ಬೆಂಗಳೂರು: ಇತ್ತೀಚೆಗೆ ಕನ್ನಡ ಚಿತ್ರರಂಗ ಬಹಳ ಸಂಕಷ್ಟಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ ಇಂದು ಕಲಾವಿದರ ಸಂಘ ವಿಶೇಷ ಹೋಮ-ಹವನ ನಡೆಸಿದೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಚಿತ್ರರಂಗದ ಏಳಿಗೆಗಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪೂಜೆಯಲ್ಲಿ ಹಿರಿಯ ನಟಿ ಶಾಂತಲಾ, ಮಾಲತಿಶ್ರೀ ಮೈಸೂರು, ಪದ್ಮಜಾ ರಾವ್ ಸೇರಿದಂತೆ ಮೊದಲಾದವರು ದೀಪ ಬೆಳಗಿ ಚಾಲನೆ ನೀಡಿದರು.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ನೇತೃತ್ವದಲ್ಲಿ ಪೂಜೆ ಹೋಮ-ಹವನ ನಡೆದಿದೆ. ಗಣಪತಿ ಹೋಮ, ಮೃತ್ಯುಂಜಯ ಹೋಮ ಸೇರಿದಂತೆ ಹಲವಾರು ಪೂಜೆಗಳನ್ನು ನೆರವೇರಿಸಲಾಗಿದೆ.
ಇಂದು ನಡೆದ ವಿಶೇಷ ಪೂಜೆಯಲ್ಲಿ ನಟ-ನಟಿಯರು ಸೇರಿದಂತೆ 600 ಮಂದಿ ಭಾಗಿಯಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಆಗದಿರಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.