Mysore
24
few clouds
Light
Dark

ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್: ತೀವ್ರಗೊಂಡ ಸ್ಪರ್ಧೆ

ಅಮೆರಿಕದ ಚುನಾವಣೆಗಳು ವಿಶ್ವದಾದ್ಯಂತ ಗಮನ ಸೆಳೆಯುತ್ತ ಬಂದಿವೆ. ಅಮೆರಿಕದ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ? ಅವರ ನೀತಿಗಳು ಏನು? ಎನ್ನುವ ಬಗ್ಗೆ ದೇಶ ವಿದೇಶಗಳಲ್ಲಿ ಸಾಕಷ್ಟು ಕುತೂಹಲ ಇದೆ. ಅಭಿವೃದ್ಧಿಯಲ್ಲಿ, ಮಿಲಿಟರಿ ಶಕ್ತಿಯಲ್ಲಿ ಅಮೆರಿಕ ಮುಂದಿದೆ. ಜಗತ್ತಿನಾದ್ಯಂತ ಎಲ್ಲ ಕ್ಷೇತ್ರಗಳ ಮೇಲೆ ಅದರ ಪ್ರಭಾವ ಇದೆ. ಮುಖ್ಯವಾಗಿ ಭದ್ರತೆ ಮತ್ತು ವಾಣಿಜ್ಯ ವಿಚಾರದಲ್ಲಿ ಅಮೆರಿಕ ಆದ್ಯತೆಗಳು ಎಷ್ಟೋ ದೇಶಗಳ ಭವಿಷ್ಯವನ್ನೇ ನಿರ್ಧರಿಸುವಂಥವು. ಹೀಗಾಗಿಯೇ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಗಳು ಮಹತ್ವ ಪಡೆದಿವೆ.

ಅಮೆರಿಕದ ಅಧ್ಯಕ್ಷರು ಯಾರಾಗುತ್ತಾರೆ ಎನ್ನುವುದು ಭಾರತಕ್ಕೂ ಮುಖ್ಯ. ನೆರೆಯ ಚೀನಾ ದೇಶ ಭಾರತಕ್ಕೆ ದೊಡ್ಡ ಸವಾಲಾಗಿದೆ. ಹಿಮಾಲಯ ಗಡಿಯಲ್ಲಿ ಸತತವಾಗಿ ವಿಸ್ತರಣೆ ಎದುರಿಸುತ್ತ ಬಂದಿದೆ. ಯುದ್ಧದ ಸನ್ನಿವೇಶಗಳೂ ಎದುರಾಗಿವೆ. ಸೇನಾ ಸಂಘರ್ಷದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿವೆ. ಅಮೆರಿಕ ಮತ್ತು ಚೀನಾ ಮಿತ್ರ ದೇಶಗಳಲ್ಲ. ಸದಾ ಮುಸುಕಿನ ಯುದ್ಧ ನಡೆಯುತ್ತ ಬಂದಿದೆ. ಈ ವಿರಸದಿಂದಾಗಿ ಅಮೆರಿಕ ಭಾರತದ ಸ್ನೇಹಕ್ಕೆ ಆದ್ಯತೆ ನೀಡುತ್ತಿದೆ. ಚೀನಾ ಎದುರಿಸಲು ಭಾರತಕ್ಕೂ ಬೇಕು ಅಮೆರಿಕದ ಸ್ನೇಹ. ಚೀನಾ ಸಾಲಕೊಟ್ಟು ನೆರೆಯ ರಾಷ್ಟ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತ ಬಂದಿದೆ. ಭಾರತದ ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನದ ಜೊತೆ ಚೀನಾ ಅತೀವ ಸ್ನೇಹ ಹೊಂದಿದೆ. ಹಿಂದಿನ ಸೋವಿಯತ್ ಒಕ್ಕೂಟ ಭಾರತದ ಪರ ಇತ್ತು. ಆಗ ಅಮೆರಿಕ ಪಾಕ್ ಪರ ನಿಂತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇಂದಿನ ರಷ್ಯಾ ಹಿಂದಿನಂತಿಲ್ಲ. ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರತದ ಜೊತೆ ಉತ್ತಮ ಸ್ನೇಹ ಹೊಂದಿದೆಯಾದರೂ ಜಾಗತಿಕವಾಗಿ ಅದರ ಪ್ರಭಾವ ತಗ್ಗಿದೆ. ಹಲವು ಯುದ್ಧಗಳಲ್ಲಿ ಸೋತರೂ ಪಾಕಿಸ್ತಾನ ಭಾರತದ ಭದ್ರತೆಗೆ ಒಡ್ಡುತ್ತಿರುವ ಸವಾಲನ್ನು ಎದುರಿಸಲು ಭಾರತಕ್ಕೆ ಅಮೆರಿಕದ ಸ್ನೇಹ ಇಂದಿನ ಅಗತ್ಯ. ಅಮೆರಿಕ, ಭಾರತೀಯರಿಗೆ ಕನಸಿನ ದೇಶವಾಗಿದ್ದು, ಲಕ್ಷಾಂತರ ಯುವಕರಿಗೆ ಉದ್ಯೋಗ ಒದಗಿಸಿದೆ. ಹೊಸದಾಗಿ ವಲಸೆ ಹೋಗುವುದು ಕಷ್ಟವಾಗಿದ್ದರೂ ಭಾರತದ ಯುವಕರಿಗೆ ಅಮೆರಿಕದ ಆಕರ್ಷಣೆ ತಗ್ಗಿಲ್ಲ. ಅಮೆರಿಕದ ವಲಸೆ ನೀತಿ ಬದಲಾಗುವುದನ್ನೇ ಯುವಕರು ಕಾಯುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ವಲಸೆಯನ್ನು ವಿರೋಧಿ ಸುತ್ತ ಬಂದಿದ್ದಾರೆ. ಅಧಿಕಾರಕ್ಕೆ ಬಂದರೆ ಆಫ್ರಿಕಾ ವಲಯದ ಹತ್ತಾರು ದೇಶಗಳ ವಲಸಿಗರನ್ನು ವಿಮಾನದಲ್ಲಿ ಹತ್ತಿಸಿ ಗಡಿಯಿಂದ ಹೊರಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಮೆಕ್ಸಿಕೊ ಗಡಿಯಲ್ಲಿ ತಡೆಗೋಡೆ ಕಟ್ಟುವ ಕೆಲಸ ಹಿಂದೆ ಅವರು ಅಧಿಕಾರದಲ್ಲಿ ಇದ್ದಾಗಲೇ ಆರಂಭವಾಗಿತ್ತು. ಮುಂದಿನ ಚುನಾವಣೆಗಳಲ್ಲಿ ಅವರು ಅಧಿಕಾರಕ್ಕೆ ಬಂದರೆ ವಲಸಿಗರಿಗೆ ಅವರ ನೀತಿಗಳು ಮಾರಕವಾಗಲಿವೆ.

ಟ್ರಂಪ್ ಅಧಿಕಾರಕ್ಕೆ ಬಂದರೆ ಆಫ್ರಿಕಾ ದೇಶಗಳ ಜನರಿಗೆ ಬಂದ ಗತಿಯೇ ಭಾರತದ ವಲಸಿಗರಿಗೂ ಬರಬಹುದು. ಡೆಮಾಕ್ರಟಿಕ್ ಪಕ್ಷದ ನೀತಿಗಳು ವಲಸೆ ವಿಚಾರದಲ್ಲಿ ಉದಾರವಾಗಿವೆ. ಕಮಲಾ ಹ್ಯಾರಿಸ್ ಕೂಡ ವಲಸೆ ಜನರ ಬಗ್ಗೆ ಅನುಕಂಪ ಉಳ್ಳವರಾಗಿದ್ದಾರೆ. ಅವರ ತಾಯಿ ಕೂಡ ವಲಸೆ ಬಂದು ಮತ್ತೊಬ್ಬ ವಲಸಿಗರನ್ನು ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿದವರಾಗಿದ್ದಾರೆ. ಈ ವಿಚಾರದಲ್ಲಿ ಭದ್ರತೆಗೆ, ಕಾನೂನುಬದ್ಧ ವಲಸೆಗೆ ಗಮನಕೊಡುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ಭಾರತದಲ್ಲಿಯೂ ಆಸಕ್ತಿ ಕೆರಳಿಸಿವೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸಲಿರುವ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಇದೀಗ ತಮ್ಮ ಆದ್ಯತೆಗಳನ್ನು ಶಿಕಾಗೋದಲ್ಲಿ ನಡೆದ ಪಕ್ಷದ ಬೆಂಬಲಿಗರ ಸಮಾವೇಶದಲ್ಲಿ ಪ್ರಕಟಿಸಿದ್ದಾರೆ. ಎಲ್ಲ ಜನರಿಗೂ ಅವಕಾಶ ಒದಗಿಸುವ ಆರ್ಥಿಕ ವ್ಯವಸ್ಥೆಯನ್ನು ರೂಪಿಸಲಾಗುವುದೆಂದು ಘೋಷಿಸಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಪಕ್ಷದಲ್ಲಿ ತಾವು ಮಧ್ಯಮ ವರ್ಗದ ಜೀವನಮಟ್ಟವನ್ನು ಸುಧಾರಿಸಲು ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಕುಟುಂಬದ ಕಲ್ಯಾಣ ಕೇಂದ್ರಿತವಾದ ನೀತಿಗಳನ್ನು ಪ್ರಕಟಿಸಿ ಆಶ್ಚರ್ಯ ಹುಟ್ಟಿಸಿದ್ದಾರೆ. ಸಾಮಾನ್ಯವಾಗಿ ಅಧ್ಯಕ್ಷೀಯ ಚುನಾವಣೆಗಳಲ್ಲಿ ಅಮೆರಿಕವನ್ನು ಮತ್ತಷ್ಟು ಶಕ್ತಿಯುತಗೊಳಿಸುವ ವಿಚಾರ ಪ್ರಸ್ತಾಪಿಸಿ ಜನಮನಗೆಲ್ಲುವ ಪ್ರಯತ್ನ ನಡೆಯುತ್ತ ಬಂದಿದೆ. ಆದರೆ ಇದೇ ಮೊದಲ ಬಾರಿಗೆ ಕಮಲಾ ಹ್ಯಾರಿಸ್ ಅವರು ಜನರ ಗಮನವನ್ನು ಕುಟುಂಬದ ಕಡೆಗೆ ಸೆಳೆದಿದ್ದಾರೆ. ದೇಶದ ಮಧ್ಯಮ ವರ್ಗವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ತೆರಿಗೆ ಭಾರದಿಂದ ಬಳಲಿದೆ. ಕುಟುಂಬ ನಿರ್ವಹಣೆಗೆ ಹಣ ಸಾಕಾಗುವುದಿಲ್ಲ. ಮಧ್ಯಮ ವರ್ಗದವರ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಪರಿಸ್ಥಿತಿಯನ್ನು ಸುಧಾರಿಸುವ ಅವರ ಘೋಷಣೆ ಸಹಜ ವಾಗಿಯೇ ಜನರ ಗಮನ ಸೆಳೆದಿದೆ. ರಾಜಕೀಯವನ್ನು ಹೊಸರೀತಿಯಲ್ಲಿ ನೋಡುವ ಅವರ ಪ್ರಯತ್ನ ಕುತೂಹಲಕಾರಿಯಾಗಿದೆ. ಟ್ರಂಪ್‌ ಅಧಿಕಾರಾವಧಿಯಲ್ಲಿ ಆರೋಗ್ಯ ಯೋಜನೆಯನ್ನು ಮೊಟಕುಗೊಳಿಸಲಾಗಿತ್ತು. ಅದರಿಂದ ಲಕ್ಷಾಂತರ ಅಮೆರಿಕದ ಜನರು ಸರ್ಕಾರದ ಆರೋಗ್ಯ ಕಾರ್ಯಕ್ರಮದಿಂದ ಹೊರಗೆ ಉಳಿದಿದ್ದರು. ಇದೀಗ ಕಮಲಾ ಹ್ಯಾರಿಸ್ ಹಿಂದೆ ಆಗಿರುವ ಲೋಪವನ್ನು ಸರಿಪಡಿಸಿ ಇಡೀ ಕುಟುಂಬದ ಆರೋಗ್ಯ ಕಾಪಾಡುವ ಉತ್ತಮ ಯೋಜನೆ ರೂಪಿಸಲಾಗುವುದು ಎಂದು ಘೋಷಿಸಿದ್ದಾರೆ. ಪ್ರತಿಕುಟುಂಬವೂ ಸ್ವಂತ ಮನೆ ಕೊಳ್ಳಲು ಅನುಕೂಲವಾಗುವಂತೆ ಸಬ್ಸಿಡಿ ನೀಡುವುದು, ಎಲ್ಲ ಮಕ್ಕಳೂ ವಿದ್ಯಾವಂತರಾಗಲು ಪ್ರಾಥಮಿಕ ಶಿಕ್ಷಣವನ್ನು ಆಕರ್ಷಣೀಯಗೊಳಿಸುವುದು ಅವರ ನೀತಿ, ಅತಿ ಶ್ರೀಮಂತರ ಮೇಲಿನ ತೆರಿಗೆಯನ್ನು ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ತಗ್ಗಿಸಿದ್ದಾರೆ. ಮುಂದೆ ಅಧಿಕಾರಕ್ಕೆ ಬಂದರೆ ಅದನ್ನು ಮುಂದುವರಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಕಮಲಾ ಹ್ಯಾರಿಸ್ ಶ್ರೀಮಂತರಿಗೆ ಹೆಚ್ಚು ತೆರಿಗೆಯನ್ನು ವಿಧಿಸಿ ಅದರಿಂದ ಬಂದ ಹಣವನ್ನು ಮಧ್ಯಮ ವರ್ಗದ ಕಲ್ಯಾಣಕ್ಕೆ ಬಳಸುವುದಾಗಿ ಘೋಷಿಸಿದ್ದಾರೆ. ಅವರ ಕಾರ್ಯಕ್ರಮಗಳಿಗೆ ಸಮಾವೇಶದಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಚಪ್ಪಾಳೆ ತಟ್ಟಿ ಸ್ವಾಗತಿಸಿದೆ.

ಗಾಜಾ ಹತ್ಯಾಕಾಂಡ ಮತ್ತು ಇಸ್ರೇಲ್ ವಿಚಾರದಲ್ಲಿ ಈಗಿನ ಅಧ್ಯಕ್ಷ ಬೈಡನ್ ಅವರ ನೀತಿಯನ್ನೇ ಮುಂದುವರಿಸುವ ಸೂಚನೆಯನ್ನು ಅವರು ನೀಡಿದ್ದಾರೆ. ಕದನ ವಿರಾಮ ಘೋಷಣೆಗೆ ಸತತ ಯತ್ತ ನಡೆಯುತ್ತಿವೆ. ಅವು ಯಶಸ್ವಿಯಾದರೆ ಮತ್ತಷ್ಟು ಪ್ಯಾಲೆಸ್ಟೇನ್ ಜನರು, ಮಕ್ಕಳು ಸಾಯುವ ದುರಂತ ತಪ್ಪುತ್ತದೆ. ಯುದ್ಧ ನಿಂತು ಪ್ಯಾಲೆಸ್ಟೇನ್ ಜನರಿಗೆ ಸ್ವತಂತ್ರ ದೇಶ ಸ್ಥಾಪಿಸುವ ಸಲಹೆಗೆ ಅವರು ತಮ್ಮ ಬೆಂಬಲ ಘೋಷಿಸಿದ್ದಾರೆ. ಇಸ್ರೇಲ್ ಮತ್ತು ಅಮೆರಿಕ ಬಾಂಧವ್ಯ ಹಳೆಯದು. ಇಸ್ರೇಲ್ ಜೊತೆಗಿನ ಸ್ನೇಹ ಮತ್ತು ಅದರ ರಕ್ಷಣೆಗೆ ಬೆಂಬಲ ಮುಂದುವರಿಯುತ್ತದೆ ಎಂದು ತುಂಬಿದ ಸಮಾವೇಶದಲ್ಲಿ ಹೇಳುವ ಮೂಲಕ ಈ ವಿಚಾರದಲ್ಲಿ ಅಮೆರಿಕದ ಯಹೂದ್ಯರಲ್ಲಿ ಉಂಟಾಗಿದ್ದ ಅನುಮಾನವನ್ನು ನಿವಾರಿಸಿದ್ದಾರೆ. ಆದರೆ ಪ್ಯಾಲೆಸ್ಟೇನ್ ಜನರಿಗೆ ಅವರ ಮಾತಿನಿಂದ ಭರವಸೆ ಮೂಡಿಲ್ಲ. ಇಸ್ರೇಲ್ ವಿಚಾರದಲ್ಲಿ ಕಮಲಾ ಹ್ಯಾರಿಸ್ ಕಟುವಾದ ಧೋರಣೆ ಅನುಸರಿಸುತ್ತಾರೆ ಎಂದು ಅಮೆರಿಕದಲ್ಲಿರುವ ಪ್ಯಾಲೆಸ್ಟೇನ್ ಜನರು ನಿರೀಕ್ಷಿಸಿದ್ದರು. ಆ ನಿರೀಕ್ಷೆ ಸುಳ್ಳಾಗಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ವಿಚಾರದಲ್ಲಿ ಬೈಡನ್ ಅವರ ನೀತಿಯೇ ಮುಂದವರಿಯಲಿದೆ. ಉಕ್ರೇನ್‌ಗೆ ಅಮೆರಿಕದ ಬೆಂಬಲ ಇರುತ್ತದೆ ಎಂದು ಕಮಲಾ ಪ್ರಕಟಿಸಿದ್ದಾರೆ. ಈ ಮೂರು ವಿಚಾರಗಳಲ್ಲಿ-ವಲಸೆ ನೀತಿ, ಗಾಜಾ ಆಕ್ರಮಣ ಮತ್ತು ಉಕ್ರೇನ್ ಮೇಲೆ ರಷ್ಯಾ ದಾಳಿ- ಟ್ರಂಪ್ ಅವರ ನೀತಿಗಳು ಸ್ವಲ್ಪ ಭಿನ್ನವಿವೆ. ತಾವು ಅಧಿಕಾರಕ್ಕೆ ಬಂದರೆ ಉಕ್ರೇನ್ ಮತ್ತು ಗಾಜಾದ ಮೇಲಿನ ಆಕ್ರಮಣವನ್ನು 24 ಗಂಟೆಗಳೊಳಗೆ ನಿಲ್ಲಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಅವರು ಇದನ್ನು ಹೇಗೆ ಮಾಡುತ್ತಾರೆ ಎಂಬುದು ತಿಳಿದಿಲ್ಲ. ಆದರೆ ಜನರು ಅವರ ಈ ಧೋರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾಕಷ್ಟು ಮತದಾರರು ಟ್ರಂಪ್ ಪರವಾಗಿ ಮತ ನೀಡಿದರೆ ಆಶ್ಚರ್ಯವಿಲ್ಲ.

ಇನ್ನು ಗರ್ಭಧಾರಣೆ ವಿಚಾರದಲ್ಲಿ ಟ್ರಂಪ್ ನೀತಿಗಳು ತೀವ್ರ ಟೀಕೆಗೆ ಒಳಗಾಗಿವೆ. ಗರ್ಭಪಾತ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ನೀಡುವುದಾಗಿ ಟ್ರಂಪ್ ಹೇಳುತ್ತಿದ್ದಾರೆ. ಆದರೆ ಗರ್ಭಧಾರಣೆ ಮತ್ತು ಗರ್ಭಪಾತದ ಅಧಿಕಾರ ಸರ್ಕಾರಕ್ಕೆ ಏಕಿರಬೇಕು? ಅದನ್ನು ಮಹಿಳೆಯರಿಗೇ ನೀಡುವುದಾಗಿ ಕಮಲಾ ಹ್ಯಾರಿಸ್ ಘೋಷಿಸಿದ್ದಾರೆ. ಅಧಿಕಾರಕ್ಕೆ ಬಂದ ನಂತರ ತಾವು ಮಾಡುವ ಮೊದಲ ಆದೇಶ ಗರ್ಭಪಾತ ಅಧಿಕಾರವನ್ನು ಆಯಾ ಮಹಿಳೆಗೆ ನೀಡುವುದಾಗಿದೆ ಎಂದು ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ಅಮೆರಿಕದಲ್ಲಿ ಪರ-ವಿರೋಧ ಸಾಕಷ್ಟು ಪ್ರಮಾಣದಲ್ಲಿದೆ. ಸಂಪ್ರದಾಯಸ್ಥರು ಗರ್ಭಪಾತದ ವಿರುದ್ಧ ಇದ್ದರೆ ಹೊಸ ಜನಾಂಗ ಅದರ ಪರವಾಗಿದೆ. ಇದೇನೇ ಇದ್ದರೂ ಕಮಲಾ ಹ್ಯಾರಿಸ್ ಅವರ ಈ ಪ್ರಗತಿಪರ ನೀತಿ ಎಷ್ಟರಮಟ್ಟಿಗೆ ಅವರಿಗೆ ಮತ ತಂದು ಕೊಡುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಅಮೆರಿಕದಲ್ಲಿ ಮಕ್ಕಳು ಬಂದೂಕು ಪಡೆದು ಇತರ ಮಕ್ಕಳನ್ನು ಕೊಂದ ಘಟನೆಗಳು ಅನೇಕ. ಇದನ್ನು ಮತ್ತು ಇಷ್ಟ ಬಂದಹಾಗೆ ಬಂದೂಕಿನಿಂದ ಜನರನ್ನು ಕೊಲ್ಲುವ ಹಿಂಸಾಪ್ರವೃತ್ತಿ ತಡೆಗೆ ಕಠಿಣವಾದ ನಿಯಮಗಳನ್ನು ಜಾರಿಗೆ ತರುವ ಭರವಸೆಯನ್ನು ಕಮಲಾ ಹ್ಯಾರಿಸ್ ನೀಡಿದ್ದಾರೆ. ಆದರೆ ಟ್ರಂಪ್ ಬಂದೂಕು ತಯಾರಕರ ಪರ ಇದ್ದಾರೆ. ಟ್ರಂಪ್ ಅವರು ಬಂದೂಕು ಲೈಸನ್ಸ್ ಕೊಡುವ ಹಳೆಯ ನಿಯಮಗಳನ್ನು ಬದಲಾಯಿಸುವ ಪ್ರಯತ್ನ ಮಾಡುವವರ ವಿರೋಧಿ.

ಸಮಾವೇಶದಲ್ಲಿ ಕಮಲಾ ಹ್ಯಾರಿಸ್ ಅವರು ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರ ಕೆಟ್ಟ ಗುಣಗಳನ್ನು ಎತ್ತಿ ಹೇಳಿ ಇಂಥವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದರೆ ಎಂತೆಂಥ ಅನಾಹುತ ಸಂಭವಿಸಬಹುದು ಎನ್ನುವುದನ್ನು ಜನರ ಮುಂದಿಟ್ಟರು. ಸ್ತ್ರೀಲೋಲ ಟ್ರಂಪ್‌ನಿಂದ ಅನ್ಯಾಯಕ್ಕೆ ಒಳಗಾದ ಮಹಿಳೆಯರು ಲೆಕ್ಕವಿಲ್ಲದಷ್ಟು. ಒಂದು ಪ್ರಕರಣದಲ್ಲಿ ಈಗಾಗಲೇ ಅವರು ಶಿಕ್ಷೆಗೆ ಗುರಿಯಾಗಿದ್ದಾರೆ. ವ್ಯಾಪಾರ ವಹಿವಾಟಿನಲ್ಲೂ ಮೋಸ, ದಗಾ ಈಗಾಗಲೇ ಬಹಿರಂಗವಾಗಿದೆ ಎಂದು ಹ್ಯಾರಿಸ್ ಹೇಳಿದರು. ನಾನು ಸ್ವಾತಂತ್ರ್ಯದ ಪರ ಮತ್ತು ಉತ್ತಮ ಭವಿಷ್ಯವನ್ನು ಬಯಸುವವಳು. ಆದರೆ ಟ್ರಂಪ್ ದೇಶವನ್ನು ಹಿಂದಕ್ಕೆ ಕರೆದೊಯ್ಯುತ್ತಾರೆ. ಜನರಿಗೆ ಬೇಕಿರುವುದು, ಸ್ವಾತಂತ್ರ್ಯ, ಗೌರವ, ಉತ್ತಮ ಭವಿಷ್ಯ ಎಂದು ಹ್ಯಾರಿಸ್ ಹೇಳಿದ್ದಾರೆ.

ಸಮಾವೇಶದಲ್ಲಿ ಬರಾಕ್ ಒಬಾಮಾ, ಮೈಕೆಲ್ ಒಬಾಮಾ, ಬಿಲ್ ಕ್ಲಿಂಟನ್, ಹಿಲರಿ ಕ್ಲಿಂಟನ್ ಮುಂತಾದ ಪ್ರಭಾವಿಗಳು ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಕಮಲಾ ಹ್ಯಾರಿಸ್ ಗೆದ್ದರೆ ಅಮೆರಿಕ ಇತಿಹಾಸದಲ್ಲಿ ಆ ಸ್ಥಾನಕ್ಕೇರಿದ ಮೊದಲ ಮಹಿಳೆಯಾಗುತ್ತಾರೆ. ಅಷ್ಟೇ ಅಲ್ಲ ಇದೇ ಮೊದಲ ಬಾರಿಗೆ ಕಪ್ಪು ಜನಾಂಗಕ್ಕೆ ಸೇರಿದ ಮತ್ತು ಭಾರತೀಯ ಮೂಲದ ಮಹಿಳೆಯೊಬ್ಬರು ಅಧ್ಯಕ್ಷರಾದಂತಾಗುತ್ತದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಕಮಲಾ ಹ್ಯಾರಿಸ್ ಅವರು ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಮೂರು ಪಾಯಿಂಟ್ ಮುಂದಿದ್ದಾರೆ. ಮುಂದೆ ಯಾವ ಬೆಳವಣಿಗೆಗಳಾಗುತ್ತವೆ ಎನ್ನುವುದನ್ನು ಕಾದು ನೋಡಬೇಕು. ಚುನಾವಣೆ ದಿನಾಂಕ ನವೆಂಬರ್ 5. ಪೈಪೋಟಿ ತೀವ್ರವಾಗಿದೆ ಎನ್ನುವುದಂತೂ ಸತ್ಯ.