ಈ ಹಿಂದೆ ‘ಉಗ್ರಾವತಾರ’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಿತ್ರದುರ್ಗದ ರಘುರಾಮ್, ಇದೀಗ ಹೀರೋ ಆಗಿದ್ದಾರೆ. ‘ಮಾಯಾವಿ’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದು, ಈ ಚಿತ್ರದ ಹಾಡು ಮತ್ತು ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಇಷ್ಟ ಎಂಟರ್ಟೈನರ್ಸ್ ಮೂಲಕ ನಿರ್ಮಾಣವಾಗಿರುವ ‘ಮಾಯಾವಿ’ ಚಿತ್ರಕ್ಕೆ ಶಂಕರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ‘ಆವರಿಸು’ ಎಂಬ ಹಾಡು ಹಾಗೂ ಟೀಸರನ್ನು ಶ್ರೀ ಶಾಂತವೀರ ಮಹಾಸ್ವಾಮಿಗಳು ಹಾಗೂ ಶ್ರೀ ಈಶ್ವರಾನಂದಾಪುರಿ ಮಹಾಸ್ವಾಮಿಗಳು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿರುವ ಶಂಕರ್‍ಗೆ ಇದು ನಿರ್ದೇಶಕರಾಗಿ ಮೊದಲ ಚಿತ್ರ. ‘ಚಿತ್ರದುರ್ಗದಲ್ಲಿ ಕಥೆ ಕೇಳಿದ ಮಿತ್ರ ರಘುರಾಮ್ ಹಾಗೂ ಅವರ ಪತ್ನಿ ಅಕ್ಷತ ಚಿತ್ರ ನಿರ್ಮಾಣಕ್ಕೆ ಮುಂದಾದರು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಚಿತ್ರದುರ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ’ ಎಂದರು.
ರಘುರಾಮ್ ಮೂಲತಃ ಚಿತ್ರದುರ್ಗದವರಂತೆ. ‘ಈ ಚಿತ್ರ ನಿರ್ಮಾಣವಾಗಲು ಪ್ರಮುಖ ಕಾರಣ ನನ್ನ ಪತ್ನಿ ಡಾ. ಅಕ್ಷತ. ಅವರು ಮೂಲತಃ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಶಂಕರ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಆನಂತರ ಚಿತ್ರಕ್ಕೆ ಚಾಲನೆ ದೊರೆಯಿತು. ಈ ಚಿತ್ರದ ಮೂಲಕ ಹೀರೋ ಆಗಬೇಕು ಎಂಬ ನನ್ನ ಕನಸು ನನಸಾಯಿತು’ ಎಂದರು. ಚಿತ್ರದಲ್ಲಿ ಪಾತ್ರವೇನು ಎಂಬ ಪ್ರಶ್ನೆಗೆ, ಅದು ಸಸ್ಪೆನ್ಸ್ ಎಂದಷ್ಟೇ ಹೇಳಿ ಸುಮ್ಮನಾದರು.
ನಾಯಕಿ ನಿಶ್ಚಿತ ಶೆಟ್ಟಿ ಇದಕ್ಕೂ ಮುನ್ನ ‘ಶ್ರೀ ಜಗನ್ನಾಥದಾಸರು’ ಚಿತ್ರದಲ್ಲಿ ನಟಿಸಿದ್ದರು. ಇದಲ್ಲದೆ ತೆಲುಗು ಚಿತ್ರಗಳಲ್ಲೂ ಅವರು ನಟಿಸಿದ್ದಾರಂತೆ. ‘’ಮಾಯಾವಿ’ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ನಟನೆಯ ಜೊತೆಗೆ ತಂತ್ರಜ್ಞಳಾಗಿಯೂ ಕಾರ್ಯ ನಿರ್ವಹಿಸಿದ್ದೇನೆ’ ಎಂದರು.
ಈ ಸಂದರ್ಭದಲ್ಲಿ ‘ಆವರಿಸು …’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ಅವರು ಈ ಹಾಡನ್ನು ಹಾಡಿದ್ದು, ಅಗಸ್ತ್ಯ ಸಂತೋಷ್ ಸಂಗೀತ ಸಂಯೋಜಿಸಿದ್ದಾರೆ. ಆನಂದ್ ಕಮ್ಮಸಾಗರ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.





