ ಎಂಬ ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿ ಇದೆ.

ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ವಿ. ನಾಗೇಂದ್ರ ಪ್ರಸಾದ್ ಒಡೆತನದ ಮ್ಯೂಸಿಕ್ ಬಜಾರ್‍ನಲ್ಲಿ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಈ ಹಾಡುಗಳ ಬಿಡುಗಡೆ ಕಾರ್ಯಕ್ರಮ ಶಾಲಾ ಮಕ್ಕಳ ಸಮ್ಮುಖದಲ್ಲೇ ನಡೆದಿದ್ದು ವಿಶೇಷ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ದಾವಣಗೆರೆ ಮೂಲದ ಡಾ.ವಿ.ವಿಜಯಲಕ್ಷೀ ಮತ್ತು ಉದ್ಯಮಿ ವೀರಕಪುತ್ರ ಶ್ರೀನಿವಾಸ್ ತಲಾ ಒಂದೊಂದು ಹಾಡುಗಳನ್ನು ಲೋಕಾರ್ಪಣೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆಯುವುದರ ಜೊತೆಗೆ ಸಂಗೀತ ಸಂಯೋಜಿಸಿ, ನಿರ್ದೇಶನದ ಜವಾಬ್ದಾರಿಯನ್ನೂ ಪ್ರಸನ್ನ ಹೊತ್ತಿದ್ದಾರೆ. ಚಿತ್ರದ ಕುರಿತು ಮಾತನಾಡುವ ಅವರು, ‘ಭಾರತಿ ಎನ್ನುವ ಏಳನೇ ತರಗತಿ ವಿದ್ಯಾರ್ಥಿಯೊಬ್ಬಳು ತನ್ನ ಊರಿನವರೆಲ್ಲರನ್ನು ಸಾಕ್ಷರನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಾಳೆ. ಈ ಹಾದಿಯಲ್ಲಿ ಆಕೆ ಎದುರಿಸುವ ನೋವು, ಅವಮಾನ ಮತ್ತು ಇದೆಲ್ಲವನ್ನೂ ಮೀರಿ ಆಕೆ ಹೇಗೆ ಗೆದ್ದು ನಿಲ್ಲುತ್ತಾಳೆ ಎಂಬುದು ಚಿತ್ರದ ಕಥೆ. ಇಲ್ಲಿಯವರೆಗೂ 34 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಜಿಲ್ಲಾದಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಒಟ್ಟು 10 ಗೀತೆಗಳು ಇರಲಿದ್ದು, ಎಲ್ಲವನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ’ ಎಂದರು.

ಸಿರಗುಪ್ಪ ಮೂಲದ ಉದ್ಯಮಿ ರಾಘವೇಂದ್ರ ರೆಡ್ಡಿ ಅವರು ಪೂಜ್ಯಾಯ ಫಿಲಂಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಶಿಕ್ಷಕರಾಗಿ ಸಿಹಿಕಹಿ ಚಂದ್ರು, ಟೈಟಲ್ ರೋಲ್‌ದಲ್ಲಿ ಕು.ಯಶಿಕಾ, ಗೋವಿಂದೇಗೌಡ, ಅಶ್ವಿನ್‌ ಹಾಸನ್, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ದಿವ್ಯಾ ಅಂಚನ್, ಬೆನಕಾ ನಂಜಪ್ಪ, ರೋಹಿತ್‌ ರಾಘವೇಂದ್ರ, ಸೌಜನ್ಯ ಸುನಿಲ್, ಎಂ.ಜೆ. ರಂಗಸ್ವಾಮಿ ಮುಂತಾದವರು ನಟಿಸಿದ್ದಾರೆ. ಎಂ.ಬಿ.ಹಳ್ಳಿಕಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

Tags:
error: Content is protected !!