ನನ್ನ ಹುಟ್ಟಿದೂರು ಸಮತಳದಲ್ಲಿ ಒಂದು ಉರ್ದು ಶಾಲೆಯಿತ್ತು. ಅದಕ್ಕೆಂದೇ ಸ್ವಂತ ಕಟ್ಟಡವಿರಲಿಲ್ಲ. ಅದು ಮೊಹರಂ ತಿಂಗಳಲ್ಲಿ ಪಂಜಾ ಕೂರಿಸುವ ಆಶೂರಖಾನೆಯಾಗಿ, ರಂಜಾನ್ ಬಂದಾಗ ನಮಾಜಿನ ಮಸೀದಿಯಾಗಿ ರೂಪಾಂತರ ಪಡೆಯುತ್ತಿತ್ತು. ಶಾಲೆಯ ದಿನಗಳಲ್ಲಿ ತರಗತಿಗಳು ನಡೆಯುತ್ತಿರಲಿಲ್ಲ. ಗೌರವಧನದ ಮೇಲೆ ಕೆಲಸ ಮಾಡುತ್ತಿದ್ದ ಉಸ್ತಾದರು ಬಿಡುವಾದಾಗ ಬಂದು ಮಕ್ಕಳಿಗೆ ಮುಖ ತೋರಿಸಿ ಹೋಗುತ್ತಿದ್ದರು. ಅವರಿದ್ದ ದಿನ ಶಾಲೆಯೊಳಗಿಂದ ಅಲೀಫ್‌ಸೆ ಅನಾರ್, ಬೇಸೆ ಬದಖ್ ಸಚಿತ್ರ ವರ್ಣಮಾಲೆಯನ್ನೊ, ಏಕ್ ದುವಾ ದೊ, ದೋ ದುವೇ ಚಾರ್ ಮಗ್ಗಿಯನ್ನೊ ಕೋರಸ್ಸಿನಲ್ಲಿ ಘೋಷಿಸುವ ಮಕ್ಕಳ ದನಿ ಕೇಳುತ್ತಿತ್ತು. ಉಸ್ತಾದರು ಪಾಠಕ್ಕಿಂತ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತರಬೇತುಗೊಳಿಸಿದ್ದರು. ಇದಕ್ಕೆ ಶಾಲೆಯ ಪಕ್ಕ ಕೆರೆಯಿದ್ದುದೂ ಒಂದು ಪ್ರಚೋದನೆ.
ಕೆರೆಯಲ್ಲಿ ಹಾಪು ತಾವರೆ ಬೆಳೆದು ಮೀನುಗಳು ಸುಪುಷ್ಟವಾಗಿರುತ್ತಿದ್ದವು. ಗುರುಗಳು ಹುಡುಗರಿಂದ ಕೆರೆ ಕೆಳಗಿನ ಎರೆಮಣ್ಣನ್ನು ಅಗೆಸಿ ಎರೆಹುಳ ಸಂಗ್ರಹಿಸುತ್ತಿದ್ದರು. ಅವುಗಳ ಮೃದ್ವಂಗದೊಳಗೆ ಗಾಳ ಪೋಣಿಸುವುದು, ಗಾಳವನ್ನು ಕೆರೆಯ ನೀರಿಗೆಸೆದು ಮೀನು ಕಚ್ಚುವುದನ್ನೇ ಕಾದು ಕೂರುವುದು, ಕಚ್ಚಿದಾಗ ಚಕ್ಕನೆ ಮೇಲಕ್ಕೆ ಚಿಮ್ಮಿಸಿ ದಡಕ್ಕೆ ಎತ್ತಿಹಾಕುವುದು, ಮೀನನ್ನು ಗಾಳದಿಂದ ಬಿಡಿಸಿ ಹಸಿಬಳ್ಳಿಯನ್ನು ಕಿವಿರುಗಳ ಮೂಲಕ ನುಗ್ಗಿಸಿ ಜಡೆಯಂತೆ ಮತ್ಸ ಮಾಲೆ ಮಾಡುವುದು ಇತ್ಯಾದಿ ಲೋಕೋಪಯೋಗಿ ವಿದ್ಯೆಗಳನ್ನು ಚೆನ್ನಾಗಿ ಕಲಿಸಿದ್ದರು. ಸಾರಿಗಾಗುವಷ್ಟು ಮೀನಾದ ಕೂಡಲೆ ಉಸ್ತಾದರು ಅವನ್ನು ವಿದ್ಯಾರ್ಥಿನಿಯರಿಂದ ಉಜ್ಜಿಸಿ ಚೊಕ್ಕಪಡಿಸಿ, ಬ್ಯಾಗಿಗೆ ಹಾಕಿಕೊಂಡು ತರೀಕೆರೆಯಲ್ಲಿದ್ದ ಮನೆಗೆ ಓಡುತ್ತಿದ್ದರು. ಅವರು ಬಾರದ ದಿನ ವಿದ್ಯಾರ್ಥಿಗಳು ನಿರಂಕುಶಮತಿಗಳಾಗಿ ಕೆರೆಯಲ್ಲಿ ಈಜಾಡುವುದು, ಅಡುಗೆ ಆಟವಾಡುವುದು, ಶಾಲೆಯ ಪಕ್ಕವಿದ್ದ ಹುಣಿಸೇ ಮರಕ್ಕೆ ಕಲ್ಲು ಬೀರುವುದು, ಬೇಲದಹಣ್ಣು ಆರಿಸುವುದೇ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದರು.
ಗುರುಗಳಿಗೆ ವರ್ತನೆಯ ಪ್ರಕಾರ ಪ್ರತಿ ಮನೆಯಿಂದ ಬುತ್ತಿ ಬರುತ್ತಿತ್ತು. ಅಕ್ಕಂದಿರನ್ನು ಈ ಶಾಲೆಗೆ ಹಾಕಿದ್ದರಿಂದ–ಉರ್ದು ಶಾಲೆಗೆ ಹಾಕುವುದೇ ಮುಂದಕ್ಕೆ ಓದದಿದ್ದರೆ ಪರವಾಗಿಲ್ಲ ಎಂಬ ಉದ್ದೇಶದಲ್ಲಿ– ಅವರ ಕಲಿಕೆ ಶೀಘ್ರದಲ್ಲಿ ಮೊಟಕುಗೊಂಡಿತು. ಪೋಷಕರ ಪ್ರಕಾರ ಮಹಿಳೆಯರಿಗೆ ಕುರಾನ್ ಓದಲು ಸಾಕಾಗುವಷ್ಟು ಅರಬ್ಬಿ ಕಲಿತರೆ ಸಾಕಾಗಿತ್ತು. ನನ್ನನ್ನೂ ಅಣ್ಣನನ್ನೂ ಕನ್ನಡ ಶಾಲೆಗೆ ಹಾಕಲಾಯಿತು. ತತ್ಪರಿಣಾಮ ಉರ್ದುವಿನ ಜತೆಗೆ ನನಗೆ ಮಾತಿನ ನಂಟುಳಿದು, ಓದು ಬರೆಹ ತಪ್ಪಿಹೋಯಿತು.
ಉರ್ದು ಶಾಲೆಗೆ ಸೇರಿದ ಬಹುತೇಕ ಮಕ್ಕಳು ಮುಂದೆ ಕಲಿಯಲಾಗದೆ ಡ್ರಾಪ್‌ಔಟ್ ಆಗುವುದು ನಿರೀಕ್ಷಿತವಾಗಿತ್ತು. ಮೇಲೆ ಬಂದರೂ, ಹೈಸ್ಕೂಲು–ಪಿಯುಸಿಯಲ್ಲಿ ಉರ್ದು ವಿದ್ಯಾರ್ಥಿಗಳು ಶಿಕ್ಷಕರಿಲ್ಲದೆ ಹೊರಗೆ ಓಡಾಡಿಕೊಂಡು ಇರುತ್ತಿದ್ದರು. ಕನ್ನಡ ಮಾಧ್ಯಮದಲ್ಲಿ ಕಲಿಯುತ್ತ ಹಿಂದು, ಕ್ರೈಸ್ತ ಸಹಪಾಠಿಗಳಲ್ಲಿ ಬೆರೆಯುತ್ತ ನಾನು ಉರ್ದುವಿನಿಂದ ಮಾತ್ರವಲ್ಲ, ಮುಸ್ಲಿಂ ಸಹಪಾಠಿಗಳಿಂದಲೂ ದೂರವಾದೆನು. ಅತ್ತ ಮುಸ್ಲಿಮರಲ್ಲೂ ಕನ್ನಡವೆಂದರೆ ಹಿಂದುವೀಕರಣ ಎಂಬ ಭಾವವಿತ್ತು. ಈ ಪರಕೀಯತಾ ಭಾವ ವಿದೇಶಿ ಭಾಷೆಯಾದ ಇಂಗ್ಲೀಷಿಗೆ ಅನ್ವಯವಾಗುತ್ತಿರಲಿಲ್ಲ. ಇದು ಮುಖ್ಯವಾಗಿ ಮೈಸೂರು ಕರ್ನಾಟಕದ ಸಮಸ್ಯೆ. ಉತ್ತರ ಕರ್ನಾಟಕದಲ್ಲಿ ಬಹುತೇಕ ಮುಸ್ಲಿಮರ ಮನೆಮಾತು ಕನ್ನಡವೆಂದೂ, ಕೆಲವು ಕುಟುಂಬದವರಿಗೆ ಉರ್ದು ಬರುವುದಿಲ್ಲವೆಂದೂ ನನಗೆ ತಿಳಿಯಿತು.
ಭಾರತದಲ್ಲಿ ಎಲ್ಲ ಮುಸ್ಲಿಮರ ಮನೆಮಾತು ಉರ್ದುವಲ್ಲ. ಪಂಜಾಬಿ, ಬಂಗಾಳಿ, ತಮಿಳು, ಮಲೆಯಾಳ, ಗುಜರಾತಿ, ಕನ್ನಡ, ಕೊಂಕಣಿ, ಬ್ಯಾರಿ ಮನೆಮಾತಿನ ಮುಸ್ಲಿಮರಿದ್ದಾರೆ. ಮುಸ್ಲಿಮರಾಡುವ ಉರ್ದುವಿನಲ್ಲೂ ಹಲವು ರೂಪಗಳಿವೆ. ಹೊಸದುರ್ಗ ತಾಲ್ಲೂಕಿನಿಂದ ಬರುತ್ತಿದ್ದ ಅಜ್ಜಿ ‘ಛೋರೇ, ನಕೊ ನ್ಹಾಟ್ರೆ, ಧೋಂಡೇ ಹೈ ರಸ್ತೇಮೆ’ ಎಂದು ಮಾತಾಡಿದರೆ, ನಾವು ಗೇಲಿ ಮಾಡುತ್ತಿದ್ದೆವು. ಈ ವೈವಿಧ್ಯ ಮತ್ತು ಶ್ರೇಣೀಕರಣ ಭಾರತದ ಮಟ್ಟಿಗೂ ನಿಜ. ದಕ್ಷಿಣ ಭಾರತದಲ್ಲಿರುವುದು ದಖನಿ. ಇದು ಲಖನೋವಿಗಿಂತ ಭಿನ್ನ. ಆದರೆ ಸಾಮಾಜಿಕ ಪ್ರತಿಷ್ಠೆಗಾಗಿ ದಖನಿಗರು ಲಖನೋವಿ ಬಳಸುವರು. ಒಮ್ಮೆ ನಾನು ಕಾಲೇಜಿಗೆ ಹೋಗಲೆಂದು ರೈಲೇರಿ ಕೂತೆ. ಎದುರುಗಡೆ ಗಡ್ಡಬಿಟ್ಟು ಟೋಪಿ ಧರಿಸಿ ಶುಭ್ರವಸನಧಾರಿಯಾಗಿ ಹಿರಿಯರು ಕೂತಿದ್ದರು. ಸಲಾಂ ಅಲೈಕುಂ ಎಂದೆ. ಅವರ ಫಾರಸಿಯುಕ್ತ ಉರ್ದುವಿನಲ್ಲಿ ‘ವಾಲೇಕುಂ ಸಲಾಂ, ಆಪಕೆ ಇಸ್ಮೆ ಶರೀಫ್ ಕ್ಯಾ? ಆಪ್ ಕಿಸಕೆ ಫರ್ಜನಂದ್?’ ಎಂದು ಕೇಳಿದರು. ಅದರರ್ಥ ನಿನ್ನ ಹೆಸರೇನು, ಯಾರ ಮಗ ಎಂದು. ಎಲೈ ರಾಜನೇ, ನಿನ್ನ ಅಗಲಿಕೆಯಿಂದ ಯಾವ ದೇಶದ ವಿರಹ ಅನುಭವಿಸುವರು ಎಂಬಂತಹ ಸಂಸ್ಕ ತ ನಾಟಕಗಳಲ್ಲಿ ಬರುವ ಪ್ರಶ್ನೆಯದು. ನನಗದು ತಿಳಿಯಲಿಲ್ಲ. ಆಗ ವೃದ್ಧರು ತಿರಸ್ಕಾರದಿಂದ ‘ಎಂಥ ಮುಸ್ಲಿಮನಪ್ಪ ನೀನು? ಉರ್ದು ಭಾಷೆಯೇ ಗೊತ್ತಿಲ್ಲ. ಈಗಿನ ಹುಡುಗರಲ್ಲಿ ಧಾರ್ಮಿಕ ಸಂಸ್ಕಾರವೇ ಇಲ್ಲ’ ಎಂದು ಪ್ರವಚನ ಆರಂಭಿಸಿದರು. ನಾನು ಉಪಾಯವಾಗಿ ಎದ್ದು ಡೋರಿನ ಬಳಿ ನಿಂತವನು ಸೀಟಿಗೆ ಮರಳಿ ಬರಲಿಲ್ಲ.
ಲೇಖಕನಾದ ಬಳಿಕವೂ ಕರ್ನಾಟಕದ ಉರ್ದು ಲೇಖಕರ ಜತೆ ತಕ್ಕ ಸಂವಾದ ಏರ್ಪಡಲಿಲ್ಲ. ಉರ್ದುವನ್ನು ಬಲಗಡೆಯಿಂದ ಬರೆಯುವುದನ್ನು ಉಲ್ಲೇಖಿಸಿ, ಕನ್ನಡದ ಗೆಳೆಯರು ನಾವು ಎಡ ನೀವು ಬಲ ಎನ್ನುತ್ತಿದ್ದರು. ನನ್ನ ಕನ್ನಡವನ್ನು ಪ್ರಶಂಸಿಸುವರು ಕನ್ನಡ ಮಾತಾಡದ ಮುಸ್ಲಿಮರನ್ನು ತೆಗಳಲು ನನ್ನನ್ನು ಅಸ್ತ್ರಮಾಡಿಕೊಳ್ಳುತ್ತಿದ್ದರು. ವೈಚಾರಿಕ ಚಳವಳಿಗಳಲ್ಲಿ ಭಾಗವಹಿಸುತ್ತ, ವೈಚಾರಿಕ ಸಾಹಿತ್ಯ ಓದುತ್ತ, ಧರ್ಮವು ಅಫೀಮು ಎಂದು ನಂಬಿದೆ. ಉರ್ದು ಇಸ್ಲಾಂಗಳನ್ನೂ ದೂರೀಕರಿಸುವುದರಲ್ಲೇ ನನ್ನ ಏಳಿಗೆಯಿದೆ; ಉರ್ದುವಿನೊಳಗೆ ಶ್ರೇಷ್ಠ ಸಾಹಿತ್ಯವಿರಲಿಕ್ಕಿಲ್ಲ, ಇಸ್ಲಾಮನೊಳಗೆ ಆಧುನಿಕತೆಯಿಲ್ಲ, ಒಳ್ಳೆಯ ಮುಸ್ಲಿಂ ಆಗಬೇಕಾದರೆ, ಹಿಂದೂಧರ್ಮಕ್ಕೆ, ಕನ್ನಡಕ್ಕೆ ಹತ್ತಿರವಾಗಿರಬೇಕು ಇತ್ಯಾದಿ ಗ್ರಹಿಕೆಗಳನ್ನು ಇದು ಬೆಳೆಸಿತು.
ಮುಸ್ಲಿಂ ಲೇಖಕರು, ವಕೀಲರು, ಬುದ್ಧಿಜೀವಿಗಳು, ಪತ್ರಕರ್ತರು ಸೇರಿ ಸಮುದಾಯದ ಮುಸ್ಲಿಮರ ರಾಜಕೀಯ ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸಲು ಒಂದು ಸಂಘಟನೆ ಮಾಡಿದೆವು. ಅದರಲ್ಲಿ ಬ್ಯಾರಿ, ಮಾಪ್ಳಾ, ಪಿಂಜಾರ, ನವಾಯತಿ ಮುಂತಾದ ಪಂಗಡದ ಮುಸ್ಲಿಮರಿದ್ದರು. ಅವರು ಕ್ರಮವಾಗಿ ಬ್ಯಾರಿ, ಮಲೆಯಾಳ, ಕನ್ನಡ, ಕೊಂಕಣಿ ಆಡುವವರು. ಆಗ ಯಾವ ಭಾಷೆಯಲ್ಲಿ ಸಭೆಯ ಕಲಾಪಗಳು ಇರಬೇಕೆಂಬ ಪ್ರಶ್ನೆ ಎದುರಾಯಿತು. ಎಲ್ಲರಿಗೂ ಸಮಾನವಾಗಿ ಅರ್ಥವಾಗುತ್ತಿದ್ದ ಭಾಷೆ ಕನ್ನಡವಾಗಿತ್ತು. ಕನ್ನಡದಲ್ಲಿ ಕಲಾಪ ಜರುಗಿತು. ಒಬ್ಬ ಸದಸ್ಯರು ಹೇಳಿದರು: ‘ನೀವು ಎಲ್ಲಿಯವರೆಗೆ ಉರ್ದುವಿನಲ್ಲಿ ಚರ್ಚೆ ಮಾಡುವುದಿಲ್ಲವೊ, ಅಲ್ಲೀತನಕ ಸಮುದಾಯದೊಳಗೆ ಭಾವನಾತ್ಮಕವಾಗಿ ಹೋಗುವುದಿಲ್ಲ’. ಅವರ ಈ ವಾಕ್ಯದಲ್ಲಿದ್ದ ‘ನೀವು’ ಶಬ್ದವೇ ಕನ್ನಡದ ನಮ್ಮನ್ನು ಹೊರಗಿಟ್ಟಿರುವುದು ಸ್ಪಷ್ಟವಾಗಿತ್ತು. ಉರ್ದುವಾಡದ ಮುಸ್ಲಿಮರನ್ನು ಕೀಳಾಗಿ ನೋಡುವ ಪದ್ಧತಿ ವ್ಯಾಪಕವಾಗಿದೆ.
ಇದೇ ಕಾಲಕ್ಕೆ ಉರ್ದು–ಮುಸ್ಲಿಂ ಹಿನ್ನೆಲೆಯ ಕಾರಣಕ್ಕಾಗಿಯೇ ನನ್ನ ಕನ್ನಡತನವನ್ನು ಶಂಕಿಸುವ ಘಟನೆ ನಡೆಯಿತು. ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳಾದ ನಾವು ಗೋಕಾಕ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದೆವು. ಮೆರವಣಿಗೆಯಲ್ಲಿ ಗೋಕಾಕ ವರದಿ ಜಾರಿಗೆ ಬರಲಿ, ಕನ್ನಡ ವಿರೋಧಿಗಳಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗುತ್ತಿದ್ದೆವು. ಮೆರವಣಿಗೆಯಲ್ಲಿ ಕನ್ನಡ ವಿರೋಧಿ ಮುಸ್ಲಿಮರಿಗೆ ಧಿಕ್ಕಾರ, ಉರ್ದು ಮುರ್ದಾಬಾದ್, ಅಜೀಜ್ ಸೇಟ್ ಪಾಕಿಸ್ತಾನಕ್ಕೆ ಹೋಗಲಿ ಎಂಬ ಘೋಷಣೆಗಳೂ ಕೇಳಿಬಂದವು. ಗೋಕಾಕ ವರದಿಯಿದ್ದುದು ಕನ್ನಡ–ಸಂಸ್ಕ ತ ಸಂಘರ್ಷದ ನಡುವೆ. ಅದು ಕನ್ನಡ–ಉರ್ದುವಾಗಿ ಬದಲಿಸುವಲ್ಲಿ ಮತೀಯವಾದ ಯಶಸ್ವಿಯಾಗಿತ್ತು.
ಉರ್ದು ಪ್ರಾಣಘಾತಕ ಆಗಬಹುದು ಎಂದು ಕೆಲವು ಘಟನೆಗಳು ಕಾಣಿಸಿದವು. ಒಂದು ಸಂಜೆ, ನಾನೂ ಲಂಕೇಶ್ ಪತ್ರಿಕೆಯ ಬಿ.ಚಂದ್ರೇಗೌಡರೂ ಶಿವಮೊಗ್ಗೆಯ ನೆಹರೂ ರಸ್ತೆಯಲ್ಲಿ ಅಡ್ಡಾಡುತ್ತಿದ್ದೆವು. ಒಂದೆಡೆ ಜನ ಗುಂಪುಗೂಡಿದ್ದರು. ಒಬ್ಬ ಸೈಕಲನ್ನು ತೆಗೆವಾಗ ಪಕ್ಕದಲ್ಲಿ ನಿಂತಿದ್ದ ಕಾರಿಗೆ ತಾಗಿದೆ. ಕಾರಿನ ಮಾಲೀಕ ಅವನಿಗೆ ಬೈಯುತ್ತ, ಸೈಕಲ್ಲಿನವನು ಅವನಿಗೆ ಸಮಜಾಯಿಷಿ ಕೊಡುತ್ತ ಇದ್ದರು. ಆಗ ಸೈಕಲ್ಲಿನವನ ಗೆಳೆಯನು ಗುಂಪನ್ನು ಸೀಳಿಕೊಂಡು ಬಂದು ‘ಕ್ಯಾರೇ, ಕ್ಯಾಹುವಾ?’ ಎಂದ. ಕೂಡಲೇ ವಾಗ್ದಂಡನೆ ವಿಧಿಸುತ್ತಿದ್ದ ಗುಂಪು ಮಿಂಚಿನ ವೇಗದಲ್ಲಿ ಸೈಕಲ್ಲಿನವನಿಗೆ ದಬದಬ ಚಚ್ಚಿತು. ಬೈಗುಳ ನೂಕಾಟದಲ್ಲಿ ಮುಗಿದಿರುತ್ತಿದ್ದ ಪ್ರಕರಣಕ್ಕೆ ಭಾಷೆ ಹೊಸ ತಿರುವನ್ನು ಕೊಟ್ಟಿತ್ತು. ಶಿಕ್ಷೆಯ ಪ್ರಮಾಣ ಆರೋಪಿಯ ಭಾಷೆ ಸಾಮಾಜಿಕ, ಧಾರ್ಮಿಕ ಹಿನ್ನೆಲೆಯ ಪ್ರಕಾರ ಬದಲಾಗುತ್ತದೆ. ಮುಂದೆ ಉರ್ದು ವಾರ್ತೆ ಪ್ರಸಾರ ಮಾಡುವ ದೂರದರ್ಶನದ ನಿರ್ಣಯ ಕೋಮು ಗಲಭೆಗೆ ಕಾರಣವಾದ; ಉರ್ದು ಬೋರ್ಡುಗಳಿಗೆ ಕಪ್ಪು ಮಸಿ ಬಳಿವ ಘಟನೆಗಳು ನಡೆದವು. ಉರ್ದು ಪರಕೀಯ, ವಿದೇಶಿ ಎಂಬ ವಾದಗಳ ಹಿಂದೆ ಮುಸ್ಲಿಮರೂ ವಿದೇಶಿಯರು ಎಂಬ ದನಿಯಡಗಿದೆ.
ಭಾಷೆಯಿಂದ ದೂರಸರಿತವು ಅದರೊಳಗಿನ ಜ್ಞಾನ, ಆಡುವ ಜನ,
ಸಂಸ್ಕ ತಿಯಿಂದ ದೂರ ಹೋಗುವುದೂ ಆಗಿದೆ. ಹೀಗಾಗಿ ಉರ್ದುವನ್ನು ಬೌದ್ಧಿಕವಾಗಿ ಪಡೆದುಕೊಳ್ಳಲು ತೀರ್ಮಾನಿಸಿದೆ. ಬಲಿಪಶು ಮನೋ ಭಾವದಿಂದ ಹೊರಬಂದು ದಖನಿ ಉರ್ದುವಿನ ಜೀವಂತಿಕೆಯನ್ನು ಗಮನಿಸ ತೊಡಗಿದೆ. ಅದರ ಜತೆಗೆ ಸಾಹಿತ್ಯಕ ಸಂಬಂಧವನ್ನು ಮರುಸ್ಥಾಪಿಸಲು ಯತ್ನಿಸಿದೆ. ದಖನಿ ಉರ್ದುವಿನ ಜೀವಂತಿಕೆಯ ಪ್ರತೀಕಗಳಾದ ಗಾದೆಗಳನ್ನು ಸಂಗ್ರಹಮಾಡಿದೆ. ನೂರಾರು ಮುಸ್ಲಿಮೇತರರಿಗೆ ಉರ್ದುವಿನಲ್ಲಿ ಪಾಂಡಿತ್ಯವಿರುವುದು ಗೊತ್ತಾಯಿತು. ಹಿಂದಿ ಸಿನಿಮಾ ಗೀತೆಗಳಿಂದ, ನುಸ್ರತ್ ಫತೆಯಲಿ ಹಾಡುಗಳಿಂದ, ಜಗಜೀತಸಿಂಗರ ಗಜಲುಗಳಿಂದ ಉರ್ದು ಜತೆ ಜನರಿಗೆ ಏರ್ಪಟ್ಟಿರುವ ನಂಟನ್ನು ಗುರುತಿಸಿದೆ. ಕನ್ನಡ ಲೇಖಕರ ಉರ್ದು ಗಜಲುಗಳನ್ನು ಓದಿದೆ. ನಾವು ಮೆಚ್ಚಿ ಕೇಳುವ ಹಿಂದಿ ಸಿನಿಮಾದ ಹಾಡುಗಳೆಲ್ಲವೂ ಉರ್ದುವಿನವು; ಅವನ್ನು ಬರೆದವರು ಉರ್ದು ಕವಿಗಳು ಎಂದು ಅರಿತೆ. ಉತ್ತರ ಭಾರತಕ್ಕೆ ಹೋದರೆ ಇಂಗ್ಲೀಷಿನ ಬದಲಿಗೆ ಉರ್ದು/ಹಿಂದಿ ಮಿಶ್ರಣದಲ್ಲಿ ಪ್ರಬಂಧ ಮಂಡಿಸಲು ಆರಂಭಿಸಿದೆ. ಉರ್ದು ಓದುವುದನ್ನು ಕಲಿತೆ. ಒಂದು ಕತೆ ಅನುವಾದಿಸಿದೆ.
ಆದರೆ ಉರ್ದುವಿನಲ್ಲಿ ಆರಂಭಿಕ ಶಿಕ್ಷಣ ಪಡೆಯುವುದು, ಮಕ್ಕಳನ್ನು ಅಸ್ಪಷ್ಟ ಕತ್ತಲಿನ ಭವಿಷ್ಯವಿಲ್ಲದ ದಾರಿಗೆ ಹಚ್ಚಿದಂತೆ. ಉರ್ದು ಬಡವರ ಭಾಷೆ. ಈ ವೈರುಧ್ಯಕರ ಅವಸ್ಥೆಯು ಅಂಗ್ರೇಜಿಯ ಮುಂದೆ ಕನ್ನಡಕ್ಕೂ ಇದೆ. ಆದರೆ ಕನ್ನಡವು ರಾಜ್ಯಭಾಷೆಯಾದ ಕಾರಣ, ಉರ್ದುವಿನಷ್ಟು ದಯನೀಯ ಸ್ಥಿತಿಯಿಲ್ಲ. ಮನೆಬದಿಯ ಎಡದಂಡೆ ಕೆನಾಲಿನ ಮೇಲೆ ವಾಕ್ ಮಾಡುವಾಗ ಅಲ್ಲೊಬ್ಬ ಸೈಕಲ್ ತೊಳೆದು, ಜಳಕಮಾಡಿ ಬಟ್ಟೆಒಗೆದು ಒಣಹಾಕಿ ಬೀಡಿಸೇದುತ್ತ ಕುಳಿತಿದ್ದ. ಆತ ಬೇಲ್ದಾರ್ ಕೆಲಸದವನು. ಮಕ್ಕಳು ಏನು ಓದುತ್ತಿದ್ದಾರೆಂದೆ. ಇನ್ನೂ ಚಿಕ್ಕವರು, ಉರ್ದುವಿಗೆ ಹಾಕಬೇಕೆಂದಿರುವೆ ಎಂದ. ನಾನು ಹೇಳಿದೆ: ‘ಕನ್ನಡಕ್ಕೆ ಅಂಗ್ರೇಜಿಗೆ ಹಾಕಿ, ಉರ್ದು ಓದಿದವರು ಉನ್ನತ ವಿದ್ಯಾಭ್ಯಾಸ ಮಾಡುವುದು, ಸರ್ಕಾರಿ ನೌಕರಿ ಪಡೆಯುವುದು ಕಡಿಮೆ. ನಾನೂ ನನ್ನ ಮಕ್ಕಳು ಕನ್ನಡ ಕಲಿತು ಈ ಸ್ಥಿತಿಗೆ ಬಂದಿದ್ದೇವೆ’. ಶಿಕ್ಷಣದಲ್ಲಿ ಮನೆಮಾತಿನಿಂದ ದೂರ ಹೋದರೆ ಒಳಿತು ಎಂದು ಹೇಳುವುದು ಎಂಥ ವೈರುಧ್ಯ?