Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ಎಲ್ಲಾ ಜಿಲ್ಲೆಗಳಿಗೂ ಬ್ರದರ್ ಭೇಟಿ: ಚಿತ್ರತಂಡದಿಂದ ಬಿಡುಗಡೆ ಪೂರ್ವಭಾವಿ ಸಂಚಾರ

ಕಳೆದ ವರ್ಷದ ಕೊನೆಯಲ್ಲಿ ಪ್ರಾರಂಭವಾಗಿದ್ದ ‘Congratulations ಬ್ರದರ್’ ಚಿತ್ರವು ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ನವೆಂಬರ್‍.21ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರತಂಡ ಚಾಮರಾಜನಗರದಿಂದ ಬೀದರ್‌ವರೆಗೂ ಎಲ್ಲಾ ಜಿಲ್ಲೆಗಳಿಗೂ ಭೇಟಿ ಕೊಟ್ಟು, ಚಿತ್ರದ ಪ್ರಚಾರ ನಡೆಸಲಿದೆ.

‘Congratulations ಬ್ರದರ್’ ಹೊಸಬರ ಸಿನಿಮಾ. ಈ ಚಿತ್ರವನ್ನು ಪ್ರಶಾಂತ್‍ ಕಲ್ಲೂರ್‍ ನಿರ್ಮಿಸಿದರೆ, ಪ್ರತಾಪ್‍ ಗಂಧರ್ವ ನಿರ್ದೇಶನ ಮಾಡಿದ್ದಾರೆ. ನಾಯಕ ರಕ್ಷಿತ್‍ ನಾಗ್‍, ನಾಯಕಿ ಅನೂಷಾ ಎಲ್ಲರೂ ಹೊಸಬರೇ. ಚಿತ್ರತಂಡದಲ್ಲಿ ಹಳಬರೆಂದರೆ ಅದು ನಿರ್ದೇಶಕ ಹರಿ ಸಂತೋಷ್‍. ‘ಅಲೆಮಾರಿ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಹರಿ ಸಂತೋಷ್‍, ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್‍ ಆಗಿ ಕೆಲಸ ಮಾಡಿದ್ದಾರೆ. ಜೊತೆಗೆ, ಚಿತ್ರದ ಕಥೆಯೂ ಅವರದ್ದೇ.

ಚಿತ್ರದ ಬಿಡುಗಡೆಗೂ ಮುನ್ನ ಚಿತ್ರತಂಡದವರು ಬೇರೆ ಜಿಲ್ಲೆಗಳಿಗೆ ಹೋಗಿ ಪತ್ರಿಕಾಗೋಷ್ಠಿಗಳನ್ನು ಮಾಡಿ, ಚಿತ್ರದ ಪ್ರಚಾರ ಮಾಡುವುದು ಸಾಮಾನ್ಯ. ‘Congratulations ಬ್ರದರ್’ ಚಿತ್ರತಂಡವು ಈ ನಿಟ್ಟಿನಲ್ಲಿ ಪ್ರಚಾರದ ವಾಹನವೊಂದನ್ನು ಸಿದ್ಧ ಮಾಡಿದೆ. ಚಿತ್ರತಂಡದವರು ಈ ವಾಹನದ ಜೊತೆಗೆ ಹೋಗಿ, ಚಿತ್ರದ ಬಗ್ಗೆ ಪ್ರಚಾರ ಮಾಡಿಬರಲಿದೆ. ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ‌. ಗೋವಿಂದು ಇತ್ತೀಚೆಗೆ ವೀರೇಶ ಚಿತ್ರಮಂದಿರದಲ್ಲಿ ಈ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ:-ಇದು ಏಳನೇ ತರಗತಿ ಹುಡುಗಿಯ ಹೋರಾಟದ ಕಥೆ …

ಪ್ರಚಾರದ ಕುರಿತು ಮಾತನಾಡುವ ಹರಿ ಸಂತೋಷ್‍, ‘ನಮ್ಮ ಚಿತ್ರ ಬಿಡುಗಡೆಯ ಹಂತ ತಲುಪಿದೆ. ನವೆಂಬರ್ 21 ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಅದರ ಪೂರ್ವಭಾವಿಯಾಗಿ ಕಲಾವಿದರು ಕರ್ನಾಟಕದಾದ್ಯಂತ ಪ್ರವಾಸ ಮಾಡಲಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಜನರನ್ನು, ವಿಶೇಷವಾಗಿ ಯುವ ಸಮುದಾಯವನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ‌’ ಎಂದರು.

‘Congratulations ಬ್ರದರ್’ ಚಿತ್ರದಲ್ಲಿ ರಕ್ಷಿತ್‍ ನಾಗ್, ಅನುಷಾ, ಸಂಜನಾ ದಾಸ್‍, ಚೇತನ್‍ ದುರ್ಗ ಮುಂತಾದವರು ನಟಿಸಿದ್ದು, ಸೂರಜ್‍ ಜೋಯಿಸ್‍ ಸಂಗೀತ ಮತ್ತು ಎಂ.ಜಿ. ಗುರುಪ್ರಸಾದ್‍ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Tags:
error: Content is protected !!