Mysore
30
overcast clouds

Social Media

ಬುಧವಾರ, 17 ಜೂನ್ 2026
Light
Dark

ಕೆಫೆ ‘ರೂಫ್ ಟಾಪ್’ಗೆ ಅನುಮತಿಯೇ ಇರಲಿಲ್ಲ!

ಎಚ್.ಎಸ್.ದಿನೇಶ್‌ಕುಮಾರ್

ಲಿಕ್ಕರ್ ಗ್ಯಾರೇಜ್, ಫಾಕ್ಸ್ ಡೆನ್‌ಗೆ ಮಾತ್ರ ಅನುಮತಿ; ನೋಟಿಸ್ ಜಾರಿ ಮಾಡಿ ಸುಮ್ಮನಾಗಿದ್ದ ಅಧಿಕಾರಿಗಳು?; ಅಬಕಾರಿ ಡಿಸಿ ಅಮಾನತ್ತಿಗೆ ಸಚಿವ ಯತೀಂದ್ರ ಶಿಫಾರಸು

ಮೈಸೂರು: ಇಬ್ಬರು ಕೆಲಸಗಾರರ ಜೀವಂತ ದಹನಕ್ಕೆ ಕಾರಣವಾದ ‘ಮಾಸಾಯಿ ಮಾರಾ’ ಕೆಫೆಗೆ ರಹದಾರಿಯೇ ಪಡೆದಿರಲಿಲ್ಲ ಎಂಬುದು ಬೆಚ್ಚಿಬೀಳಿಸುವ ಸತ್ಯವಾಗಿದೆ. ಈ ಘಟನೆಯಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ, ನಗರದಲ್ಲಿ ಇನ್ನಷ್ಟು ಇಂತಹ ದುರಂತಗಳು ಸಂಭವಿಸಲೂಬಹುದು.

ನಗರದ ದಟ್ಟಗಳ್ಳಿ ೩ನೇ ಹಂತದ ನೇತಾಜಿ ವೃತ್ತದ ಬಳಿ ಇರುವ ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್ ರೆಸ್ಟೋ ಪಬ್‌ನ ಮೊದಲನೇ ಅಂತಸ್ತಿನಲ್ಲಿದ್ದ ಮಾಸಾಯಿ ಮಾರಾ ಕೆಫೆಯ ರೂಫ್ ಟಾಪ್‌ನಲ್ಲಿ ಸೋಮವಾರ ಬೆಂಕಿ ಅವಘಡ ನಡೆದಿತ್ತು.

ಇಲ್ಲಿನ ಪಬ್‌ಗೆ ಪರವಾನಗಿ ಇದೆ. ಆದರೆ ಕೆಫೆಗೆ ಅನುಮತಿ ಇರಲಿಲ್ಲ. ಇನ್ನು ರೂಫ್ ಟಾಪ್‌ನಲ್ಲಿ ತಿಂಡಿ – ತಿನಿಸು, ಮದ್ಯ ಸರಬರಾಜಿಗೆ ಯಾವುದೇ ಅನುಮತಿ ಇರಲಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಅಗ್ನಿ ದುರಂತಕ್ಕೀಡಾದ ಕೆಫೆ ಕೂಡ ನಿಯಮದ ಪ್ರಕಾರ ನಡೆಯುತ್ತಿರಲಿಲ್ಲ ಎಂಬುದನ್ನು ಸ್ವತಃ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಮಾಧ್ಯಮಗಳ ಮುಂದೆ ಹೇಳಿರುವುದು ವಾಸ್ತವಕ್ಕೆ ಕನ್ನಡಿ ಹಿಡಿದಿದೆ.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಇಬ್ಬರು ಸಜೀವ ದಹನ ಗೊಂಡ ಪ್ರಕರಣ ನಡೆದ ಕಟ್ಟಡದಲ್ಲಿ ಪರವಾನಗಿ ಇಲ್ಲದೆ ಕೆಫೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಯಲ್ಲಿ ಅಬಕಾರಿ ಜಿಲ್ಲಾಧಿಕಾರಿಯನ್ನು ಅಮಾನತ್ತುಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಡಿಸಿಗೆ ಸೂಚಿಸಿದರು.

ಪರವಾನಗಿ ಇಲ್ಲದೆ ಕೆಫೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದರಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಅನಾಹುತಕ್ಕೆ ಯಾರು ಹೊಣೆ?: 

ನಮ್ಮ ಮಕ್ಕಳು ಮೈಸೂರಿನಲ್ಲಿ ದುಡಿಯುತ್ತಿದ್ದಾರೆ. ಬಹುಶಃ ಕೆಲವೇ ತಿಂಗಳುಗಳು ಅಥವಾ ವರ್ಷಗಳಲ್ಲಿನಮ್ಮ ಬದುಕು ಹಸನಾಗಬಹುದು ಎಂಬುದಾಗಿ ಪೋಷಕರು ಕಾಣುತ್ತಿದ್ದ ಕನಸುಗಳಿಗೆ ಯಾರೋ ಮಾಡಿದ ತಪ್ಪಿನಿಂದ ಕೊಳ್ಳಿ ಬಿದ್ದಿದೆ. ಹೌದು. ಮೈಸೂರಿನ ಈ ಕೆಫೆಯಲ್ಲಿ ಆದ ಶಾರ್ಟ್ ಸರ್ಕ್ಯೂಟ್ ಆ ಪೋಷಕರ ಜೀವನವನ್ನೂ ಸುಟ್ಟು ಹಾಕಿರಬಹುದು. ಇದಕ್ಕೆಲ್ಲ ಯಾರನ್ನು ಹೊಣೆ ಮಾಡಬೇಕು? ಯಾವುದೇ ಬಾರ್ ಅಥವಾ ರೆಸ್ಟೋರೆಂಟ್ ತೆರೆಯಬೇಕಾದಲ್ಲಿ ಅಬಕಾರಿ ಇಲಾಖೆ ಹಾಗೂ ನಗರಪಾಲಿಕೆಯಿಂದ ರಹದಾರಿ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ.

ಅಬಕಾರಿ ಇಲಾಖೆಯ ರಹದಾರಿ ಇಲ್ಲದೆ ಮದ್ಯ ಸರಬರಾಜು ಮಾಡುವುದು, ನಗರಪಾಲಿಕೆ ವಲಯ ಕಚೇರಿಗಳ ಅನುಮತಿ ಇಲ್ಲದೆ ಹೋಟೆಲ್ ಅಥವಾ ರೆಸ್ಟೋರೆಂಟ್ ತೆರೆಯುವುದು ನಿಯಮಬಾಹಿರ ಎಂಬುದು ಸರ್ವವೇದ್ಯ ಸಂಗತಿ.

ಆದರೂ ನಗರದಾದ್ಯಂತ ಹಲವು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಯಾವುದೇ ಅನುಮತಿ ಪಡೆಯದೆ ರಾಜಾರೋಷವಾಗಿ ವ್ಯವಹಾರ ನಡೆಸುತ್ತಿವೆ. ಎಂಆರ್‌ಪಿ ಮದ್ಯ ಮಾರಾಟಕ್ಕೆ (ಸಿಎಲ್೨) ಅನುಮತಿ ಪಡೆದು ಅಲ್ಲಿ ಸಣ್ಣ ಜಾಗ ಮಾಡಿಕೊಂಡು ಮದ್ಯ ಸರಬರಾಜು ಮಾಡುವುದು ಎಗ್ಗಿಲ್ಲದೆ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತ್ರ ಜಾಣ ಕುರುಡು. ಅಮಾಯಕರ ಜೀವಕ್ಕಿಂತ ಅಧಿಕಾರಿಗಳಿಗೆ ಲಂಚದ ಹಣವೇ ಮುಖ್ಯವಾಗಿದೆ ಎಂದರೆ ತಪ್ಪಾಗುವುದಿಲ್ಲ.

ಇನ್ನು ರೂಫ್ ಟಾಪ್‌ನಲ್ಲಿ ನಡೆಸುತ್ತಿದ್ದ ರೆಸ್ಟೋರೆಂಟ್‌ಗೆ ನಗರಪಾಲಿಕೆಯಿಂದ ಯಾವುದೇ ರಹದಾರಿ ಪಡೆದಿರಲಿಲ್ಲ. ಅಲ್ಲಿ ಸಂಜೆಯವರೆಗೆ ರೆಸ್ಟೋರೆಂಟ್ ಚಟುವಟಿಕೆ ನಡೆದರೆ, ಕತ್ತಲಾಗುತ್ತಿದ್ದಂತೆ ಗ್ರಾಹಕರಿಗೆ ಮದ್ಯ ಸರಬರಾಜು ಮಾಡಲಾಗುತ್ತಿತ್ತು ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.

ಈ ವಿಚಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲವೆಂದೇನಲ್ಲ. ಎಲ್ಲೇ ಅಕ್ರಮವಾಗಿ ಮದ್ಯ ಮಾರಾಟ ಅಥವಾ ಸರಬರಾಜು ನಡೆದರೂ, ಕೂಡಲೇ ಇಲಾಖೆ ಸಿಬ್ಬಂದಿ ಅಲ್ಲಿ ಥಟ್ಟನೆ ಪ್ರತ್ಯಕ್ಷರಾಗುತ್ತಾರಂತೆ. ಇಲ್ಲಿಯೂ ಅದೇ ಆಗಿದೆ. ರೆಸ್ಟೋರೆಂಟ್‌ಗೆ ಬಂದ ಅಧಿಕಾರಿಗಳು ಅಲ್ಲಿ ಮದ್ಯ ಸರಬರಾಜು ನಡೆಯುತ್ತಿದ್ದುದನ್ನು ಗಮನಿಸಿ ಇನ್ನು ಮುಂದೆ ಮದ್ಯ ಸರಬರಾಜು ಮಾಡುವಂತಿಲ್ಲ ಎಂದು ನೋಟಿಸ್ ಕೂಡ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಕೆಫೆ ಅಬಾಧಿತವಾಗಿ ಮುದುವರಿದಿತ್ತು. ಅಂದರೆ ಏನಾಗಿರಬಹುದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಸಿಲಿಂಡರ್ ಸೋರಿಕೆ?: ರೆಸ್ಟೋರೆಂಟ್‌ನಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಸಿಲಿಂಡರ್ ಸೋರಿಕೆಯಾಗಿತ್ತೇ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ಹೋಟೆಲ್ ನಡೆಸಬೇಕಾದಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕು.

ಆದರೆ, ಮಾರಾ ಕೆಫೆಯಲ್ಲಿ ಇದನ್ನು ಗಾಳಿಗೆ ತೂರಲಾಗಿತ್ತು. ದೊಡ್ಡ ಹೋಟೆಲ್ ಅಥವಾ ರೆಸ್ಟೋರೆಂಟ್ಗಳಲ್ಲಿ ಅಡುಗೆ ಅನಿಲ ಇಡಿಸಲು ಪ್ರತ್ಯೇಕ ಸ್ಥಳವನ್ನು ನಿಗದಿಗೊಳಿಸಬೇಕು. ಅಡುಗೆ ಮನೆಯ ಒಳಭಾಗದಲ್ಲಿ ಸಿಲಿಂಡರ್ ಇಡಬಾರದು ಎಂಬ ನಿಯಮವಿದೆ. ಈ ಸಂಬಂಧ ಅವರು ಅಗ್ನಿಶಾಮಕ ದಳದ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅಲ್ಲಿನ ಅಧಿಕಾರಿಗಳು ಸ್ಥಳ  ಪರಿಶೀಲನೆ ನಡೆಸಬೇಕು. ನಂತರ ಅವರಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು.

ಈ ಯಾವುದೇ ನಿಯಮವನ್ನೂ ಮಾರಾ ಕೆಫೆ ಮಾಲೀಕರು ಅನುಸರಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆಯ ನಂತರವಾದರೂ ಅಬಕಾರಿ, ನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿ ಆರಂಭವಾಗುವ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸುರಕ್ಷತೆಗೆ ಒತ್ತು ನೀಡಲಾಗಿದೆಯೇ ಎಂಬುದನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಬೇಕು. ಇಲ್ಲವಾದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.

” ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್ ರೆಸ್ಟೋ ಪಬ್ ಮತ್ತು ಮಾಸಾಯಿ ಮಾರಾ ಕೆಫೆಯ ಮಾಲೀಕ ಎನ್ನಲಾಗಿರುವ ಪುನೀತ್ ಪ್ರೀತಂ ಕೂಡ ಬೆಂಕಿ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಶ್ಚರ್ಯವೆಂದರೆ, ಇವುಗಳ ರಹದಾರಿ ಪುನೀತ್ ಹೆಸರಿನಲ್ಲಿ ಇಲ್ಲ. ಅದು ಶ್ರೀನಿವಾಸ್ ಎಂಬವರ ಹೆಸರಿನಲ್ಲಿ ಇದೆ. ಅಂದರೆ ಶ್ರೀನಿವಾಸ್ ಅವರ ಹೆಸರಿನ ರಹದಾರಿಯಲ್ಲಿ ಪುನೀತ್ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದರಾ ಎಂಬುದೀಗ ಚರ್ಚೆಗೆ ಗ್ರಾಸವಾಗಿದೆ.”

” ಸಣ್ಣಪುಟ್ಟ ಬೀಡಿ, ಸಿಗರೇಟು ಮಾರಾಟ ಮಾಡುವ ಮಳಿಗೆಗೆ ತೆರಳಿ ಟ್ರೇಡ್ ಲೈಸನ್ಸ್ ಮಾಡಿಸಿ ಎಂದು ನಗರಪಾಲಿಕೆ ಅಧಿಕಾರಿಗಳು ಬೊಬ್ಬಿಡುತ್ತಾರೆ. ಆದರೆ, ದೊಡ್ಡಮಟ್ಟದ ರೆಸ್ಟೋರೆಂಟ್ ಯಾವುದೇ ರಹದಾರಿ ಇಲ್ಲದೆ ನಡೆಯುತ್ತಿದೆ ಎಂಬುದು ಅಧಿಕಾರಿಗಳಿಗೆ ಗೊತ್ತಾಗಿಲ್ಲವೆಂದರೆ ನಂಬುವುದು ಸಾಧ್ಯವೇ?”

 

 

Tags:
error: Content is protected !!