Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಯ ಬಗ್ಗೆ ಎಸ್‍.ನಾರಾಯಣ್‍ ಚಿತ್ರ

‘ದುನಿಯಾ’ ವಿಜಯ್‍ ಮತ್ತು ಕೆ.ಮಂಜು ಮಗ ಶ್ರೇಯಸ್‍ ಮಂಜು ಅಭಿನಯದಲ್ಲಿ ಎಸ್‍.ನಾರಾಯಣ್‍ ಒಂದು ಚಿತ್ರ ನಿರ್ದೇಶನ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಈಗ ಆ ಚಿತ್ರದ ಮೊದಲ ಹಾಡಿನ ಲಿರಿಕಲ್‍ ವೀಡಿಯೋ ಬಿಡುಗಡೆ ಆಗಿದೆ.  ಎಸ್‍.ನಾರಾಯಣ್‍ ಅವರೇ ಹಾಡು ಬರೆದು, ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ಚಂದನ್‍ ಶೆಟ್ಟಿ ಧ್ವನಿಯಾಗಿದ್ದಾರೆ.

ಈ ಹಾಡಿನ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ ಎನ್ನುವ ನಾರಾಯಣ್, ‘’ದುನಿಯಾ’ ವಿಜಯ್ ಚಿತ್ರತಂಡಕ್ಕೆ ಬರುವವರೆಗೂ ಈ ಶೀರ್ಷಿಕೆ ಇರಲಿಲ್ಲ. ಅವರು ಬಂದ ನಂತರ ‘ಮಾರುತ’ ಎಂಬ ಶೀರ್ಷಿಕೆ ಇಡಲಾಯಿತು. ಏಕೆಂದರೆ, ಹಿಂದೆ ನಾವಿಬ್ಬರು ‘ಚಂಡ’ ಚಿತ್ರ ಮಾಡಿದ್ದೆವು. ಈಗ ‘ಮಾರುತ’ ಚಿತ್ರ ಮಾಡಿದ್ದೇವೆ. ಎರಡು ಸೇರಿ ಯಶಸ್ಸಿನ ಚಂಡಮಾರುತ ಆಗುವ ಭರವಸೆ ಇದೆ’ ಎಂದರು.

ಈ ಚಿತ್ರದಲ್ಲೊಂದು ಗಂಭೀರ ಸಂದೇಶ ಹೇಳಿರುವುದಾಗಿ ಹೇಳುವ ನಾರಾಯಣ್‍, ‘ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಎಚ್ಚರ ಇರಲಿ. ಅವರ ಚಲನವಲನದ ಬಗ್ಗೆ ನಿಮಗೆ ತಿಳಿದಿರಲಿ. ಅವರ ಕೈಯಲ್ಲಿರುವ ಮೊಬೈಲ್ ಚಟುವಟಿಕೆಗಳ ಬಗ್ಗೆ ನಿಮಗೆ ತಿಳಿದಿರಲಿ. ನೀವು ಎಷ್ಟೇ ಬ್ಯುಸಿಯಿದ್ದರೂ ವಾರಕ್ಕೊಮ್ಮೆಯಾದರೂ ಸಮಯ ಬಿಡುವು ಮಾಡಿಕೊಂಡು ಅವರ ಜೊತೆ ಸಮಯ ಕಳೆಯಿರಿ. ಅವರ ಮನಸ್ಸಿನ ಆಸೆಗಳು, ಬಯಕೆಗಳನ್ನು ಹಂಚಿಕೊಳ್ಳಿ. ಏಕೆಂದರೆ, ಅವರು ನಿಮ್ಮ ಸ್ವತ್ತು. ಅದೇ ಮಕ್ಕಳು ಈ ದೇಶಕ್ಕೆ ಸಂಪತ್ತು. ಈ ವಿಷಯದ ಮೇಲೆ ಚಿತ್ರದ ಕಥೆ ಹೆಣೆಯಲಾಗಿದೆ. ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ’ ಎಂದರು ನಾರಾಯಣ್.

ಎಸ್.ನಾರಾಯಣ್ ಅವರ ಜೊತೆಗೆ ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ ಎಂದ ವಿಜಯ್, ‘ನಾನು ನಿರ್ದೇಶನ ಮಾಡಬೇಕಾದರೆ ಅವರ ಶಿಸ್ತನ್ನು ರೂಡಿಸಿಕೊಂಡಿದ್ದೇನೆ. ಸಾಕಷ್ಟು ಸೂಪರ್ ಹಿಟ್ ಕೌಟುಂಬಿಕ ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತಿ ನಾರಾಯಣ್ ಅವರಿಗಿದೆ‌‌. ಅವರ ನಿರ್ದೇಶನದಲ್ಲಿ ಕೌಟುಂಬಿಕ ಸಿನಿಮಾದಲ್ಲಿ ನಟಿಸುವ ಆಸೆ ನನಗೆ ಇದೆ’ ಎಂದರು.

ಶ್ರೇಯಸ್ ಮಂಜು ಈ ಚಿತ್ರದಲ್ಲಿ ಸಾಕಷ್ಟು ಕಲಿತಿದ್ದಾರಂತೆ. ‘ಅನೇಕ ಹಿರಿಯರ ಜೊತೆಗೆ ಈ ಸಿನಿಮಾದಲ್ಲಿ ಕೆಲಸ ಮಾಡಿ ಸಾಕಷ್ಟು ಕಲಿತಿದ್ದೇನೆ. ನಾರಾಯಣ್ ಅವರ ಶಿಸ್ತು ನನಗೆ ಆದರ್ಶ. ಚಿತ್ರೀಕರಣ ಸಮಯದಲ್ಲಿ ‘ದುನಿಯಾ’ ವಿಜಯ್ ಅವರು ಸಾಕಷ್ಟು ಸಲಹೆ ನೀಡಿದ್ದಾರೆ’ ಎಂದರು ಶ್ರೇಯಸ್ ಮಂಜು.

‘ಮಾರುತ’ ಚಿತ್ರವನ್ನು ಈಶಾ ಪ್ರೊಡಕ್ಷನ್ಸ್ ಬ್ಯಾನರ್‍ ಅಡಿ ಕೆ.ಮಂಜು ಮತ್ತು ರಮೇಶ್‍ ಯಾದವ್‍ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ವಿಜಯ್‍ ಮತ್ತು ಶ್ರೇಯಸ್‍ ಜೊತೆಗೆ ಬೃಂದಾ ಆಚಾರ್ಯ, ತಾರಾ, ಸಾಧು ಕೋಕಿಲ, ಪ್ರಮೋದ್‌ ಶೆಟ್ಟಿ, ರಂಗಾಯಣ ರಘು, ಶರತ್ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ರವಿಚಂದ್ರನ್ ಸಹ ಇದ್ದಾರಂತೆ. ಪಿ.ಕೆ.ಎಚ್. ದಾಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

Tags:
error: Content is protected !!