Mysore
30
clear sky

Social Media

ಗುರುವಾರ, 13 ಫೆಬ್ರವರಿ 2025
Light
Dark

ದೇಶಗಳನ್ನು ಮಣಿಸಲು ಟ್ರಂಪ್ ಬಳಸಿದ ಸುಂಕದ ಅಸ್ತ್ರ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಭಟ ಸ್ವಲ್ಪ ತಗ್ಗಿದಂತೆ ಕಾಣುತ್ತಿದೆ. ಅಧಿಕಾರಕ್ಕೆ ಬಂದ ಹೊಸದರಲ್ಲಿ (ಜನವರಿ ೨೦) ಅವರು ಹೊರಡಿಸಿದ ಆದೇಶಗಳಿಗೆ ಲೆಕ್ಕವಿಲ್ಲ. ನೂರಾರು ಆದೇಶಗಳನ್ನು ಅವರು ಅಧಿಕಾರ ವಹಿಸಿಕೊಂಡ ನಂತರ ಹೊರಡಿಸಿದ್ದಾರೆ. ಆದರೆ ಅವರ ಯಾವುದೇ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಯಾದಂತೆ ಕಾಣುತ್ತಿಲ್ಲ.

ಅಕ್ರಮ ವಲಸಿಗರನ್ನು ಅಮೆರಿಕದಿಂದ ಅವರವರ ದೇಶಕ್ಕೆ ವಿಮಾನದಲ್ಲಿ ತುಂಬಿ ಕಳುಹಿಸುವುದು ಅವರ ಬಹುದಿನಗಳ ಕನಸು. ತಮ್ಮ ಈ ಆಲೋಚ ನೆಯನ್ನು ಕೃತಿಗೆ ಇಳಿಸಲು ಮಿಲಿಟರಿ ವಿಮಾನಗಳನ್ನು ಬಳಸಲೂ ಅನುಮತಿ ನೀಡಿದ್ದಾರೆ. ಹೀಗಾಗಿ ಅಕ್ರಮ ವಲಸಿಗರನ್ನು ಬಂಽಸಿ ಅವರವರ ದೇಶಕ್ಕೆ ಹೊತ್ತು ಹಾಕುವ ಕೆಲಸ ಆರಂಭವಾಗಿದೆ. ಆದರೆ ಅಕ್ರಮ ವಲಸಿಗರನ್ನು ವಾಪಸ್ ಪಡೆಯಲು ಮೊದ ಮೊದಲು ಕೊಲಂಬಿಯಾ ನಿರಾಕರಿಸಿತು. ಇಂಥ ಸ್ಥಿತಿಯಲ್ಲಿ ಟ್ರಂಪ್ ಹುಡುಕಿದ ದಾರಿ ಕಸ್ಟಮ್ಸ್ ಸುಂಕ ಅಥವಾ ತೆರಿಗೆ ಹೇರಿಕೆ ಎಂಬ ಅಸ್ತ್ರ. ಅಕ್ರಮ ವಲಸಿಗರನ್ನು ವಾಪಸ್ ಪಡೆಯದಿದ್ದರೆ ಅಮೆರಿಕಕ್ಕೆ ರಫ್ತು ಮಾಡುವ ಎಲ್ಲ ವಸ್ತುಗಳ ಮೇಲೆ ಶೇ. ೫೦ ರಷ್ಟು ಸುಂಕ ಹೇರುವುದಾಗಿ ಟ್ರಂಪ್ ಅವರು ಕೊಲಂಬಿಯಾಕ್ಕೆ ಬೆದರಿಕೆ ಹಾಕಿದರು. ಆದೇಶವನ್ನೂ ಹೊರ ಡಿಸಿದರು. ಕೊಲಂಬಿಯಾ ಅನಿವಾರ್ಯವಾಗಿ ಅಕ್ರಮ ವಲಸಿಗರನ್ನು ಹೊತ್ತ ಮಿಲಿಟರಿ ವಿಮಾನ ಇಳಿಯಲು ಅವಕಾಶ ಕೊಟ್ಟಿತು. ಇದೇ ರೀತಿ ಇತರ ಕೆಲವು ನೆರೆಯ ದೇಶಗಳಿಗೆ ಅಕ್ರಮ ವಲಸಿಗರನ್ನು ಸಾಗುಹಾಕಲಾಯಿತು. ಆದರೆ ಅದು ಅಷ್ಟು ಸುಲಭದ ಕಾರ್ಯವಲ್ಲ ಎಂಬುದು ಟ್ರಂಪ್‌ಗೆ ಅರಿವಾದಂತೆ ಕಾಣುತ್ತಿದೆ. ದೇಶದಲ್ಲಿ ಸುಮಾರು ಹತ್ತು ಲಕ್ಷ ಮಂದಿ ಅಕ್ರಮ ವಲಸಿಗರಿದ್ದು ಅವರನ್ನೆಲ್ಲಾ ಅವರವರ ದೇಶಕ್ಕೆ ಕಳುಹಿಸುವುದು ಸಾಹಸವೇ ಆಗಿದೆ. ಈಗ ಅಕ್ರಮ ವಲಸಿಗರನ್ನು ಬಂಽಸಿ ಒಂದು ಕಡೆ ಕೂಡಿಹಾಕಲು ಟ್ರಂಪ್ ನಿರ್ಧರಿಸಿದ್ದಾರೆ. ಕುಖ್ಯಾತವಾದ ಗ್ವಾಂಟನಾಮೋ ಬೇ ಜೈಲಿನಲ್ಲಿ ಅಕ್ರಮ ವಲಸಿಗರನ್ನು ಬಂಽಸಿಡಲು ತೀರ್ಮಾನಿಸಲಾಗಿದೆ. ಯಾವ ದೇಶ ಅಕ್ರಮ ವಲಸಿಗರನ್ನು ವಾಪಸ್ ಪಡೆಯಲು ಸಿದ್ಧವಿದೆಯೋ ಆ ದೇಶಕ್ಕೆ ಅವರನ್ನು ಕಳುಹಿಸಲಾಗುವುದು. ಉಳಿದವರನ್ನು ಜೈಲಿನಲ್ಲಿ ಇರಿಸಲಾಗುವುದು. ಭಾರತದಿಂದ ಬಂದ ಅಕ್ರಮ ವಲಸಿಗರ ಸಂಖ್ಯೆ ೧೮ ಸಾವಿರ ಎಂದು ಸದ್ಯಕ್ಕೆ ಗುರುತಿಸಲಾಗಿದೆ. ಅವರನ್ನು ವಾಪಸ್ ಕರೆಸಿಕೊಳ್ಳಲು ಭಾರತ ಒಪ್ಪಿದೆ. ಆದ್ದರಿಂದ ಸಮಸ್ಯೆಯಿಲ್ಲ. ಇದು ಮೊದಲ ಹಂತದಲ್ಲಿ ಗುರುತಿಸಲಾದ ಅಕ್ರಮ ವಲಸಿಗರಷ್ಟೆ. ಇನ್ನೂ ಲಕ್ಷಾಂತರ ಮಂದಿ ಅಕ್ರಮ ವಲಸಿಗರಿದ್ದು ಅವರ ಗತಿ ಏನು ಎಂಬುದು ಮುಂದೆ ಗೊತ್ತಾಗಲಿದೆ. ಭಾರತದ ವಿಚಾರದಲ್ಲಿಯೂ ಟ್ರಂಪ್ ಸರ್ಕಾರ ಅದೇ ಸುಂಕದ ಅಸ್ತ್ರವನ್ನು ಬಳಸಿತೆಂದು ಹೇಳಲಾಗಿದೆ.

ಸುಂಕದ ಅಸ್ತ್ರವನ್ನು ಮೆಕ್ಸಿಕೋ ಮತ್ತು ಕೆನಡಾದ ಮೇಲೆ ಬಳಸುವುದಾಗಿ ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ. ಈ ಎರಡೂ ದೇಶಗಳ ಮೇಲೆ ಶೇ. ೨೫ರಷ್ಟು ಸುಂಕ ವಿಧಿಸುವುದು ಟ್ರಂಪ್ ಉದ್ದೇಶ. ಫೆಬ್ರವರಿ ಒಂದರಿಂದಲೇ ಈ ಶುಲ್ಕ ಜಾರಿಯಾಗಲಿದೆ ಎಂದು ಅವರು ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತಾನೂ ಅಷ್ಟೇ ಪ್ರಮಾಣದಲ್ಲಿ ಅಮೆರಿಕ ರಫ್ತು ಮಾಡುವ ವಸ್ತುಗಳ ಮೇಲೆ ಸುಂಕ ವಿಧಿಸುವುದಾಗಿ ಕೆನಡಾ ಈಗಾಗಲೇ ಪ್ರಕಟಿಸಿದೆ. ಈ ಅಸ್ತ್ರ ಬಳಕೆಯಿಂದ ಆಗಬಹುದಾದ ದುಷ್ಪರಿಣಾಮ ಎಂದರೆ ಬೆಲೆ ಏರಿಕೆ. ಅದರ ಮುಂದಿನ ಬೆಳವಣಿಗೆ ಹಣದುಬ್ಬರ. ಇದು ಟ್ರಂಪ್‌ಗೆ ತಿಳಿಯದಿರುವ ವಿಚಾರವೇನಲ್ಲ.

ಸುಂಕ ಹೆಚ್ಚು ವಿಧಿಸಿದರೆ ಹೆಚ್ಚು ಆದಾಯ ಬರುತ್ತದೆ ಎನ್ನುವ ಟ್ರಂಪ್ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇದೆ. ಕೆನಡಾದಿಂದ ಸಾಕಷ್ಟು ಪ್ರಮಾಣದಲ್ಲಿ ತೈಲ ಮತ್ತು ಅನಿಲವನ್ನು ಅಮೆರಿಕ ಪಡೆಯುತ್ತಿದೆ. ಇವುಗಳ ಮೇಲೆ ಹೆಚ್ಚು ಸುಂಕ ವಿಽಸಿದರೆ ಸಹಜವಾಗಿ ಅದರ ಪರಿಣಾಮ ತೈಲ ಮತ್ತು ಅನಿಲ ಬೆಲೆಗಳ ಮೇಲೆ ಆಗುತ್ತದೆ. ತೈಲ ಮತ್ತು ಅನಿಲಕ್ಕೆ ಜನರು ಹೆಚ್ಚು ಬೆಲೆಕೊಡಬೇಕಾಗುತ್ತದೆ. ತೈಲ ಆಮದಿನ ಸಮಸ್ಯೆಯನ್ನು ನಿಭಾಯಿಸಲು ದೇಶದಲ್ಲಿರುವ ತೈಲನಿಕ್ಷೇಪಗಳಿಂದ ತೈಲ ತೆಗೆಯುವ ಕಾರ್ಯ ಆರಂಭಿಸಬೇಕೆಂದೂ ಟ್ರಂಪ್ ಸೂಚನೆ ನೀಡಿದ್ದಾರೆ. ಕೆನಡಾವನ್ನು ಅಮೆರಿಕದ ಭಾಗವನ್ನಾಗಿ ಮಾಡಲು ಟ್ರಂಪ್ ಬಳಸಿದ ದಾರಿ ಇದು. ಇದೇ ರೀತಿ ಸುಂಕದ ಅಸ್ತ್ರವನ್ನು ಚೀನಾ ಮತ್ತು ಭಾರತದ ಮೇಲೂ ಟ್ರಂಪ್ ಹೇರುವ ಸಾಧ್ಯತೆ ಇದೆ.
ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳ ಮೇಲೆ ಶೇ. ೬೦ರ ಪ್ರಮಾಣದಲ್ಲಿ ಶುಲ್ಕ ವಿಧಿಸುವುದಾಗಿ ಟ್ರಂಪ್ ಮೊದಲು ಪ್ರಕಟಿಸಿದ್ದರು. ಪ್ರತಿಯಾಗಿ ಚೀನಾ ಶೇ. ನೂರರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿತ್ತು. ಚೀನಾದ ಮೇಲೆ ಶೇ. ೬೦ರಷ್ಟು ಸುಂಕ ವಿಽಸಿದರೆ ಅದು ಅಮೆರಿಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಂಡಂತಿರುವ ಟ್ರಂಪ್ ಇನ್ನೂ ಸುಂಕದ ಪ್ರಮಾಣ ಪ್ರಕಟಿಸಿಲ್ಲ. ಬಹುಶಃ ಶೇ. ೧೦ ರಷ್ಟು ಸುಂಕ ವಿಽಸಬಹುದೆಂದು ಹೇಳಲಾಗಿದೆ. ಈ ವಿಚಾರದಲ್ಲಿ ತಾನು ಮಾತುಕತೆ ನಡೆಸಲು ಬಯಸುವುದಾಗಿ ಚೀನಾ ನಾಯಕರು ಹೇಳಿರುವುದರಿಂದ ಟ್ರಂಪ್ ತಮ್ಮ ನಿರ್ಧಾರವನ್ನು ತಡೆಹಿಡಿದಂತೆ ಕಾಣುತ್ತಿದೆ. ಮಾತುಕತೆ ನಡೆಸಿ ಒಂದು ಒಪ್ಪಂದ ಮಾಡಿಕೊಳ್ಳುವ ಮೂಲಕ ಉಕ್ರೇನ್ ಯುದ್ಧ ನಿಲ್ಲಿಸದಿದ್ದರೆ ಹೆಚ್ಚುವರಿ ಸುಂಕ ವಿಽಸುವುದಾಗಿ ರಷ್ಯಾಕ್ಕೂ ಟ್ರಂಪ್ ಬೆದರಿಕೆಹಾಕಿದ್ದಾರೆ. ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧಗಳಿಂದಾಗಿ ರಷ್ಯಾದ ವಾಣಿಜ್ಯ ವಹಿವಾಟು ಕಡಿಮೆಯಾಗಿದೆ. ಇದೀಗ ಅದರ ಮೇಲೂ ಹೆಚ್ಚು ಸುಂಕ ವಿಧಿಸುವ ಟ್ರಂಪ್ ಬೆದರಿಕೆ ಪುಟಿನ್ ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ.

ಸುಂಕದ ವಿಚಾರದಲ್ಲಿ ಟ್ರಂಪ್ ಅವರು ಭಾರತಕ್ಕೆ ರಿಯಾಯಿತಿ ಕೊಡುವ ಸಾಧ್ಯತೆ ಇಲ್ಲ. ಭಾರತದಿಂದ ರಫ್ತಾಗುವ ವಸ್ತುಗಳ ಮೇಲೆ ಕೂಡ ಸುಂಕ ಹೇರಲು ಟ್ರಂಪ್ ಯೋಚಿಸುತ್ತಿದ್ದಾರೆ. ಭಾರತ ಅಲ್ಲದೆ ಯೂರೋಪಿನ ದೇಶಗಳ ಎಲ್ಲ ಆಮದು ವಸ್ತುಗಳ ಮೇಲೆ ಕನಿಷ್ಠ ಶೇ. ೧೦ರಷ್ಟು ಸುಂಕ ಹೇರುವುದು ಅವರ ಯೋಚನೆ. ಸಾಕಷ್ಟು ಪ್ರಮಾಣದಲ್ಲಿ ಔಷಧಗಳು, ಐಟಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಉಪಕರಣಗಳು, ಸಿದ್ಧ ಉಡುಪು, ಸಾರಿಗೆ ತಂತ್ರಜ್ಞಾನವನ್ನು ಭಾರತವು ಅಮೆರಿಕಕ್ಕೆ ರಫ್ತು ಮಾಡುತ್ತಿದೆ. ಅವುಗಳ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಸುಂಕ ವಿಧಿಸುವುದರಿಂದ ಅಮೆರಿಕದ ಆದಾಯ ಹೆಚ್ಚುತ್ತದೆ ನಿಜ. ಆದರೆ ಪ್ರತಿಯಾಗಿ ಅಮೆರಿಕದಿಂದ ಬರುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ಹೇರುವ ಸ್ಥಿತಿಯಲ್ಲಿ ಭಾರತ ಇಲ್ಲ. ಈಗಾಗಲೇ ಸುಂಕ ಜಾಸ್ತಿಯೇ ಇದೆ. ಹಾಗೆ ಮಾಡಿದರೆ ಬೆಲೆ ಏರಿಕೆಯಾಗುತ್ತದೆ.

ಅಮೆರಿಕವು ಭಾರತದ ಜೊತೆಗಿನ ವಾಣಿಜ್ಯ ಬಾಂಧವ್ಯವನ್ನು ಸೀಮಿತಗೊಳಿಸುವ ಸಂಭವವಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಈಗಾಗಲೇ ಕುಸಿದಿದೆ. ದೇಶೀಯ ಉತ್ಪನ್ನಗಳ ಬಳಕೆಯ ಪ್ರಮಾಣವೂ ತಗ್ಗಿದೆ. ರಷ್ಯಾದ ತೈಲ ಸರಬರಾಜಿನ ಮೇಲೆ ಅಮೆರಿಕ ಮತ್ತಷ್ಟು ನಿರ್ಬಂಧ ವಿಧಿಸಿರುವುದರಿಂದ ತೈಲ ಆಮದು ವೆಚ್ಚವೂ ಏರಿಕೆಯಾಗಲಿದೆ. ಅಂದರೆ ಬಳಕೆದಾರರ ಮೇಲೆ ಹೊರೆ ಹೆಚ್ಚಲಿದೆ. ಅಮೆರಿಕದ ವಲಸೆನೀತಿ ಭಾರತದ ಮೇಲೆ ಅದರಲ್ಲಿಯೂ ಐಟಿ, ಎಐ ತಂತ್ರಜ್ಞರ ಉದ್ಯೋಗ ಲಭ್ಯತೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಬಂಡವಾಳ ಹೂಡಿಕೆಯ ಪ್ರಮಾಣವೂ ತಗ್ಗಲಿದೆ.

ಕೇಂದ್ರ ಸರ್ಕಾರದ ಸಾಮಾನ್ಯ ಬಜೆಟ್ ಶನಿವಾರ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲಕಾರಿ. ಬಹುಶಃ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲಿನ ಸುಂಕದ ಪ್ರಮಾಣವನ್ನು ತಗ್ಗಿಸಬಹುದು ಎನ್ನುವುದು ಸದ್ಯಕ್ಕೆ ಇರುವ ಊಹೆ. ಆದರೆ ಈ ಸಮಸ್ಯೆಯನ್ನು ಮುಂದೂಡಿ ಸಂದರ್ಭ ಬಂದಾಗ ನಿಭಾಯಿಸಲೂ ಯೋಚಿಸಬಹುದು. ಇದೇನೇ ಇದ್ದರೂ ಟ್ರಂಪ್ ಅವರ ನೀತಿಗಳು ಭಾರತದ ಆರ್ಥಿಕ ನೀತಿಗಳ ಮೇಲೆ ಗಂಭೀರ ಪರಿಣಾಮ ಬೀರಲಿರುವುದು ಸ್ಪಷ್ಟ. ಹಾಗೆ ನೋಡಿದರೆ ಟ್ರಂಪ್ ಅವರ ಆರ್ಥಿಕ ನೀತಿಗಳು ವಿಶ್ವದ ವ್ಯಾಪಾರ-ವಹಿವಾಟು, ರಕ್ಷಣೆ, ಆರ್ಥಿಕ ನೀತಿಗಳ ಮೇಲೆ ಗಂಭೀರ ಪರಿಣಾಮ ಬೀರಲಿವೆ. ಈಗಾಗಲೇ ಈ ಬಗ್ಗೆ ವಿಶ್ವ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

ಟ್ರಂಪ್ ಅವರ ‘ಅಮೆರಿಕ ಫಸ್ಟ್’ ಲೆಕ್ಕಾಚಾರ ಈಗಾಗಲೇ ವಿಶ್ವದ ಮಟ್ಟದಲ್ಲಿ ಕೋಲಾಹಲ ಎಬ್ಬಿಸಿದೆ. ಅಮೆರಿಕವನ್ನು ಹೆಚ್ಚು ಶ್ರೀಮಂತಗೊಳಿಸುವುದು ಮತ್ತು ಬಲಾಢ್ಯಗೊಳಿಸುವುದು ಟ್ರಂಪ್ ಉದ್ದೇಶ. ಹೀಗಾಗಿ ವಿಶ್ವದ ಇತರ ಸಮಸ್ಯೆಗಳ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳಬಯಸುವುದಿಲ್ಲ. ಅಮೆರಿಕವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಆದಾಯ ಮೂಲಗಳ ಸಮೀಕ್ಷೆ ನಡೆಸುತ್ತಿ ದ್ದಾರೆ. ಯಾವುದು ಅವರಿಗೆ ಅನಗತ್ಯ ಎನಿಸುತ್ತದೆಯೋ ಅದನ್ನು ರದ್ದು ಮಾಡುತ್ತಿದ್ದಾರೆ.

ಅಮೆರಿಕ ಇದೀಗ ಕೆಲವೇ ಪ್ರಭಾವಿ ಶ್ರೀಮಂತರ ಕೂಟದ ಆಡಳಿತಕ್ಕೆ ಒಳಗಾಗಿದೆ. ನಿಜವಾದ ಪ್ರಜಾತಂತ್ರ ವ್ಯವಸ್ಥೆ ಕ್ರಮೇಣ ಮರೆಯಾಗುತ್ತಿದೆ.

Tags: