ಜುಲೈ ತಿಂಗಳಲ್ಲಿ ಗಣೇಶ್, ಯೋಗಿ, ಶ್ರೀನಗರ ಕಿಟ್ಟಿ, ಶಿವರಾಜಕುಮಾರ್, ಪ್ರಜ್ವಲ್, ರಿಷಭ್ ಶೆಟ್ಟಿ ಮುಂತಾದವರು ಕನ್ನಡದ ಹಲವು ಸ್ಟಾರ್ ನಟರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಈ ಸಾಲಿನಲ್ಲಿ ಮೊದಲಿಗೆ ಬರುವುದು ಗಣೇಶ್ ಹುಟ್ಟುಹಬ್ಬ. ಇಂದು ಗಣೇಶ್ ಹುಟ್ಟುಹಬ್ಬ. ಆದರೆ, ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳದಿರುವುದಕ್ಕೆ ಗಣೇಶ್ ತೀರ್ಮಾನಿಸಿದ್ದಾರೆ.
ಗಣೇಶ್ ಪ್ರತಿ ಬಾರಿ ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ರಾಜರಾಜೇಶ್ವರಿಯ ಗಣೇಶ್ ಮನೆ ಎದುರು ಅಭಿಮಾನಿಗಳು ಜುಲೈ. 01ರ ರಾತ್ರಿಯಿಂದಲೇ ಜಮಾಯಿಸುತ್ತಿದ್ದರು. ಆದರೆ, ಈ ಬಾರಿ ಚಿತ್ರೀಕರಣದಲ್ಲಿ ಭಾಗಿಯಾಗಿರುವುದರಿಂದ, ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಗಣೇಶ್ ಸದ್ಯ ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ವಿಖ್ಯಾತ್ ನಿರ್ದೇಶನದ ‘ಯುವರ್ಸ್ ಸಿನ್ಸಿಯರ್ಲಿ ರಾಮ್’, ಧನಂಜಯ್ ನಿರ್ದೇಶನದ ‘ಪಿನಾಕ’ ಜೊತೆಗೆ ಅರಸು ಅಂತಾರೆ ನಿರ್ದೇಶನದ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಈ ಪೈಕಿ, ಮೊದಲ ಎರಡು ಚಿತ್ರಗಳ ಚಿತ್ರೀಕರಣ ಸತತವಾಗಿ ನಡೆಯುತ್ತಿದ್ದು, ಆ ಚಿತ್ರೀಕರಣದಲ್ಲಿ ಗಣೇಶ್ ಭಾಗವಹಿಸುತ್ತಿರುವುದರಿಂದ, ಈ ಬಾರಿ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲವಂತೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿರುವ ಗಣೇಶ್, ‘ಜುಲೈ.02 ನಾನು ಹುಟ್ಟಿದ ದಿನ. ಸಹಜವಾಗಿ ನನಗದು ನಿಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ತುಂಬಿಕೊಂಡು ಸಂಭ್ರಮಿಸುವ ದಿನ. ಆದರೆ, ಈ ಬಾರಿ ನಾನು ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಹಾಗೂ ‘ಪಿನಾಕ’ ಚಿತ್ರಗಳ ಹೊರಾಂಗಣ ಚಿತ್ರೀಕರಣಗಳಲ್ಲಿ ಭಾಗವಹಿಸಬೇಕಿರುವ ಕಾರಣ, ಜುಲೈ.02ರಂದು ನಾನು ನಿಮ್ಮೆಲ್ಲರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತೊಂದಿಲ್ಲ. ಆದ ಕಾರಣ ಯಾರೂ ಮನೆಯ ಬಳಿ ಬರದೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ತಾವುಗಳು ಇದ್ದಲ್ಲಿಂದಲೇ ನನಗೆ ಆಶಿಸಿ, ಆಶೀರ್ವದಿಸಬೇಕೆಂದು ಈ ಮೂಲಕ ವಿನಂತಿಸುತ್ತೇನೆ’ ಎಂದು ಮನವಿ ಮಾಡಿಕೊಂಡಿದ್ದಾರೆ.




