Mysore
13
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಹುಲಿಗಳ ಸಂರಕ್ಷಣೆ; ಆದಿವಾಸಿಗಳ ಹಿತರಕ್ಷಣೆ ನಡುವೆ ಇರಲಿ ಸಮನ್ವಯ

ರಾಷ್ಟ್ರೀಯ ಪ್ರಾಣಿ ಹುಲಿಗಳ ಆವಾಸಕ್ಕೆ ಪೂರಕ ವಾತಾವರಣ ಹೊಂದಿರುವ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸ್ಸು ಮಾಡಿದೆ. ಇದು ಒಂದು ಕಡೆ ವನ್ಯಜೀವಿ ತಜ್ಞರು, ಪರಿಸರ ಪ್ರೇಮಿಗಳಲ್ಲಿ ಸಂತಸ ಮೂಡಿಸಿದರೆ, ಮತ್ತೊಂದೆಡೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಐದು ಹುಲಿಗಳ ಸಾವಿನ ಪ್ರಕರಣದ ಬಗ್ಗೆ ಸಮಿತಿ ತನಿಖೆ ನಡೆಸಿ ೫೫ ಪುಟಗಳ ವರದಿ ಸಿದ್ಧಪಡಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಪಶ್ಚಿಮ ಘಟ್ಟದಲ್ಲಿ ಪದೇ ಪದೇ ಸಂಭವಿಸುತ್ತಿರುವ ಇಂತಹ ಘಟನೆಗಳಿಂದಾಗಿ ಹುಲಿಗಳ
ಸಂರಕ್ಷಣೆ ಕುರಿತು ಗಂಭೀರ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಸಮಿತಿ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ವಿಚಾರ ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಈಗಾಗಲೇ ಬಿಳಿಗಿರಿರಂಗನಬೆಟ್ಟ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಿವೆ. ಮಲೆ ಮಹದೇಶ್ವರ ವನ್ಯಧಾಮವು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆಯಾದರೆ ೩ ಹುಲಿ ಸಂರಕ್ಷಿತಾರಣ್ಯಗಳಾಗಲಿವೆ. ಚಾಮರಾಜನಗರ ಜಿಲ್ಲೆಯಲ್ಲಿ ೯೦೬ ಚದರ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡು ಅಮೂಲ್ಯ ವನ್ಯ ಸಂಪತ್ತು ಹೊಂದಿರುವ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಯೋಜನೆ ಪ್ರದೇಶವಾಗಿ ಘೋಷಣೆ ಮಾಡಬೇಕೆಂಬ ಬೇಡಿಕೆಯು ೩ ವರ್ಷಗಳ ಹಿಂದೆಯೇ ಕೇಳಿ ಬಂದಿತ್ತು.

ಇದಕ್ಕೆ ಸ್ಥಳೀಯ ಬುಡಕಟ್ಟು ಸೋಲಿಗರು, ಬೇಡಗಂಪಣ ಜನರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ಅರಣ್ಯ ಇಲಾಖೆ ಮತ್ತು ಪರಿಸರ ಜೀವಿ ತಜ್ಞರು ಹುಲಿ ಯೋಜನೆ ಘೋಷಣೆ ಆಗಬೇಕೆಂದು ಒತ್ತಾಯಿಸಿದ್ದರು. ಈ ಪರ – ವಿರುದ್ಧ ಚರ್ಚೆಗಳಿಂದ ಗೊಂದಲ ಉಂಟಾಯಿತು. ಹಾಗಾಗಿ ಹುಲಿ ಯೋಜನೆ ಘೋಷಣೆ ಪ್ರಸ್ತಾಪವು ಮುಖ್ಯಮಂತ್ರಿ ಬಳಿ ಪರಿಶೀಲನೆಯಲ್ಲಿದೆ. ಪವಾಡ ಪುರುಷ ಮಹದೇಶ್ವರರು ನೆಲೆಸಿರುವ ೭೭ ಬೆಟ್ಟಗಳ ಪ್ರದೇಶವಾದ ಈ ಸಂರಕ್ಷಿತ ವನ್ಯಧಾಮದಲ್ಲಿ ೫೬ ಸೋಲಿಗರ ಪೋಡುಗಳಿದ್ದು, ೨,೫೦೦ ಕುಟುಂಬಗಳು ವಾಸವಾಗಿವೆ. ಇವರ ಜನಸಂಖ್ಯೆ ಸುಮಾರು ೧೫ ಸಾವಿರದಷ್ಟಿದೆ.

ಹುಲಿ ಯೋಜನೆ ಜಾರಿಗೊಂಡರೆ ಸಂಜೆ ೬ರಿಂದ ಬೆಳಗಿನ ೬ ಗಂಟೆ ತನಕ ವನ್ಯಧಾಮದೊಳಗೆ ವಾಹನಗಳ ಪ್ರವೇಶ ಬಂದ್ ಆಗಲಿದೆ. ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೆ ತೊಂದರೆಯಾಗಲಿದೆ. ವಾಹನಗಳ ಸಂಚಾರ ಮತ್ತು ಪಾದಯಾತ್ರೆಗೆ ಕಡಿವಾಣ ಬೀಳಲಿದೆ
ಎಂಬ ಆತಂಕ ವ್ಯಕ್ತವಾಗಿದೆ. ಈ ವನ್ಯಧಾಮದೊಳಗೆ ಸೋಲಿಗರು, ಬೇಡಗಂಪಣರು, ಇತರೆ ಸಮುದಾಯಗಳು ವಾಸಿಸುವ ೧೫೦ ಸಣ್ಣ ಪುಟ್ಟ ಗ್ರ್ರಾಮಗಳಿವೆ. ಹುಲಿ ಯೋಜನೆ ಜಾರಿಯಾದರೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ನಿರ್ಬಂಧ ಬೀಳಲಿದೆ. ಅಲ್ಲದೆ ನಮ್ಮನ್ನು ಒಕ್ಕಲೆಬ್ಬಿಸುವ ಸಾಧ್ಯತೆಯಿದೆ ಎಂದು ಕಳವಳಗೊಂಡಿದ್ದಾರೆ.

ಹುಲಿ ಯೋಜನೆ ಘೋಷಿಸುವ ಮೊದಲು ಸ್ಥಳೀಯ ಜನರೊಂದಿಗೆ ಚರ್ಚೆ ಆಗಬೇಕು. ಪ್ರತಿ ಗ್ರಾಮ ಸಭೆಯಲ್ಲೂ ನಿರ್ಣಯ ಆಗಬೇಕು. ವನ್ಯಜೀವಿ ಸಂರಕ್ಷಣಾ ಕಾಯ್ದೆ- ೧೯೭೨ಕ್ಕೆ ಆದ್ಯತೆ ನೀಡುತ್ತಾರೆಯೇ ಹೊರತು ಅರಣ್ಯ ಹಕ್ಕು ಕಾಯ್ದೆ-೨೦೦೬ ಕುರಿತು ಗಮನಹರಿಸುವುದಿಲ್ಲ. ನೆಲದ ಕಾನೂನುಗಳನ್ನು ಗೌರವಿಸುತ್ತೇವೆ. ಆದರೆ, ಸ್ಥಳೀಯರ ಹಕ್ಕುಗಳನ್ನು ದಮನಿಸುವ ಯಾವುದೇ ಕಾನೂನನ್ನು ವಿರೋಧಿಸುತ್ತೇವೆ. ಶತಮಾನಗಳಿಂದ ಆದಿವಾಸಿ ಜನರು ಕಾಡನ್ನು ರಕ್ಷಿಸುತ್ತಿದ್ದಾರೆ ಎಂಬುದನ್ನು ಸರ್ಕಾರ ಗಮನಿಸಬೇಕು ಎಂಬುದು ವನ್ಯಜೀವಿ ಧಾಮದೊಳಗೆ ಇರುವ ಗಿರಿಜನರ ಒತ್ತಾಯವಾಗಿದೆ.

ಇದನ್ನು ಓದಿ: ಸಹಕಾರ ಕ್ಷೇತ್ರ ಪ್ರಗತಿಯಾದರೆ ಆರ್ಥಿಕ ಪ್ರಗತಿಗೆ ಸಾಧ್ಯ: ಶಾಸಕ ಜಿಟಿಡಿ

ಈ ಹುಲಿ ಯೋಜನೆ ವಿರೋಧಿಸಿ ಗಿರಿಜನರು ೨ ಹೋರಾಟಗಳನ್ನು ಮಾಡಿದ್ದಾರೆ. ವನ್ಯಧಾಮದ ವ್ಯಾಪ್ತಿಯಲ್ಲಿ ೫೬ ಆದಿವಾಸಿಗಳ ಪೋಡುಗಳಿದ್ದು, ೧೫ ಸಾವಿರ ಜನಸಂಖ್ಯೆಯಿದೆ. ಹುಲಿ ಯೋಜನೆ ಘೋಷಿಸಿದರೆ ಸ್ಥಳೀಯರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಶುರುವಾಗಲಿದೆ. ಇಡೀ ದೇಶದಲ್ಲಿ ೫೮ ಹುಲಿ ಸಂರಕ್ಷಿತಾರಣ್ಯಗಳಿವೆ. ಇಲ್ಲಿರುವ ೬೫ ಸಾವಿರ ಜನರನ್ನು ಹೊರ ಹಾಕಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆದೇಶ ಮಾಡಿದೆ. ಹುಲಿ
ಯೋಜನೆ ಜಾರಿಯಾದರೆ ನಮ್ಮನ್ನು ಹೊರಗೆ ಹಾಕುತ್ತಾರೆ. ಓಡಾಟಕ್ಕೆ ನಿರ್ಬಂಧ, ಜಾನುವಾರುಗಳನ್ನು ಮೇಯಿಸಲು ಅವಕಾಶ ಇರುವುದಿಲ್ಲ.

ಹಾಗಾಗಿ ಹುಲಿ ಯೋಜನೆಗೆ ಆದಿವಾಸಿಗಳು ವಿರೋಧ ಮಾಡುತ್ತಿದ್ದಾರೆ. ಹುಲಿ ಯೋಜನೆ ಇದೊಂದು ಕೇಂದ್ರ ಸರ್ಕಾರದ ಕಾರ್ಯಕ್ರಮವಷ್ಟೇ. ರಾಷ್ಟ್ರೀಯ ಪ್ರಾಣಿ ಹುಲಿ ಸಂರಕ್ಷಣೆಗಾಗಿ ೧೯೭೩ ರಲ್ಲಿ ಆರಂಭವಾದ ಯೋಜನೆ ನಾಗರಿಕತೆ ಬೆಳೆದಂತೆ ಕಾಡು ಕಣ್ಮರೆ ಆಗುತ್ತಿರುವ ಸಂದರ್ಭದಲ್ಲಿ ಅಳಿವಿನ ಅಂಚಿನಲ್ಲಿರುವ ಹುಲಿಗಳನ್ನು ಸಂರಕ್ಷಿಸುವುದಾಗಿದೆ. ಈಗ ಅರಣ್ಯ ಸಂರಕ್ಷಣೆಗೆ ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಅನುದಾನಕ್ಕಿಂತಲೂ ಸುಮಾರು ೧೦-೧೫ ಕೋಟಿ ರೂ. ಹೆಚ್ಚು ಅನುದಾನ ಸಿಗಲಿದೆ.

ಇದರಿಂದ ಅರಣ್ಯ ಸಂರಕ್ಷಣೆ ಜೊತೆಗೆ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ವಹಿಸಬಹುದು. ಅಲ್ಲಿನ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಾಗಲಿದೆ. ಪ್ರಾಣಿಗಳ ಕಳ್ಳ ಬೇಟೆಯನ್ನು ಸಮರ್ಪಕವಾಗಿ ತಡೆಯಬಹುದು ಎಂಬುದು ವನ್ಯಜೀವಿ ತಜ್ಞರು,
ಅರಣ್ಯಾಧಿಕಾರಿಗಳ ಸಮರ್ಥನೆಯಾಗಿದೆ. ಆದರೆ, ಸರ್ಕಾರಗಳು ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡುವುದು ಅಗತ್ಯ. ಹುಲಿಗಳ ಸಂತತಿಯ ಸಂರಕ್ಷಣೆಯಷ್ಟೇ ಆದಿವಾಸಿಗಳ ಹಿತರಕ್ಷಣೆಯೂ ಮುಖ್ಯ ಎಂಬುದನ್ನು ಮನಗಾಣಬೇಕು. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಹಾಗೂ ಮಾನವೀಯ ನೆಲೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಆದ್ಯತೆ ನೀಡಬೇಕಾಗುತ್ತದೆ.

” ಈ ಹುಲಿ ಯೋಜನೆ ವಿರೋಧಿಸಿ ಗಿರಿಜನರು ೨ ಹೋರಾಟಗಳನ್ನು ಮಾಡಿದ್ದಾರೆ. ವನ್ಯಧಾಮದ ವ್ಯಾಪ್ತಿಯಲ್ಲಿ ೫೬ ಆದಿವಾಸಿಗಳ ಪೋಡುಗಳಿದ್ದು, ೧೫ ಸಾವಿರ ಜನಸಂಖ್ಯೆಯಿದೆ. ಹುಲಿ ಯೋಜನೆ ಘೋಷಿಸಿದರೆ ಸ್ಥಳೀಯರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಶುರುವಾಗಲಿದೆ. ಇಡೀ ದೇಶದಲ್ಲಿ ೫೮ ಹುಲಿ ಸಂರಕ್ಷಿತಾರಣ್ಯಗಳಿವೆ. ಇಲ್ಲಿರುವ ೬೫ ಸಾವಿರ ಜನರನ್ನು ಹೊರ ಹಾಕಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆದೇಶ ಮಾಡಿದೆ. “

Tags:
error: Content is protected !!