ಕಳೆದ ವರ್ಷ ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ ಪದವೆಂದರೆ ಅದು ‘ಪೆನ್ ಡ್ರೈವ್’. ಈಗ ಅದೇ ಹೆಸರಿನ ಚಿತ್ರವೊಂದು ತಯಾರಾಗಿದ್ದು, ಜುಲೈ 04ರಂದು ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಮಾಲಾಶ್ರೀ, ತನಿಷಾ ಕುಪ್ಪುಂಡ, ಕಿಶನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು, ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು ಮತ್ತು ಪದಾಧಿಕಾರಿಗಳು ಹಾಡು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.
ಈ ಚಿತ್ರವನ್ನು ಸೆಬಾಸ್ಟಿಯನ್ ಡೇವಿಡ್ ನಿರ್ದೇಶನ ಮಾಡಿದ್ದಾರೆ. ‘ನನ್ನ ಹಿಂದಿನ ಚಿತ್ರಗಳಲ್ಲೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರವಿತ್ತು. ಇದರಲ್ಲೂ ಅದನ್ನು ನಿರೀಕ್ಷಿಸಬಹುದು. ನಮ್ಮ ಚಿತ್ರಕ್ಕೆ ಈ ಶೀರ್ಷಿಕೆಯಿಟ್ಟ ಮೇಲೆ ಅನೇಕ ಅನಾಮಾಧೇಯ ಕರೆಗಳನ್ನು ಸ್ವೀಕರಿಸಿದ್ದೇನೆ. ಈ ಶೀರ್ಷಿಕೆ ಇಟ್ಟಿದ್ದು ಏಕೆ? ಎಂಬ ಪ್ರಶ್ನೆಯನ್ನು ಸಾಕಷ್ಟು ಜನ ಕೇಳಿದ್ದಾರೆ. ಸಾಕಷ್ಟು ಅಡೆತಡೆಗಳನ್ನು ದಾಟಿ ನಮ್ಮ ಚಿತ್ರ ಜುಲೈ 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ’ ಎಂದರು
ತನಿಷಾ ಕುಪ್ಪುಂಡ ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರಂತೆ. ‘ಒಂದೊಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ್ದೇನೆ. ಕಿಶನ್ ಅವರ ಜೊತೆಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದೇನೆ’ ಎಂದು ಹೇಳಿದರೆ, ‘ಬಿಗ್ ಬಾಸ್’ ನಂತರ ಇದೇ ಮೊದಲ ಬಾರಿಗೆ ನಟಿಸಿರುವ ಕಿಶನ್, ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು.
ಆರ್.ಎಚ್. ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್. ಹನುಮಂತರಾಜು ಹಾಗೂ ಲಯನ್ ಎಸ್. ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆಯುವುದರ ಜೊತೆಗೆ ಸಂಗೀತ ಸಂಯೋಜಿಸಿದ್ದಾರೆ.





