ಕಳೆದ ವರ್ಷ ಬಿಡುಗಡೆಯಾದ ‘ಬ್ಲಾಕ್ ಆ್ಯಂಡ್ ವೈಟ್’ ಚಿತ್ರದಲ್ಲಿ ನಟಿಸಿದ್ದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಮಗ ಅನೂಪ್ ರೇವಣ್ಣ, ಇದೀಗ ‘ಕನಕರಾಜ’ ಎಂಬ ಹೊಸ ಚಿತ್ರದೊಂದಿಗೆ ಬಂದಿದ್ದಾರೆ.
‘ಕನಕರಾಜ’ ಚಿತ್ರದ ಮುಹೂರ್ತ ಇತ್ತೀಚೆಗೆ ಮಹಾಲಕ್ಷ್ಮೀಪುರಂನ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಂ. ರೇವಣ್ಣ ಆರಂಭ ಫಲಕ ತೋರಿದರು. ಕರ್ನಾಟಕ ರಾಜ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಕ್ಯಾಮೆರಾ ಚಾಲನೆ ಮಾಡಿದರು.
ಈ ಚಿತ್ರವನ್ನು ಎಸ್.ಆರ್. ಸನತ್ ಕುಮಾರ್ ನಿರ್ಮಿಸಿದರೆ, ಎ.ಎಂ. ರಾಜು ಮತ್ತು ನೀಲ್ ಕಂಗಾಪುರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೇ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ರಚಿಸುವುದರ ಜೊತೆಗೆ ಸಂಗೀತ ಸಂಯೋಜಿಸುತ್ತಿದ್ದಾರೆ ವಿ.ನಾಗೇಂದ್ರ ಪ್ರಸಾದ್.
ಇದನ್ನು ಓದಿ : ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇನ್ನೊಂದು ಬಯೋಪಿಕ್ ಘೋಷಣೆ
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ನಾಗೇಂದ್ರ ಪ್ರಸಾದ್ ಮಾತನಾಡಿ, ‘ನಾವು ಸಾಮಾನ್ಯವಾಗಿ ಯವಜನತೆ ರಾಜಕೀಯಕ್ಕೆ ಬರಬೇಕು, ರಾಜಕಾರಣಿಯಾಗಬೇಕು ಅಂತ ಹೇಳುತ್ತಿರುತ್ತೇವೆ. ಈ ಮಾತನ್ನೇ ಪ್ರಮುಖವಾಗಿಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ಚಿತ್ರದ ನಾಯಕ ವಕೀಲನಾಗಿದರೂ ರಾಜಕೀಯದಲ್ಲೂ ಸಕ್ರಿಯ. ಜೊತೆಗೆ ಮುಖ್ಯಮಂತ್ರಿಗಳ ಅಭಿಮಾನಿಯೂ ಹೌದು. ಹಾಗಾಗಿ ನಮ್ಮ ‘ಕನಕರಾಜ’ ಚಿತ್ರಕ್ಕೆ ‘fan of cm’ ಎಂಬ ಅಡಿಬರಹವಿದೆ’ ಎಂದರು.
ಅನೂಪ್ ರೇವಣ್ಣ ಮಾತನಾಡಿ, ‘ನಾನು ಈ ಚಿತ್ರದಲ್ಲಿ ಲಾಯರ್ ಪಾತ್ರ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳ ಅಭಿಮಾನಿಯೂ ಹೌದು’ ಎಂದರು. ಅವರಿಗೆ ನಾಯಕಿಯಾಗಿ ನಿಮಿಷ ನಟಿಸುತ್ತಿದ್ದಾರೆ.
‘ಕನಕರಾಜ’ ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಸನತ್ ಕುಮಾರ್, ‘’ಕನಕರಾಜ’ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಆರನೇ ಚಿತ್ರ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ‘ಕನಕರಾಜ’ ಚಿತ್ರದಲ್ಲೂ ಯುವಜನತೆಗೆ ಉತ್ತಮ ಸಂದೇಶವಿದೆ. ನಮ್ಮ ರಾಜ್ಯದ ವಿವಿಧ ಊರುಗಳಲ್ಲಿ, ಪಕ್ಕದ ರಾಜ್ಯಗಳಲ್ಲಿ ಹಾಗೂ ವಿದೇಶದಲ್ಲೂ ಈ ಚಿತ್ರದ ಚಿತ್ರೀಕರಣ ನಡೆಯಲಿದೆ’ ಎಂದರು.





