ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರಗಳು ಹೆಚ್ಚಾಗಿವೆ. ಮನಸ್ಸಿನ ವಿವಿಧ ಮುಖಗಳನ್ನು ಪರಿಚಯಿಸುವ ಚಿತ್ರಗಳು ಹೆಚ್ಚು ಹೆಚ್ಚು ಬಿಡುಗಡೆಯಾಗುತ್ತಿವೆ. ಈ ಸಾಲಿಗೆ ರಾಜ್ ವಿಜಯ್ ಹಾಗೂ ಬಿ.ಎನ್ ಸ್ವಾಮಿ ನಿರ್ಮಾಣದ ಹಾಗೂ ರಾಜ್ ವಿಜಯ್ ನಿರ್ದೇಶನದ ‘ಗ್ರೀನ್’ ಚಿತ್ರ ಸಹ ಒಂದು.
ಈಗಾಗಲೇ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳ ಜೊತೆಗೆ ಪ್ರಶಂಸೆಯನ್ನು ಗಳಿಸಿರುವ ಹಾಗೂ ಸೈಕಲಾಜಿಕಲ್ ಮೈಂಡ್ ಬೆಂಡಿಂಗ್ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್, ಆರ್.ಜೆ. ವಿಕ್ಕಿ, ವಿಶ್ವನಾಥ್ ಮಾಂಡಲಿಕ, ಶಿವ ಮಂಜು ಮುಂತಾದವರು ನಟಿಸಿದ್ದಾರೆ.
‘ಗ್ರೀನ್’ ಒಂದು ಮನೋವೈಜ್ಞಾನಿಕ ಥ್ರಿಲ್ಲರ್ ಚಿತ್ರವಾಗಿದ್ದು, ತನ್ನ ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೊರಡುವ ನಾಯಕನ ಕಥೆ ಹೇಳುತ್ತದೆ. ಆ ರಾಕ್ಷಸ ಕ್ರಮೇಣ ಮನಸ್ಸುನ್ನು ನಿಯಂತ್ರಣವನ್ನು ತೆಗೆದುಕೊಳ್ಳುತ್ತಿದ್ದಂತೆ, ನಾಯಕ ಭಯ ಮತ್ತು ಗೊಂದಲದ ವ್ಯೂಹದಲ್ಲಿ ಸಿಲುಕುತ್ತಾನೆ. ಈ ಆಂತರಿಕ ಹೋರಾಟದ ನಡುವೆ, ಚಿತ್ರದ ಕಥಾನಾಯಕನು ತಾನು ನಿಜವಾಗಿಯೂ ಯಾರು ಎಂಬುದನ್ನು ಹುಡುಕಲು ಪ್ರಯತ್ನಿಸುತ್ತಾನೆ. ತನ್ನೊಳಗಿನ ರಾಕ್ಷಸನು ತನ್ನ ಇಡೀ ಜೀವನವನ್ನೇ ಸಂಪೂರ್ಣವಾಗಿ ನುಂಗುವ ಮೊದಲು ನೆರವು ಹುಡುಕುವ ಮಹತ್ವವನ್ನು ಚಿತ್ರವು ಒತ್ತಿಹೇಳುತ್ತದೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ರಾಜ್ ವಿಜಯ್, ‘ನಮ್ಮ ಕರಾಳ ಆಲೋಚನೆಗಳನ್ನು ಎದುರಿಸುವ ಮತ್ತು ಅವು ಮೇಲುಗೈ ಸಾಧಿಸುವ ಮೊದಲು ಸಹಾಯವನ್ನು ಪಡೆಯುವ ಮಹತ್ವವನ್ನು ನಾನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅನುಭವಿಸುವ ಆಂತರಿಕ ಹೋರಾಟಗಳು ಮತ್ತು ಅದನ್ನು ಜಯಿಸಲು ಬೇಕಾದ ಧೈರ್ಯದ ಮಹತ್ವವನ್ನು ಒತ್ತಿಹೇಳುತ್ತದೆ’ ಎನ್ನುತ್ತಾರೆ.
‘ಗ್ರೀನ್’ ಚಿತ್ರಕ್ಕೆ ಕೆ. ಮಧುಸೂದನ್ ಛಾಯಾಗ್ರಹಣ ಹಾಗೂ ಶಕ್ತಿ ಸ್ಯಾಕ್ ಅವರ ಸಂಗೀತವಿದೆ.