ಕಳೆದ ವರ್ಷ ಆತ್ಮಹತ್ಯೆಗೆ ಶರಣಾದ ನಟ-ನಿರ್ದೇಶಕ ಗುರುಪ್ರಸಾದ್, ‘ರಂಗನಾಯಕ’ ಅಲ್ಲದೆ ಇನ್ನೊಂದು ಚಿತ್ರವನ್ನು ಮಾಡಿ ಮುಗಿಸಿದ್ದರು. ಅವರು ನಿಧನರಾಗುವ ಮೊದಲು ಆ ಚಿತ್ರದ ಡಬ್ಬಿಂಗ್ ಕೆಲಸಗಳನ್ನು ಸಹ ಮುಗಿಸಿದ್ದರು. ಅವರ ನಿಧನದ ನಂತರ ಆ ಚಿತ್ರ ಇನ್ನು ಮುಂದುವರೆಯುವುದಿಲ್ಲ ಎನ್ನುವಾಗಲೇ, ಚಿತ್ರತಂಡದವರು ಆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.
ಚಿತ್ರಕ್ಕೆ ‘ಎದ್ದೇಳು ಮಂಜುನಾಥ 2’ ಎಂಬ ಹೆಸರನ್ನು ಇಡಲಾಗಿದ್ದು, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಅಥವಾ ಇದು ಆ ಚಿತ್ರದ ಮುಂದುವರೆದ ಭಾಗವಲ್ಲ. ಬದಲಿಗೆ ಇನ್ನೊಂದು ಆವೃತ್ತಿ ಎನ್ನಬಹುದು. ಫೆಬ್ರವರಿ 21ರಂದು ಚಿತ್ರ ಬಿಡುಗಡೆಯಾಗುತತಿದ್ದು, ಈ ಚಿತ್ರದಲ್ಲಿ ಗುರುಪ್ರಸಾದ್ ಜೊತೆಗೆ ರಚಿತಾ ಮಹಾಲಕ್ಷ್ಮೀ, ಶರತ್ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ.
ಇತ್ತೀಚೆಗೆ, ‘ಎದ್ದೇಳು ಮಂಜುನಾಥ 2’ ಚಿತ್ರದ ‘ಕಿತ್ತೋದ ಪ್ರೇಮ …’ ಎಂಬ ಹಾಡು ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಗುರುಪ್ರಸಾದ್ ಸಾಹಿತ್ಯ ರಚಿಸಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ನವೀನ್ ಸಜ್ಜು ಹಾಡಿದ್ದಾರೆ. ಇನ್ನು, ಈ ಮೂವರೂ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಾಡು ಬಿಡುಗಡೆ ನಂತರ ಮಾತನಾಡಿದ ಶರತ್ ಲೋಹಿತಾಶ್ವ, ‘ನಾನು ಗುರುಪ್ರಸಾದ್ ಅವರನ್ನು ಅಭಿಮಾನಿಯಾಗಿ ನೋಡಿದ್ದೆ. ಅವರ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರಲಿಲ್ಲ. ಪ್ರತಿಯೊಬ್ಬ ಕಲಾವಿದರಿಗೂ ಒಬ್ಬ ಒಳ್ಳೆಯ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಇರುತ್ತದೆ. ಆ ಆಸೆ ನನಗೂ ಇತ್ತು. ಆ ಆಸೆ ಗುರುಪ್ರಸಾದ್ ಅವರ ಕೊನೆಯ ಚಿತ್ರದಲ್ಲಿ ಈಡೇರಿದೆ’ ಎಂದರು.
ನಾಯಕಿ ರಚಿತಾ ಮಹಾಲಕ್ಷ್ಮಿ ಮಾತನಾಡಿ, ‘ನಾನು ‘ರಂಗನಾಯಕ’ ಚಿತ್ರಕ್ಕೂ ಮೊದಲೇ ಈ ಚಿತ್ರದಲ್ಲಿ ನಟಿಸಿದ್ದೆ. 2020ನಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಿದ್ದೆವು. ಗುರುಪ್ರಸಾದ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ’ ಎಂದರು.
‘ಎದ್ದೇಳು ಮಂಜುನಾಥ 2’ ಚಿತ್ರವನ್ನು ರಾಮ್ ಮೂವೀಸ್, ಗುರುಪ್ರಸಾದ್ inc ಹಾಗೂ ಫ್ರೆಂಡ್ಸ್ ಫೋರ್ಮ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರದಿಂದ ಬರುವ ಲಾಭದ ಶೇ. 50ರಷ್ಟು ಭಾಗವನ್ನು ಗುರುಪ್ರಸಾದ್ ಅವರ ಮಗಳಾದ ನಗು ಶರ್ಮಾ ಭವಿಷ್ಯಕ್ಕೆ ಮೀಸಲಿಡಲಾಗುವುದು.