Mysore
19
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಪಕ್ಕದ ರಾಜ್ಯಗಳಲ್ಲಿ ‘45’ ಚಿತ್ರದ ಪ್ರಚಾರ ಮಾಡಿದ ಶಿವಣ್ಣ ಮತ್ತು ಉಪೇಂದ್ರ

ಕನ್ನಡದಲ್ಲಿ ಪ್ಯಾನ್‍ ಇಂಡಿಯಾ ಚಿತ್ರಗಳು ಆಗಾಗ ತಯಾರಾಗುತ್ತಿದ್ದರೂ, ಆ ಚಿತ್ರಗಳನ್ನು ಬೇರೆ ರಾಜ್ಯಗಳಲ್ಲಿ ಪ್ರಚಾರ ಮಾಡುವುದಕ್ಕೆ, ಬಿಡುಗಡೆ ಮಾಡುವುದಕ್ಕೆ ಚಿತ್ರತಂಡಗಳು ಮುಂದಾಗುವುದೇ ಇಲ್ಲ. ಮೇಲ್ನೋಟಕ್ಕೆ ಪ್ಯಾನ್‍ ಇಂಡಿಯಾ ಚಿತ್ರ ಎಂದು ಹೇಳಲಾಗುತ್ತದಾದರೂ, ಚಿತ್ರ ಕರ್ನಾಟಕ ಬಿಟ್ಟು ಎಲ್ಲೂ ಹೋಗುವುದಿಲ್ಲ.

‘45’ ಚಿತ್ರವನ್ನು ಪ್ಯಾನ್‍ ಇಂಡಿಯಾ ಚಿತ್ರ ಎಂದ ಚಿತ್ರತಂಡ ಮೊದಲಿನಿಂದ ಹೇಳಿಕೊಂಡೇ ಬಂದಿತ್ತು. ಚಿತ್ರದ ಟೀಸರ್‍ ಐದು ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಬೇರೆ ರಾಜ್ಯಗಳಲ್ಲಿ ಪ್ರಚಾರ ಮಾಡುತ್ತೀರೋ? ಇಲ್ಲವೋ? ಎಂಬ ಪ್ರಶ್ನೆಗೆ, ಸದ್ಯದಲ್ಲೇ ಎಂಬ ಉತ್ತರ ಚಿತ್ರತಂಡದಿಮದ ಬಂದಿತ್ತು. ಅದಕ್ಕೆ ಸರಿಯಾಗಿ ಇತ್ತೀಚೆಗೆ ‘45’ ಚಿತ್ರತಂಡ ಪರರಾಜ್ಯಗಳಿಗೆ ಹೋಗಿ ಚಿತ್ರದ ಪತ್ರಿಕಾಗೋಷ್ಠಿ ಮಾಡಿಬಂದಿದೆ.

ಇತ್ತೀಚೆಗೆ ಶಿವರಾಜಕುಮಾರ್, ಉಪೇಂದ್ರ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ, ಗೀತಾ ಶಿವರಾಜಕುಮಾರ್‍, ನಿರೂಪಕಿ ಅನುಶ್ರೀ ಮುಂತಾದವರು ಖಾಸಗಿ ಪ್ಲೇನ್‍ನಲ್ಲಿ ಮುಂಬೈ, ಹೈದರಾಬಾದ್‍, ಚೆನ್ನೈ ಮತ್ತು ಕೊಚ್ಚಿಯಲ್ಲಿ ಚಿತ್ರದ ಪ್ರಚಾರ ಮಾಡಿ ಬಂದಿದ್ದಾರೆ.

ಸೂರಜ್‍ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್‍ ರೆಡ್ಡಿ ನಿರ್ಮಾಣದ ‘45’ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ. ಶೆಟ್ಟಿ ಜೊತೆಗೆ ಕೌಸ್ತುಭ ಮಣಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್‍ ಜನ್ಯ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವಿದೆ.

ಟೊರೊಂಟೋದ ಖ್ಯಾತ VFX ಸಂಸ್ಥೆಯಾದ MARZನಲ್ಲಿ ಗ್ರಾಫಿಕ್ಸ್ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ಗ್ರಾಫಿಕ್ಸ್ ಕೆಲಸ ಮುಕ್ತಾಯವಾಗಲಿದೆಯಂತೆ. ಈ ಚಿತ್ರದಲ್ಲಿ ಶೇ. 40ರಷ್ಟು ಗ್ರಾಫಿಕ್ಸ್ ಕೆಲಸ ಇರುತ್ತದೆ ಎಂದು ನಿರ್ದೇಶಕ ಅರ್ಜುನ್‍ ಜನ್ಯ ಹೇಳಿಕೊಂಡಿದ್ದಾರೆ.

‘45’ ಚಿತ್ರವು ಆಗಸ್ಟ್ 15ರಂದು ಪ್ಯಾನ್‍ ಇಂಡಿಯಾ ಚಿತ್ರವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Tags:
error: Content is protected !!