ವಿನೋದ್ ಪ್ರಭಾಕರ್ ಅಭಿನಯದ ‘ಮಾದೇವ’ ಚಿತ್ರವು ಜೂನ್.06ರಂದು ಬಿಡುಗಡೆಯಾಗಿ, ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಈ ಸಂತೋಷವನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಚಿತ್ರತಂಡದವರು ಸಂತೋಷ ಕೂಟ ಏರ್ಪಡಿಸಿ, ಚಿತ್ರಕ್ಕೆ ಕೆಲಸ ಮಾಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು.
ಯಶಸ್ಸಿನ ಸಂಭ್ರಮದಲ್ಲಿ ಮಾತನಾಡಿದ ವಿನೋದ್ ಪ್ರಭಾಕರ್, ‘ಈ ಕಥೆಯನ್ನು ಯಾವ ಧೈರ್ಯದ ಮೇಲೆ ನನ್ನ ಹತ್ತಿರ ತಂದರೋ ಗೊತ್ತಿಲ್ಲ. ಈ ತರಹದ್ದೊಂದು ಪಾತ್ರ ಕನ್ನಡದಲ್ಲಿ ಬಂದಿರಲಿಲ್ಲ. ನನಗೆ ತೀರಾ ಹೊಸದು. ಈ ಪಾತ್ರಕ್ಕೆ ಜೀವ ತುಂಬುವುದಕ್ಕೆ ಪ್ರಯತ್ನಿಸಿದ್ದೇನೆ. ಚಿತ್ರ ನೋಡಿದವರೆಲ್ಲರೂ ನಿಮ್ಮ ಅಭಿನಯಕ್ಕೆ ನಿಮಗೆ ಪ್ರಶಸ್ತಿ ಸಿಗಬೇಕು ಅಂತ ಹೇಳುತ್ತಿದ್ದಾರೆ’ ಎಂದು ಖುಷಿಪಡುತ್ತಾರೆ.
ಚಿತ್ರದಲ್ಲೊಂದು ಅತಿಥಿ ಪಾತ್ರ ಮಾಡಿರುವ ಮಾಲಾಶ್ರೀ ಮಾತನಾಡಿ, ‘ಒಳ್ಳೆಯ ಚಿತ್ರಗಳನ್ನು ದೇವರೂ ಕೈಬಿಡುವುದಿಲ್ಲ, ಜನರೂ ಕೈಬಿಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಾನು ನಾಯಕಿಯಾಗಿ ಅಭಿನಯಿಸಿದ ಹಲವು ಚಿತ್ರಗಳು ಯಶಸ್ವಿಯಾಗಿವೆ. ಇದೇ ಮೊದಲ ಬಾರಿಗೆ ನಾನು ಪೋಷಕ ಪಾತ್ರ ಮಾಡಿದ ಚಿತ್ರ ಯಶಸ್ವಿಯಾಗಿ ನಾನು ನೆನಪಿನ ಕಾಣಿಕೆ ಸ್ವೀಕರಿಸುವಂತಾಗಿದೆ. ಎಷ್ಟೋ ವಿಲನ್‍ಗಳಿಗೆ ಹೊಡೆದಿದ್ದೇನೆ, ಶ್ರುತಿಯಂತಹ ಲೇಡಿ ವಿಲನ್‍ಗೆ ಹೊಡೀಬೇಕು ಅಂತ ಆಸೆ’ ಎಂದರು.
ಇವತ್ತಿನ ಕಾಲಘಟ್ಟದಲ್ಲಿ ಒಂದು ಚಿತ್ರ 25 ದಿನ ಓಡಿದರೆ, ಅದು 25 ವಾರ ಓಡಿದಂತೆ ಎಂದ ಶ್ರುತಿ, ಈ ಚಿತ್ರವೇನಾದರೂ 25 ದಿನ ಓಡಿದ್ದರೆ ಅದಕ್ಕೆ ವಿನೋದ್ ಪ್ರಭಾಕರ್ ಪ್ರಮುಖ ಕಾರಣ. ಚಿತ್ರದ ಫ್ರೇಮ್‍ನಲ್ಲೂ ವಿನೋದ್, ಟೈಗರ್ ಪ್ರಭಾಕರ್ ಅವರನ್ನು ನೆನಪಿಸಿದ್ದಾರೆ’ ಎಂದರು.
ನವೀನ್ ರೆಡ್ಡಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಮಾದೇವ’ ಚಿತ್ರದಲ್ಲಿ ವಿನೋದ್ ಪ್ರಭಾಕರ್‌ಗೆ ನಾಯಕಿಯಾಗಿ ಸೋನಾಲ್ ಮೊಂತೆರೊ ಅಭಿನಯಿಸಿದ್ದಾರೆ. ಮಿಕ್ಕಂತೆ ಶ್ರೀನಗರ ಕಿಟ್ಟಿ, ಮಾಲಾಶ್ರೀ, ಶ್ರುತಿ, ಅಚ್ಯುತ್ ಕುಮಾರ್, ಕಾಕ್ರೋಜ್ ಸುಧೀ, ಮೈಕೋ ನಾಗರಾಜ್, ಬಲ ರಾಜ್ವಾಡಿ, ಮುನಿ, ಚೈತ್ರಾ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪ್ರದ್ಯೋತ್ತನ್ ಸಂಗೀತ, ಬಾಲಕೃಷ್ಣ ತೋಟ ಛಾಯಾಗ್ರಹಣವಿದೆ. ಈ ಚಿತ್ರವನ್ನು ಕೇಶವ ನಿರ್ಮಿಸಿದ್ದಾರೆ.





