Mysore
23
mist

Social Media

ಸೋಮವಾರ, 17 ನವೆಂಬರ್ 2025
Light
Dark

ದೈವಪಾತ್ರಗಳನ್ನು ಅನುಸರಿಸಬೇಡಿ, ದೈವಾರಾಧನೆಯ ಪಾವಿತ್ರ್ಯತೆ ಕಾಪಾಡಿ …

ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ ಚಿತ್ರ ನೋಡಿಬಂದ ಕೆಲವರ ಮೇಲೆ ದೈವ ಆವಾಹನೆಯಾಗುತ್ತಿರುವ ಸುದ್ದಿ ಒಂದು ಕಡೆಯಾದರೆ, ಇನ್ನೊಂದು ಕಡೆ ದೈವಪಾತ್ರಗಳನ್ನು ಅನುಸರಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದು ಸುದ್ದಿಯಾಗುತ್ತಿದೆ. ಈ ಕುರಿತು ತುಳುಕೂಟದವರು ಚಿತ್ರತಂಡದವರಿಗೆ ಪತ್ರ ಬರೆದು, ಪಾವಿತ್ರ್ಯತೆ ಕಾಪಾಡುವಂತೆ ಹೇಳಿದ್ದಾರೆ.

ಈ ಸಂಬಂಧ ಚಿತ್ರತಂಡದವರು ಸೋಷಿಯಲ್‍ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ದೈವಪಾತ್ರಗಳನ್ನು ಅನುಸರಿಸಬೇಡಿ ಮತ್ತು ದೈವಾರಾಧನೆಯ ಪಾವಿತ್ರ್ಯತೆ ಕಾಪಾಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದೆ. ‘ತುಳುನಾಡಿನ ಸಂಸ್ಕೃತಿಯ ಪ್ರೌಢತೆಯ ಸಂಕೇತವಾದ ದೈವಾರಾಧನೆ ನಮ್ಮ ನಂಬಿಕೆ, ಭಕ್ತಿ ಹಾಗೂ ತಾಯ್ನಾಡಿನ ಹೆಮ್ಮೆಯ ಪ್ರತಿರೂಪವಾಗಿದೆ. ‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್-1’ ಚಿತ್ರಗಳನ್ನು ನಾವು ಗೌರವದೊಂದಿಗೆ ದೈವಗಳ ಮಹಿಮೆಯನ್ನು ಕೊಂಡಾಡುವ ಸದುದ್ದೇಶದಿಂದ ನಿರ್ಮಿಸಿದ್ದೇವೆ. ದೈವಾರಾಧನೆಯ ಗೌರವ ಹಾಗೂ ಅಚಲ ಭಕ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ನಾವು ಶ್ರಮಪಟ್ಟು ಕೆಲಸ ಮಾಡಿದ್ದೇವೆ.

ಇದನ್ನು ಓದಿ : ಮೂರು ದಿನಗಳಲ್ಲಿ 163 ಕೋಟಿ ರೂ. ಗಳಿಕೆ ಮಾಡಿದ ‘ಕಾಂತಾರ – ಚಾಪ್ಟರ್ 1’

ಇದರೊಂದಿಗೆ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾರಿ ಯಶಸ್ವಿಯಾಗಿದ್ದೇವೆ. ಪ್ರೇಕ್ಷಕರಿಂದ ಬಂದಿರುವ ಅಪಾರವಾದ ಪ್ರೀತಿಗೆ ಹಾಗೂ ಪ್ರೋತ್ಸಾಹಕ್ಕೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಆದಾಗ್ಯೂ, ಇತ್ತೀಚೆಗೆ ಕೆಲವು ಜನರು ಚಿತ್ರದಲ್ಲಿ ತೋರಿಸಿದ ದೈವಪಾತ್ರಗಳನ್ನು ಅನುಕರಿಸುತ್ತಾ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಚಿತ್ರಗಳಲ್ಲಿ ತೋರಿಸಲಾದ ದೈವಾರಾಧನೆ ಅಥವಾ ದೈವಪೂಜೆ ಅತ್ಯಂತ ಪವಿತ್ರವಾದ ಆಧ್ಯಾತ್ಮಿಕ ಸಂಪ್ರದಾಯಕ್ಕೆ ಆಧಾರಿತವಾಗಿದೆ. ಇದನ್ನು ಹಾಸ್ಯಾಸ್ಪದವಾಗಿ ಅಣುಕು ಪ್ರದರ್ಶನ ಮಾಡುವಂತಿಲ್ಲ. ಇಂತಹ ಕೃತ್ಯಗಳು ನಮ್ಮ ನಂಬಿಕೆ ಮತ್ತು ಧಾರ್ಮಿಕ ಸಂವೇದನೆಯನ್ನು ಹೀನಗೊಳಿಸುತ್ತವೆ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ತೀವ್ರ ನೋವುಂಟುಮಾಡುತ್ತವೆ.

ಆದುದರಿಂದ, ಹೋಂಬಾಳೆ ಫಿಲ್ಮ್ಸ್, ಜನತೆ ಹಾಗೂ ಪ್ರೇಕ್ಷಕರಿಗೆ ಮನವಿ ಮಾಡಿಕೊಳ್ಳುತ್ತದೆ – ದೈವಪಾತ್ರಗಳನ್ನು ಅನುಕರಿಸುವುದು, ಧ್ವನಿಯನ್ನು ಹೋಲುವುದು ಅಥವಾ ಅವರ ರೂಪ-ವೇಷಧಾರಣೆ ಮಾಡುವುದು ಸೇರಿದಂತೆ ಯಾವುದೇ ರೀತಿಯ ಕೃತ್ಯಗಳಿಂದ ದೂರವಿರಿ. ಇದನ್ನು ಚಿತ್ರಮಂದಿರಗಳಲ್ಲಿ ಆಗಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಲಿ ಎಲ್ಲೂ ಮಾಡುವಂತಿಲ್ಲ. ದೈವಾರಾಧನೆಯ ಪವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಆರಾಧನೆಯ ಆಧ್ಯಾತ್ಮಿಕ ಮಹತ್ವವನ್ನು ಎಲ್ಲರೂ ಗುರುತಿಸಿ, ಗೌರವದಿಂದ ನಡೆದುಕೊಳ್ಳಬೇಕು. ನಮ್ಮ ಚಿತ್ರಗಳ ಮೂಲಕ ನಾವು ಸಂಭ್ರಮಿಸಿದ ಈ ನಂಬಿಕೆಯನ್ನು ಯಾವುದೇ ಸಂದರ್ಭದಲ್ಲಿ ಹಾಸ್ಯಾಸ್ಪದವಾಗಲು ಅವಕಾಶ ನೀಡಬಾರದು. ಈ ಅಮೂಲ್ಯ ಸಾಂಸ್ಕೃತಿಕ ಪರಂಪರೆಯ ಪವಿತ್ರತೆಯನ್ನು ಕಾಪಾಡಲು ನೀವು ನೀಡುತ್ತಿರುವ ನಿರಂತರ ಪ್ರೋತ್ಸಾಹ ಮತ್ತು ಸಹಕಾರಕ್ಕೆ ನಮ್ಮ ಹೃತ್ತೂರ್ವಕ ಧನ್ಯವಾದಗಳು’ ಎಂದು ಹೇಳಿದೆ.

ಇದಕ್ಕೂ ಮುನ್ನ ಚಿತ್ರದ ಯಾವುದೇ ದೃಶ್ಯವನ್ನು ಚಿತ್ರೀಕರಿಸಬೇಡಿ ಅಥವಾ ಹಂಚಿಕೊಳ‍್ಳಬೇಡಿ ಎಂದು ಚಿತ್ರತಂಡ ಪ್ರೇಕ್ಷಕರಲ್ಲಿ ಮನವಿ ಮಾಡಿತ್ತು.

Tags:
error: Content is protected !!