ಇದು ಮೇಘ ಸಂದೇಶವಲ್ಲ, ನಾಸಾದ ಬಾಹ್ಯಾಕಾಶ ಸಂದೇಶ!

ಬಾಹ್ಯಾಕಾಶ ಜೀವಿಗಳು ಹುಡುಕಾಟದ ಪ್ರಯತ್ನದಲ್ಲಿ ನಾಸಾ ವಾಯೆರ್ಜ ನೌಕೆಯಲ್ಲಿ ಕಳುಹಿಸಿದ್ದ ದಿ ಗೋಲ್ಡನ್ ರೆಕಾರ್ಡ್ 

ಕಾರ್ತಿಕ್ ಕೃಷ್ಣ

ಆಕಾಶಗಂಗೆ ನಕ್ಷತ್ರಪುಂಜದಂತೆ, ಇಡೀ ಬ್ರಹ್ಮಾಂಡದಲ್ಲಿ ಸುಮಾರು ೧೨,೫೦೦ ಕೋಟಿ ನಕ್ಷತ್ರ ಪುಂಜಗಳು ಅಸ್ತಿತ್ವದಲ್ಲಿವೆ ಎಂದು ಹಬಲ್ ದೂರದರ್ಶಕ ಬಹಿರಂಗ ಪಡಿಸಿತ್ತು. ಇತ್ತೀಚಿಗೆ ನಭಕ್ಕೆ ಹಾರಿದ ಜೇಮ್ಸ್ ವೆಬ್ ದೂರದರ್ಶಕ ಇನ್ನಷ್ಟು ನಕ್ಷತ್ರಪುಂಜಗಳನ್ನು ಪತ್ತೆ ಹಚ್ಚಿದ್ದು, ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಯಿದೆ. ಒಂದೊಂದು ನಕ್ಷತ್ರಪುಂಜದಲ್ಲೂ ಕೋಟ್ಯಂತರ ನಕ್ಷತ್ರಗಳು. ಅವುಗಳ ಅಧೀನದಲ್ಲಿರುವ ಮತ್ತಷ್ಟು ಗ್ರಹಗಳು. ಅದೆಷ್ಟೋ ನಕ್ಷತ್ರಗಳು ಹುಟ್ಟುತ್ತವೆ, ಇನ್ನೆಷ್ಟೋ ನಕ್ಷತ್ರಗಳು ಸಾಯುತ್ತವೆ. ಡಿವಿಜಿ ಅವರ ‘ಅಳಿವಿಲ್ಲ ವಿಶ್ವಕ್ಕೆ ಮಂಕುತಿಮ್ಮ’ ಎಂಬ ಕಗ್ಗದಂತೆ, ಅಳಿದು ಹುಟ್ಟುವುದು ಈ ಬ್ರಹ್ಮಾಂಡದಲ್ಲಿ ಜರಗುವ ನಿರಂತರ ಪ್ರಕ್ರಿಯೆ. ಇದೆಲ್ಲಾ ನೋಡುತ್ತಿದ್ದರೆ ವಿಶ್ವದ ಮುಂದೆ ನಾವೆಷ್ಟು ಕುಬ್ಜರು ಅನಿಸುತ್ತದೆ ಅಲ್ಲವೇ. ವಿಶ್ವ ಇಷ್ಟೊಂದು ಅಗಾಧವಾಗಿರುವಾಗ ಜೀವಿಗಳು ಬರೀ ಭೂಮಿಯ ಮೇಲೆ ಮಾತ್ರ ಅಸ್ತಿತ್ವದಲ್ಲಿದೆಯೆ? ಅಥವಾ ಬೇರೆಲ್ಲೋ ನಮ್ಮ ಅರಿವಿಗೆ ನಿಲುಕದ ಸಂಸ್ಕೃತಿಯೊಂದು ಬೇರೆಬಿಟ್ಟಿದೆಯೆ? ಇದ್ದರೆ ಅದು ಹೇಗಿರಬಹುದು? ಅವರು ನಮಗಿಂತ ಮುಂದುವರೆದಿದ್ದಾರೆಯೇ ಅಥವಾ ಇನ್ನೂ ಆದಿಮಾನವರ ಬುದ್ಧಿಮತ್ತೆ ಇರುವಂತವರೆ? ಹೀಗೆ ಹಲವು ಪ್ರಶ್ನೆಗಳು ನಿಗೂಢವಾಗಿ ಮನುಷ್ಯನ ಕಾಡುತ್ತಲೇ ಇದೆ.

ಬ್ರಹ್ಮಾಂಡದಲ್ಲಿ ಕೋಟ್ಯಾಂತರ ನಕ್ಷತ್ರಗಳಿರುವಾಗ, ಬೇರೆ ಗ್ರಹದಲ್ಲಿನ ಜೀವ ಸಾಧ್ಯತೆಯನ್ನು ತಳ್ಳಿ ಹಾಕುವುದಾದರೂ ಹೇಗೆ? ಸಂಪರ್ಕಕ್ಕೆ ಸಿಗದೆ, ಸದಾ ಕಿಟಕಿ ಬಾಗಿಲು ಮುಚ್ಚಿ ಜೀವಿಸುವ ನೆರೆಮನೆಯವರ ಹಾಗೆ, ಅವರೂ ತಮ್ಮ ಪಾಡಿಗೆ ಇದ್ದಿರಬಹುದಲ್ಲವೇ?! ಭೂಮ್ಯಾತೀತ ಜೀವಿಗಳ ಇರುವಿಕೆಯನ್ನು ನಿರೂಪಿಸಲು ಆಗದೆ ಇದ್ದರೂ, ಅದು ಸತ್ಯಕ್ಕೆ ದೂರ ಎನ್ನುವುದು ಕಷ್ಟಸಾಧ್ಯ. ನೀವು ಬಾಹ್ಯಾಕಾಶ ಜೀವಿಗಳ ವಾಹನಗಳಾದ ಹಾರುವ ತಟ್ಟೆಗಳು ಅಥವಾ ಖಿಊ ಗಳ ಬಗ್ಗೆ ಓದಿರಬಹುದು. ೫೦ರ ದಶಕದಲ್ಲಿ ವ್ಯಾಪಕವಾಗಿದ್ದ ಇವುಗಳ ಸುದ್ದಿಗಳು ಸಂಚಲನವನ್ನೇ ಸೃಷ್ಟಿಸಿದ್ದವು. ಅಸಾಧ್ಯ ವೇಗದಲ್ಲಿ ಸಂಚರಿಸಿ, ಕೆಲವೊಬ್ಬರಿಗೆ ಕಾಣಿಸಿ ಮಾಯವಾಗುತ್ತಿದ್ದ ಇವುಗಳ ಬಗ್ಗೆ ಅಧ್ಯಯನ ಮಾಡಲು Project Blue Book ಎಂಬ ಯೋಜನೆಯನ್ನು ಹಾಕಿದ್ದರಂತೆ. ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುತ್ತಿದ್ದ UFO ವಿದ್ಯಮಾನಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ, ಅದರ ಸತ್ಯಾಸತ್ಯತೆಯನ್ನು ಅರಿಯುವುದೇ ಇದರ ಉದ್ದೇಶ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಫ್ಲೈಯಿಂಗ್ ಸಾಸರ್ಸ್ ಪುಸ್ತಕ ಸರಣಿಯಲ್ಲಿ ನೀಡಿದ್ದಾರೆ. ಆಸಕ್ತರು ಓದಿಕೊಳ್ಳಬಹುದು.

ಭೂಮ್ಯಾತೀತ ಜೀವಿಗಳ ಜೊತೆಗೆ ಸಂಪರ್ಕ ಸಾಧಿಸುವುದಕ್ಕೆ ಹಲವಾರು ತಂತ್ರಗಳನ್ನು ಮಾನವ ಅನುಸರಿಸುತ್ತಿದ್ದಾನೆ. ದಿಗಂತದ ದಶ ದಿಕ್ಕುಗಳಿಗೂ ರೇಡಿಯೋ ತರಂಗಗಳನ್ನು ಪಸರಿಸಿ, ಉತ್ತರಕ್ಕಾಗಿ ಕಾಯುತ್ತಲೇ ಇದ್ದಾನೆ. ಅದಕ್ಕೆ ಪ್ರತ್ಯುತ್ತರ ಇನ್ನೂ ಸಿಗದಿದ್ದರೂ, ಛಲದಂಕ ಮಲ್ಲನಂತೆ ಪ್ರಯತ್ನ ಪಡುತ್ತಲೇ ಇರುವ ಮನುಜನ ಕೂತೂಹಲ ನಿಜಕ್ಕೂ ವರ್ಣನಾತೀತ!

ಈ ಪ್ರಯತ್ನಕ್ಕೆ ಕಳಶಪ್ರಾಯವಾದುದೆಂದೇ ಹೇಳಬಹುದಾದ ವಿಧಾನವನ್ನು ನಾಸಾ ಸಂಸ್ಥೆ ತನ್ನ ವಾಯೇಜರ್ ಯಾನದಲ್ಲಿ ಅನುಸರಿಸಿತ್ತು. ಅದರ ಬಗ್ಗೆ ಕೊಂಚ ತಿಳಿಯೋಣ ಬನ್ನಿ. ೧೯೭೭ರಲ್ಲಿ ಸೂರ್ಯಗೋಳದ ಆಚೆಗಿನ ಸೌರವ್ಯೆಹ ಮತ್ತು ಅಂತರ ತಾರಾ ಬಾಹ್ಯಾಕಾಶವನ್ನು ಅಧ್ಯಯನ ಮಾಡಲು ನಾಸಾ ಎರಡು ತನಿಖಾ ಉಪಗ್ರಹಗಳನ್ನು ಉಡಾಯಿಸಿತ್ತು . ಅದೇ ವಾಯೇಜರ್ ೧ ಹಾಗು ೨. ಇದರ ಕೆಲಸ ಬಾಹ್ಯಾಕಾಶದಲ್ಲಿ ತೇಲಾಡುತ್ತಾ, ಸಿಕ್ಕ ಮಾಹಿತಿಗಳನ್ನು ರವಾನಿಸುವುದು. ಸುಮಾರು ೪೫ ವರುಷಗಳಿಂದ ಈ ಕಾರ್ಯದಲ್ಲಿ ನಿರತವಾಗಿರುವ ವಾಯೇಜರ್ ಸದ್ಯಕ್ಕೆ ಭೂಮಿಯಿಂದ ಅತೀ ದೂರದಲ್ಲಿರುವ ಮಾನವ ನಿರ್ಮಿತ ವಸ್ತು. ಇದರ ಕರಾರುವಾಕ್ ವೇಗ ಹಾಗು ಭೂಮಿಯಿಂದ ಇರುವ ಅಂತರವನ್ನು ನಾಸಾ ತನ್ನ ಮಿಂದಾಣದಲ್ಲಿ ರಿಯಲ್ ಟೈಮ್ ನಲ್ಲಿ ನವೀಕರಿಸುತ್ತಿರುತ್ತದೆ. ಇದನ್ನು ಬರೆಯುವ ವೇಳೆಗೆ ವಾಯೇಜರ್ ೧ ಭೂಮಿಯಿಂದ ೧೪,೭೧೨,೭೦೮,೧೯೦ ಮೈಲಿ (೧೪.೭೧ ಬಿಲಿಯನ್ ಮೈಲಿ) ದೂರದಲ್ಲಿತ್ತು! ಇಂತಿಪ್ಪ ವಾಯೇಜರ್ ಬಾನಬಂಡಿಯನ್ನು ವಿಶೇಷವಾಗಿಸುವುದು ಅದರ ಮೇಲೆ ಚಿರಸ್ಥಾಯಿಯಾಗಿರುವ ಹೊಂಬಣ್ಣದ ಚಕ್ರಾಕಾರದ ಒಂದು ತಟ್ಟೆ. ನೋಡಲು ನೊಬೆಲ್ ಪಾರಿತೋಶಕದ ಪದಕದಂತಿರುವ ಈ ತಟ್ಟೆ ಸಾಮಾನ್ಯವಾದುದಲ್ಲ. ಇದು ಭೂಮಿಯ ರಾಯಭಾರಿ ಎಂದರೂ ತಪ್ಪಾಗಲಾರದು! ಯಾಕೆಂದರೆ ಗ್ರಾಮಫೋನಿನ ಉಲಿತಟ್ಟೆಯಂತಿರುವ ಈ ಡಿಸ್ಕಿನಲ್ಲಿ ಭೂಮಿಯನ್ನು ಪ್ರತಿನಿಧಿಸುವ ಮಾಹಿತಿಗಳಿವೆ. ಅದರ ಹೆಸರು The Golden Record!

ಆ ಮಾಹಿತಿಗಳಾದರೂ ಯಾವುದು? ಕೋಟ್ಯಂತರ ಮೈಲಿ ದೂರ ಸಂಚರಿಸುವ ಬಾನಬಂಡಿಗಳಲ್ಲಿ ಆ ಮಾಹಿತಿಗಳನ್ನು ಕಳುಹಿಸುವ ಅವಶ್ಯಕತೆಯೇನು? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಇದೆಲ್ಲಾ ಮಾನವನ never ending ಕುತೂಹಲದ ಸರಕುಗಳು! ಮೊದಲೇ ಹೇಳಿದ ಹಾಗೆ, ಈ ಅಗಾಧ ಬ್ರಹ್ಮಾಂಡದಲ್ಲಿ ಜೀವಿಗಳಿರುವುದು ಭೂಮಿಯಲ್ಲಿ ಮಾತ್ರ ಎಂದು ನಿರ್ಧರಿಸಿವುದು ಸರಿಯಲ್ಲ. ನಾವು ಬೇರೆಡೆ ಹುಡುಕುತ್ತಿರುವಂತೆ ಅವರೂ ಕೂಡ ನಮ್ಮನ್ನು ಹುಡುಕುತ್ತಿರಬಹುದಲ್ಲವೇ? ಎಲ್ಲಾದರೂ ಈ ಸಾಧ್ಯತೆಯಿದ್ದರೆ, ಅವರಿಗೆ ಸಹಾಯವಾಗಲೆಂದೇ ನಾಸಾ ತನ್ನ ವಾಯೇಜರ್ ಮೂಲಕ ಗೋಲ್ಡನ್ ರೆಕಾರ್ಡ್‌ಅನ್ನ್ನು ಕಳುಹಿಸಿಕೊಟ್ಟಿರುವುದು. ಕೋಟ್ಯಂತರ ಮೈಲಿ ದೂರ ಪಯಣಿಸುವ ವಾಯೇಜರನ್ನು ಅನ್ಯಲೋಕ ಜೀವಿಗಳು ಸಂಧಿಸುವ ಸಾಧ್ಯತೆ ಎಷ್ಟಿದೆಯೋ ತಿಳಿದಿಲ್ಲ. ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಮಾನವರ ಆಶಾಭಾವನೆಯನ್ನು. ಕೊನೆಯಿಲ್ಲದ ಬಾವಿಯಲ್ಲಿ ಹಗ್ಗವೊಂದನ್ನು ಇಳಿಬಿಟ್ಟು, ಯಾರಾದರೂ ಜಗ್ಗುವರೋ ಎಂದು ಕಾದುನೋಡುವ ಪ್ರಯತ್ನವಿದು!

ಯುರೇನಿಯಂ-೨೩೮ ರಿಂದ ಎಲೆಕ್ಟ್ರೋಪ್ಲೇಟ್ ಮಾಡಲಾದ ಗೋಲ್ಡನ್ ರೆಕಾರ್ಡ್‌ನಲ್ಲಿ ೧೧೫ ಚಿತ್ರಗಳಿವೆಯಂತೆ. ಅವುಗಳು ಒಲಿಂಪಿಕ್ ಓಟಗಾರರು, ಪುರಷ ಹಾಗು ಗರ್ಭಿಣಿ ಮಹಿಳೆ, ಹಾಲುಣಿಸುವ ತಾಯಿ, ನ್ಯೂಟನ್‌ನ ಪುಸ್ತಕದ ಒಂದು ಪುಟ, ರೇಡಿಯೋ ದೂರದರ್ಶಕ, ತಾಜ್ ಮಹಲ್, ಸಿಡ್ನಿ ಒಪೇರಾ ಹೌಸ್, ಗೋಲ್ಡನ್ ಗೇಟ್ ಬ್ರಿಡ್ಜ್ ಸೇರಿದಂತೆ ಮನುಷ್ಯರು ತಿನ್ನುವ, ಕುಡಿಯುವ ಭಂಗಿಯ ಫೋಟೋಗಳನ್ನು ಒಳಗೊಂಡಿವೆ. ಗೋಲ್ಡನ್ ರೆಕಾರ್ಡ್ ನಲ್ಲಿ ಮೊಜಾರ್ಟ್, ಬೀಥೋವನ್, ಕೇಸರ್‌ಬಾಯಿ ಕೇರ್ಕರ್ ಹಾಗು ಯೋಹಾನ್ ಸೆಬಾಸ್ಟಿಯನ್ ಬಾಕ್ ಅವರ ೯೦ ನಿಮಿಷದ ಸಂಗೀತವಿದೆಯಂತೆ. ಇದರೊಂದಿಗೆ ಗುಡುಗು, ತಿಮಿಂಗಿಲದ ಕೂಗು, ಮೆದುಳಿನ ಅಲೆಗಳು ಹಾಗು ಸಿಹಿಮುತ್ತಿನ ಶಬ್ದಗಳನ್ನು ಒಳಗೊಂಡಿರುವ ೧೨ ನಿಮಿಷದ ದನಿಸಂಕಲನವಿದೆ. ೫೫ ಭಾಷೆಗಳಲ್ಲಿರುವ ಶುಭಾಶಯಗಳು ಗೋಲ್ಡನ್ ರೆಕಾರ್ಡ್ ನ ವಿಶೇಷತೆ.

ಇದರಲ್ಲಿ ಕನ್ನಡವೂ ಇದೆಯೆಂಬುದು ನಾವು ಹೆಮ್ಮೆಪಡಬೇಕಾದ ವಿಚಾರ. ‘ನಮಸ್ತೆ, ಕನ್ನಡಿಗರ ಪರವಾಗಿ ಶುಭಾಶಯಗಳು’ ಎಂಬ ಸಂದೇಶವನ್ನು ಕೇಳುವುದೇ ಒಂದು ರೋಮಾಂಚನ! ನಾಸಾದ ಮಿಂದಾಣದಲ್ಲಿಈ ಸಂದೇಶವನ್ನುಕೇಳಬಹುದು.

ಮಾನವನ ಈ ಪ್ರಯತ್ನ ಸಫಲವಾಗುವುದೋ ಇಲ್ಲವೋ ತಿಳಿದಿಲ್ಲ. ೨೦೨೫ರ ವೇಳೆಗೆ ವಾಯೇಜರ್ ನೌಕೆಯ ವಿದ್ಯುಚ್ಛಕ್ತಿ ಪೂರೈಕೆ ಸಂಪೂರ್ಣವಾಗಿ ನಿಲ್ಲಲಿದ್ದು, ಯೋಜನೆ ಕೊನೆಗೊಳ್ಳಲಿದೆ. ಅದಕ್ಕೂ ಮೊದಲು ಎಲ್ಲಿಯೋ ಇರುವ ಬಾಹ್ಯಾಕಾಶದ ಜೀವಿಗಳ ಗಮನ ವಾಯೇಜರ್‌ನ ಮೇಲೆ ಬಿದ್ದು, ಅವುಗಳು ಅದರಲ್ಲಿರುವ ಸಂದೇಶವನ್ನು ವಿಸಂಕೇತಿಸಲು ಶಕ್ತರಾಗಿದ್ದರೆ, ಮಾನವನಿಗೆ ತನ್ನ ನೆರೆಹೊರೆಯ ಸ್ನೇಹಿತನ ಪರಿಚಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ವೇಳೆ, ಅವರದ್ದು ಅಷ್ಟೊಂದು ಮುಂದುವರೆಯದೆ ಇರುವ ಸಂಸ್ಕೃತಿಯಾಗಿದ್ದು ಸಂದೇಶವನ್ನು ವಿಸಂಕೇತಿಸಲು ವಿಫಲವಾದರೆ, ಮಾನವ ತನ್ನ ಶ್ರಮಕ್ಕೆ ತಕ್ಕ ಫಲವನ್ನು ಪಡೆಯಲು ಇನ್ನಷ್ಟು ಕಾಲ ಕಾಯಬೇಕಾಗಬಹುದು!

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ